Advertisement

ಲೀಲಾವತಿ ಬೈಪಡಿತ್ತಾಯರಿಗೆ ವನಜ ರಂಗಮನೆ ಪ್ರಶಸ್ತಿ

06:01 PM Aug 22, 2019 | Team Udayavani |

ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಪ್ರಥಮ ವೃತ್ತಿಪರ ಯಕ್ಷ ಭಾಗವತೆ ಲೀಲಾವತಿ ಬೈಪಡಿತ್ತಾಯ ಅವರಿಗೆ ಈ ಬಾರಿಯ ವನಜ ರಂಗಮನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

Advertisement

ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ವತಿಯಿಂದ ರಂಗನಿರ್ದೇಶಕ ಜೀವನ್‌ ರಾಂ ಸುಳ್ಯ ಇವರ ಮಾತೃಶ್ರೀ ವನಜಾಕ್ಷಿ ಜಯರಾಮ ಇವರ ಸ್ಮರಣಾರ್ಥ ಯಕ್ಷಕಲೆಯನ್ನು ನಿಷ್ಠೆಯಿಂದ ಪೂಜಿಸುವ ಕಲಾವಿದರಿಗೆ ನೀಡುವ ವನಜ ರಂಗಮನೆ ಪ್ರಶಸ್ತಿ ಇದಾಗಿದೆ.

ಆ. 25 ರಂದು ಸುಳ್ಯದ ರಂಗಮನೆಯಲ್ಲಿ ನಡೆಯುವ ಯಕ್ಷ ಸಂಭ್ರಮದ ಸಂದರ್ಭದಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ನಂಬಿಕೆಗಳ ಕಟ್ಟಳೆಗಳನ್ನೆಲ್ಲಾ ಮೆಟ್ಟಿ ನಿಂತು, ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತರಾಗಿ ಮೆರೆದ ಲೀಲಾವತಿ ಬೈಪಾಡಿತ್ತಾಯ ಏಕೈಕ ವೃತ್ತಿಪರ ಮಹಿಳಾ ಭಾಗವತರು ಎಂಬ ಪಟ್ಟ ಅಲಂಕರಿಸಿಕೊಂಡವರು.

ಸುಬ್ರಹ್ಮಣ್ಯ , ಪುತ್ತೂರು , ಕದ್ರಿ , ಕರ್ನಾಟಕ , ಅರುವ (ಅಳದಂಗಡಿ), ಬಪ್ಪನಾಡು , ಕುಂಬಳೆ, ತಲಕಳ ಮೇಳ ಮುಂತಾಗಿ ಸತತವಾಗಿ ಇಪ್ಪತ್ತು ವರ್ಷಗಳ ಕಾಲ ಡೇರೆ ಮೇಳಗಳಲ್ಲಿಯೂ, ಬಯಲಾಟದ ಮೇಳಗಳಲ್ಲಿಯೂ ಪತಿ ಹರಿ ನಾರಾಯಣ ಬೈಪಡಿತ್ತಾಯರೊಂದಿಗೆ ವೃತ್ತಿಪರರಾಗಿ ತಿರುಗಾಟ ಮಾಡಿದ ಇವರು ಅದೆಷ್ಟೋ ಮಹಾನ್‌ ಕಲಾವಿದರನ್ನು ಕುಣಿಸಿದವರು.

ಎಂಭತ್ತರ ದಶಕದಲ್ಲಿ ಅರುವ ನಾರಾಯಣ ಶೆಟ್ಟರು ಕಟ್ಟಿದ ಅಳದಂಗಡಿ ಮೇಳದಲ್ಲಿ ಪ್ರಧಾನ ಭಾಗವತರಾಗಿ ಮೆರೆದರು.ಗಂಡಸರೇ ಇರುವ ಯಕ್ಷಗಾನ ಕ್ಷೇತ್ರದಲ್ಲಿ ಕಾಲಿಟ್ಟ ಮೊದಲ ಮಹಿಳೆಯಾಗಿ ಗಂಡಸರಿಗೇ ಮೀಸಲಾಗಿದ್ದ ಭಾಗವತಿಕೆಯಲ್ಲಿ ಯಕ್ಷಗಾನಕ್ಕೆ ಹೆಣ್ಣು ಕಂಠವೂ ಹೊಂದುತ್ತದೆ ಎಂದು ಸಾಧಿಸಿ ತೋರಿಸಿದವರು. ರಾತ್ರಿಯಿಡೀ ನಿದ್ದೆಗೆಟ್ಟು ಊರಿಂದೂರಿಗೆ ಮೇಳವು ಹೋದಲ್ಲೆಲ್ಲಾ ತಿರುಗಾಟ ಮಾಡುವ, ಸಹ ಭಾಗವತರೇನಾದರೂ ಕೈಕೊಟ್ಟರೆ, ಇಡೀ ರಾತ್ರಿ ನಿದ್ದೆ ಬಿಟ್ಟು ಇಡೀ ಆಟವನ್ನು ಆಡಿಸಿದ ಕೀರ್ತಿ ಇವರದ್ದಾಗಿದೆ.

Advertisement

ನೂರಾರು ಪ್ರಶಸ್ತಿ
ಲೋಪವಿಲ್ಲದ ಸಾಹಿತ್ಯ ಶುದ್ಧಿ, ಭಾಷಾ ಶುದ್ಧಿ,ಪುರಾಣದ ಬಗೆಗಿನ ಅಪಾರ ಜ್ಞಾನ,ಭಾವಪೂರ್ಣ ಭಾಗವತಿಕೆಯಿಂದಾಗಿ ಅವರದ್ದೇ ಆದ ಲಕ್ಷಾಂತರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡವರು.

45 ವರ್ಷಗಳಿಂದ ಸುದೀರ್ಘ‌ವಾಗಿ ಯಕ್ಷಗಾನ ಭಾಗವತಿಕೆಯಲ್ಲಿ ತೊಡಗಿಸಿಕೊಂಡ ಇವರು, ಈಗಲೂ ಅಲ್ಲಲ್ಲಿ ಭಾಗವತಿಕೆ ತರಗತಿಗಳನ್ನು ನಡೆಸುವ ಮೂಲಕ ನೂರಾರು ಶಿಷ್ಯ ವೃಂದವನ್ನು ಹೊಂದಿದ್ದಾರೆ.

ಗಂಗಾಧರ ಮಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next