Advertisement

ಮೌಲ್ಯಗಳು ಬದುಕಿಗೆ ಆಧಾರ

01:46 PM Jul 03, 2021 | Team Udayavani |

ಮೌಲ್ಯಗಳು ಬುದುಕಿನ ಆಧಾರ ಸ್ತಂಭಗಳಿದ್ದಂತೆ. ಹಾಗೇ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ ಕೂಡ ಹೌದು.  ಮಾನವೀಯ ಮೌಲ್ಯಗಳು ಬದುಕಿಗೆ ಅವಶ್ಯವಾಗಿದ್ದು, ಯುವಜನರು ಅವುಗಳನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿರಬೇಕು. ಮೌಲ್ಯಗಳಿಲ್ಲದ ಜೀವನ ವ್ಯರ್ಥ. ಅವುಗಳನ್ನು ಅಳವಡಿಸಿಕೊಂಡಾಗ ಜೀವನ ಸಾರ್ಥಕಗೊಳ್ಳುವುದು.

Advertisement

ನಾವು ಜೀವನದಲ್ಲಿ ಅಳವಡಿಸಿಕೊಳ್ಳುವ ನೀತಿ-ನಿಯಮ, ಆದರ್ಶ, ಶಿಸ್ತು, ಸಂಸ್ಕಾರ, ಮಾನವೀಯ ಗುಣ, ಸದಾಚಾರ, ಉತ್ತಮ ನಡವಳಿಕೆಗಳೇ ಮೌಲ್ಯಗಳಾಗಿವೆ. ಅನೇಕ ಮೌಲ್ಯಗಳ ಕುರಿತು ನಮ್ಮ ಗುರು-ಹಿರಿಯರಿಂದ ತಿಳಿದುಕೊಂಡಿರುತ್ತೇವೆ. ಆದರೆ ಜೀವನದಲ್ಲಿ ಈ ಮೌಲ್ಯಗಳನ್ನು ಎಷ್ಟರ ಮಟ್ಟಿಗೆ ಅನುಸರಿಸುತ್ತೇವೆ ಎನ್ನುವುದು ಮುಖ್ಯ.

ನ್ಯಾಯ ಮತ್ತು ಪ್ರಾಮಾಣಿಕತನಕ್ಕಿರುವ ಪ್ರಾಧಾನ್ಯ ಹಾಗೂ ವ್ಯವಹಾರದಲ್ಲಿ ಅವುಗಳ ಬಳಕೆ ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತವೆ. ಮೌಲ್ಯಗಳು ಎಲ್ಲ ಜೀವಿಗಳಲ್ಲಿ ಅಂತರ್ಗತವಾಗಿದ್ದು, ಅವರ ನೈಜ ಸ್ವಭಾವವೇ ಆಗಿರುತ್ತವೆ. ವ್ಯಕ್ತಿಯ ಜೀವನ, ಸಮಾಜ, ಅರ್ಥ ವ್ಯವಸ್ಥೆ, ರಾಜಕಾರಣಗಳೆಲ್ಲವೂ ಮೌಲ್ಯಾಧಾರಿತವಾಗಿ ರಬೇಕು. ಮೌಲ್ಯಗಳು ಬದುಕನ್ನು ಸುಂದರಗೊಳಿಸುತ್ತವೆ. ಜತೆಗೆ ವ್ಯಕ್ತಿಯ ಗೌರವ, ಘನತೆ ವೃದ್ಧಿಸಿ ಚಿನ್ನದಂತೆ ಪರಿಶುದ್ಧಗೊಳ್ಳುವುದು.

ವರ್ತನೆಯ ನೈತಿಕತೆಗೆ ಸಂಬಂಧಿಸಿದಂತೆ ಯಾವುದು ಸರಿ; ಯಾವುದು ತಪ್ಪು, ಯಾವುದಕ್ಕೆ ಎಷ್ಟು ಪ್ರಾಮುಖ್ಯ ನೀಡಬೇಕು, ಜೀವನದ ಗುರಿ ಏನಾಗಿರಬೇಕು ಮುಂತಾದವುಗಳನ್ನು ನಿರ್ಧರಿಸುವುದರಲ್ಲಿ ನಾವು ಒಪ್ಪಿಕೊಂಡಿರುವ ಮೌಲ್ಯಗಳು ನಿರ್ಣಾಯಕ ಪಾತ್ರ ವಹಿಸುತ್ತವೆ.

ನಾವು ಸುಖವಾಗಿದ್ದೇವೋ ಇಲ್ಲವೋ ಎನ್ನು ವುದನ್ನು ನಿರ್ಧರಿ ಸುವುದು ನಮ್ಮ ವೈಯಕ್ತಿಕ ಮೌಲ್ಯಗಳು. ಅಷ್ಟೇ ಅಲ್ಲದೆ, ನಮ್ಮನ್ನು ಮತ್ತು ನಮ್ಮ ಸ್ನೇಹಿತರನ್ನೂ ಇತರರು ಅಳೆಯುವುದು ವೈಯಕ್ತಿಕ ಮೌಲ್ಯಗಳ ಆಧಾರದಿಂದಲೇ. ನಮ್ಮ ನೆಲೆ ಮತ್ತು ಒಲವುಗಳನ್ನು ತಿಳಿಯಪಡಿಸುವುದು ಈ ಮೌಲ್ಯಗಳು. ವ್ಯಕ್ತಿಗತವಾದ ವಿಶೇಷವೇ ಮೌಲ್ಯಗಳು ಎಂದು ಇದರಿಂದ ವ್ಯಕ್ತವಾಗುತ್ತವೆ.

