Advertisement

12 ಲೀ.ನಿಂದ 3 ಸಾವಿರ ಲೀ. ಹಾಲು ಸಂಗ್ರಹಣೆಯ ಸಾಧನೆ

08:33 PM Feb 13, 2020 | Team Udayavani |

ವಾಮದಪದವು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಪಾರದರ್ಶಕ ಸೇವೆಗಾಗಿ ಸ್ವಯಂಚಾಲಿತ ಹಾಲು ಸಂಗ್ರಹಣೆ ವ್ಯವಸ್ಥೆ ಇದೆ. ಸಂಚಾರಿ ಹಾಲು ಸಂಗ್ರಹಣೆ ಮೂಲಕ ಹೈನುಗಾರರ ಮನೆ ಬಾಗಿಲಿನಿಂದ ತಾನೇ ಹಾಲು ಸಂಗ್ರಹಿಸುತ್ತಿದೆ.

Advertisement

ಪುಂಜಾಲಕಟ್ಟೆ: ಬಂಟ್ವಾಳ ತಾ|ನ ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯ ವಾಮದ ಪದವು ಗ್ರಾಮೀಣ ಪ್ರದೇಶವಾದರೂ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಕೃಷಿ ಪ್ರಧಾನ ಗ್ರಾಮವಾದ ಇಲ್ಲಿನ ಅಭಿವೃದ್ಧಿಗೆ ಕೃಷಿಕರಿಗೆ ಹೈನುಗಾರಿಕೆಯೂ ಸಹಕಾರಿಯಾಗಿದೆ.

1988ರ ನ. 11ರಂದು ಸ್ಥಾಪನೆಗೊಂಡ ವಾಮದಪದವು ಹಾಲು ಉತ್ಪಾದಕರ ಸಹಕಾರ ಸಂಘ ಪ್ರಸ್ತುತ ಸ್ಥಾಪಕಾಧ್ಯಕ್ಷ ಎಚ್‌. ಗೋಪಾಲ ಕೃಷ್ಣ ಚೌಟ ಅವರ ಸಾರಥ್ಯದಲ್ಲಿ ಮುನ್ನಡೆಯುತ್ತಿದೆ. ಆರಂಭದಲ್ಲಿ 12 ಲೀ. ಹಾಲು ಸಂಗ್ರಹಣೆಯಿಂದ ತೊಡಗಿ ಇಂದು 568 ಸದಸ್ಯರಿಂದ 3 ಸಾವಿರ ಲೀ. ಹಾಲು ಸಂಗ್ರಹಣೆ ನಡೆಸುತ್ತಿರುವುದು ಸಾಧನೆಯಾಗಿದೆ.

ಸಾಂಧ್ರ ಶೀತಲೀಕರಣ ಘಟಕ
5 ಸಾವಿರ ಲೀ. ಸಾಮರ್ಥ್ಯದ ಸಾಂಧ್ರ ಶೀತಲೀಕರಣ ಘಟಕ ಹೊಂದಿದ್ದು, ಪಿಲಾತಬೆಟ್ಟು, ನಯನಾಡು, ಇರ್ವತ್ತೂರು ಸಂಘಗಳಿಂದ ಹಾಲು ಸಂಗ್ರಹಿಸಲಾಗುತ್ತಿದೆ. ಪಾರದರ್ಶಕ ಸೇವೆಗಾಗಿ ಸ್ವಯಂಚಾಲಿತ ಹಾಲು ಸಂಗ್ರಹಣೆ ವ್ಯವಸ್ಥೆ ಇದೆ. ಸಂಘದ ಸದಸ್ಯರ ಸಾಧಕ ಮಕ್ಕಳನ್ನು ವಾರ್ಷಿಕ ಮಹಾಸಭೆಯಲ್ಲಿ ಸಮ್ಮಾನಿಸಲಾಗುತ್ತಿದೆ. ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಜಾನುವಾರು ಪ್ರದರ್ಶನ, ಮಾಹಿತಿ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಹಾಲು ಒಕ್ಕೂಟದ ಮತ್ತು ಸರಕಾರಿ ವಿವಿಧ ಅನುದಾನಗಳನ್ನು ಒದಗಿಸಿಕೊಡ ಲಾಗುತ್ತಿದೆ.

ಸಂಘವು 5 ಸೆಂಟ್ಸ್‌ ಸ್ಥಳ ಹಾಗೂ ಸ್ವಂತ ಕಟ್ಟಡ ಹೊಂದಿದೆ. 2008ರಲ್ಲಿ ಕಟ್ಟಡದ ಮೇಲಂತಸ್ತಿನಲ್ಲಿ ಸಭಾಂಗಣ ನಿರ್ಮಿಸ ಲಾಗಿದೆ.ನೀರಿಗಾಗಿ ಕೊಳವೆ ಬಾವಿ ವ್ಯವಸ್ಥೆ ಇದೆ. 2013ರಲ್ಲಿ ಬೆಳ್ಳಿಹಬ್ಬವನ್ನು ಆಚರಿಸಲಾಗಿದ್ದು, ನಿರಂತರ 25 ವರ್ಷ ಹಾಲು ಪೂರೈಸಿದ ಮತ್ತು ಅತೀ ಹೆಚ್ಚು ಹಾಲು ಪೂರೈಸುತ್ತಿರುವ ಸದಸ್ಯರನ್ನು ಗೌರವಿಸಲಾಗಿದೆ.