Advertisement

ಮೌಲ್ಯಗಳನ್ನು ನಾವು ಅಂತರ್ಗತ ಮಾಡಿಕೊಂಡಾಗ ಅದು ಶಕ್ತಿಯುತವಾಗುವುದು. ಅನುಭವವು ನಾವು ನಂಬಿದ ಮೌಲ್ಯಗಳನ್ನು ದೃಢಪಡಿಸುತ್ತಾ ಹೋಗುತ್ತದೆ.

ಮೌಲ್ಯವರ್ಧನೆ ಎಂದರೆ, ವ್ಯಕ್ತಿಗಳಲ್ಲಿ ನೈತಿಕ ಸದ್ಗುಣಗಳಾದ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ, ಸಹನೆ, ಅನುಕಂಪ, ಸತ್ಯ, ನ್ಯಾಯ, ಸಚ್ಚಾರಿತ್ರÂ, ಅಹಿಂಸೆ, ಸಹಕಾರ, ಸಹೋದರತ್ವ, ಸಹಿಷ್ಣುತಾಭಾವ ಇವೇ ಮೊದಲಾದ ಗುಣಗಳನ್ನು ಬೆಳೆಸುವುದಾಗಿದೆ.

ಆಸೆ-ಆಕಾಂಕ್ಷೆ ರಹಿತ ಗುಣ, ಸರಳ ಶೈಲಿಯ ಜೀವನ, ಬಡವರಿಗೆ ಸಹಾಯ ಮಾಡುವಂತಹ ಮೌಲ್ಯಗಳನ್ನು ಹೊಂದಿದ್ದ ಕಾರಣದಿಂದ ಗಾಂಧೀಜಿ, ಡಾ| ಎ.ಪಿ.ಜೆ. ಅಬ್ದುಲ್‌ ಕಲಾಂ, ಮದರ್‌ ಥೆರೆಸಾ ಅವರ ಆದರ್ಶಗಳು ಇಂದಿಗೂ ಅನುಕರಣೀಯ ಅನಿಸಿವೆ. ಎಲ್ಲರೂ ಅಂತಹ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು.

ಡಾ| ರಾಧಾಕೃಷ್ಣನ್‌ ಅವರ ಪ್ರಕಾರ, ಮಾನವ ಹಕ್ಕಿಯಂತೆ ಹಾರಾಡುವುದನ್ನು, ಮೀನಿನಂತೆ ಈಜುವುದನ್ನು ಕಲಿತಿದ್ದಾನೆ. ಆದರೆ, ಮೌಲ್ಯಗಳನ್ನು ಅಳವಡಿಸಿಕೊಂಡು ಮಾನವನಾಗಿ ಬಾಳುವುದನ್ನು ಮಾತ್ರ ಕಲಿಯಲಿಲ್ಲ! ಹಾಗಾಗಿ ಇಂದು ವೈಜ್ಞಾನಿಕವಾಗಿ ನಾವು ಎಷ್ಟೇ ಪ್ರಗತಿ ಹೊಂದಿದ್ದರೂ ಸುಖ-ಶಾಂತಿ, ನೆಮ್ಮದಿಗಳಿಲ್ಲದೆ ಹಲವಾರು ಸಮಸ್ಯೆಗಳನ್ನು  ಎದುರಿಸುವಂತಾಗಿದೆ. ಪ್ರತಿಯೊಬ್ಬನ ವರ್ತನೆ, ವ್ಯಕ್ತಿತ್ವದಿಂದ ಆತನ ಜೀವನ ಮೌಲ್ಯ ನಿರ್ಧರಿಸಲಾಗುತ್ತದೆ ಅಥವಾ ವ್ಯಕ್ತ ವಾಗುತ್ತದೆ. ನಾವು ಮೌಲ್ಯಗಳನ್ನು ಆಚರಣೆಗೆ ತರಬೇಕು. ಆಗ ಮಾತ್ರ ಜನರು ನಮ್ಮನ್ನು ಗುರುತಿಸುತ್ತಾರೆ ಮತ್ತು ಅನು ಸರಿಸುತ್ತಾರೆ. ಮೌಲ್ಯಗಳು ನಮ್ಮಲ್ಲಿ ಸಕಾರಾತ್ಮಕ ಶಕ್ತಿ ಬೆಳೆಯಲು ಮತ್ತು ದುರಭ್ಯಾಸಗಳಿಂದ ದೂರವಿರಲು ಸಹಕಾರಿಯಾಗಿವೆ. ಹಾಗಾಗಿ ಈ ನಿಟ್ಟಿನಲ್ಲಿ ಯುವ ಸಮುದಾಯ ಮುನ್ನಡೆಯುವುದು ಇಂದು ಅತೀ ಅಗತ್ಯವಾಗಿದೆ.

ವಂದನೆಗಳೊಂದಿಗೆ

– ಸಂಪಾದಕ

Advertisement

Udayavani is now on Telegram. Click here to join our channel and stay updated with the latest news.

Next