Advertisement

ಸಂಚಾರಿ ಹಾಲು ಸಂಗ್ರಹಣೆ
ಇತರ ಸಂಘಗಳಲ್ಲಿ ಹೈನುಗಾರರು ಸಂಘಕ್ಕೆ ಹಾಲು ಸರಬರಾಜು ನಡೆಸಿದರೆ, ವಾಮದ ಪದವು ಸಂಘ ಸಂಚಾರಿ ಹಾಲು ಸಂಗ್ರಹಣೆ ಮೂಲಕ ಹೈನುಗಾರರ ಮನೆ ಬಾಗಿಲಿನಿಂದ ತಾನೇ ಹಾಲು ಸಂಗ್ರಹಿಸುತ್ತಿದೆ. ಪ್ರತಿದಿನ 2 ಸರದಿಯಲ್ಲಿ ಸಂಚಾರಿ ಹಾಲು ಸಂಗ್ರಹಣೆ ವಾಹನ ಮೂಲಕ ಸುಮಾರು 50 ಕಿ.ಮೀ. ದೂರ ಸಂಚರಿಸಿ ರೈತರ ಮನೆಗಳಿಂದ ಹಾಲು ಸಂಗ್ರಹಿಸಲಾಗುತ್ತಿದೆ.

ಪ್ರಶಸ್ತಿಗಳು
ದ.ಕ. ಹಾಲು ಒಕ್ಕೂಟದಿಂದ 2 ವರ್ಷ ಜಿಲ್ಲಾ ಉತ್ತಮ ಸಂಘ ಪ್ರಶಸ್ತಿ, 16 ವರ್ಷ ತಾಲೂಕು ಉತ್ತಮ ಸಂಘ ಪ್ರಶಸ್ತಿ, ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ 2 ವರ್ಷ ಪ್ರಶಸ್ತಿ, 2 ವರ್ಷ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಪ್ರಶಸ್ತಿ ಗಳಿಸಿದೆ. ಪ್ರಗತಿಪರ ಹೈನುಗಾರ ವಿನಾಯಕ ಪ್ರಭು ಆಲದಪದವು ಅವರು ಪತ್ರಿನಿತ್ಯ 300 ಲೀ. ಹಾಲು ವಿತರಿಸುತ್ತಿದ್ದು, 2 ಬಾರಿ ಜಿಲ್ಲಾ ಉತ್ತಮ ಹೈನುಗಾರ ಪ್ರಶಸ್ತಿ ಪಡೆದಿದ್ದಾರೆ.

ವಾಮದಪದವು ಪರಿಸರದ ಹೈನುಗಾರರಿಗೆ ಉತ್ತೇಜನ, ಪ್ರೋತ್ಸಾಹ ನೀಡಲಾಗುತ್ತಿದ್ದು, ಸವಲತ್ತುಗಳನ್ನು ಒದಗಿಸುವಲ್ಲಿ ಮುತುವರ್ಜಿ ವಹಿಸಲಾಗುತ್ತಿದೆ. ಸಂಘ ಅಭಿವೃದ್ಧಿಯಲ್ಲಿ ಮುನ್ನಡೆಯುತ್ತಿದ್ದು, ಮುಂದಕ್ಕೆ 5 ಸಾವಿರ ಲೀ. ಸಂಗ್ರಹಣೆಯ ಗುರಿ ಹೊಂದಿದೆ.
– ಎಚ್‌.ಗೋಪಾಲಕೃಷ್ಣ ಚೌಟ,ಅಧ್ಯಕ್ಷರು

ಅಧ್ಯಕ್ಷರು
1988ರಿಂದ ಎಚ್‌. ಗೋಪಾಲಕೃಷ್ಣ ಚೌಟ ಅವರು ಅಧ್ಯಕ್ಷರಾಗಿದ್ದಾರೆ. ಈ ಹಿಂದೆ ವಸಂತ ಶೆಟ್ಟಿ. ವಾಸುದೇವ ಭಟ್‌, ಜನಾರ್ದನ ಸಫಲ್ಯ ಅಧ್ಯಕ್ಷರಾಗಿದ್ದರು.
ಕಾರ್ಯನಿರ್ವಹಣಾಧಿಕಾರಿ
ಸಂಘದ ಆರಂಭದಿಂದ ಇದುವರೆಗೂ ಕಾರ್ಯನಿರ್ವಹಣಾಧಿಕಾರಿಯಾಗಿ ನಾರಾ ಯಣ ಶೆಟ್ಟಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಪ್ರಸ್ತುತ ಯಶೋಧರ ಅವರು ಹಾಲು ಪರೀಕ್ಷಕರಾಗಿ, ಗುರುಪ್ರಸಾದ್‌ ಲೆಕ್ಕಿಗರಾಗಿ, ಹರಿಶ್ಚಂದ್ರ ಶೆಟ್ಟಿ ಮತ್ತು ಲೀಲಾ ಅವರು ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

– ರತ್ನದೇವ್‌ ಪುಂಜಾಲಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next