ದಾವಣಗೆರೆ: ಮಾನವ ಜೀವನಕ್ಕೆ ದಿಕ್ಸೂಚಿಯಾಗಿ ಉದಾತ್ತ ಜೀವನ ಮೌಲ್ಯಗಳನ್ನು ಸಂಪಾದಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವುದೇ ನಿಜವಾದ ಧರ್ಮ. ಅಂತಹ ಧರ್ಮ ಎಂದಿಗೂ ನಾಶವಾಗದು ಎಂದು ರಂಭಾಪುರಿ ಜಗದ್ಗುರು ವೀರ ಪ್ರಸನ್ನ ರೇಣುಕ ಡಾ| ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಪ್ರತಿಪಾದಿಸಿದ್ದಾರೆ.
ರೇಣುಕ ಮಂದಿರದಲ್ಲಿ ಜರುಗುತ್ತಿರುವ 22ನೇ ವರ್ಷದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಜನಜಾಗೃತಿ ಧರ್ಮ ಸಮಾವೇಶದ 4ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಯಾವಾಗಲೂ ನಾಶವಾಗದೇ ಇರುವುದು ಧರ್ಮ. ಧರ್ಮವನ್ನ ನಾಶ ಮಾಡುವ ಶಕ್ತಿ ಯಾರಿಗೂ ಯಾವ ಕಾಲಕ್ಕೂ ಇರುವುದಿಲ್ಲ ಎಂದರು.
ಧರ್ಮ ಎಂದರೆ ಆಚರಣೆ ವಿನ: ಹೊರತು. ಮಾತಲ್ಲ. ತಾನು ಎಲ್ಲರಿಗಾಗಿ ಅನ್ನವುದು ಧರ್ಮ. ಎಲ್ಲರೂ ತನಗಾಗಿ ಅನ್ನುವುದು ಅಧರ್ಮ. ಹೆತ್ತ ತಾಯಿ, ಹೊತ್ತ ನೆಲ ಎಷ್ಟು ಮುಖ್ಯವೋ ಮನುಷ್ಯನಿಗೆ ಧರ್ಮ ಅಷ್ಟೇ ಮುಖ್ಯ. ಮನೆಗೆ ಕಾಂಪೌಂಡ್, ತೋಟಕ್ಕೆ ಬೇಲಿ ಇದ್ದಂತೆ ಮಾನವ ಜೀವನಕ್ಕೆ ಧರ್ಮ ಬೇಲಿ ಇದ್ದಂತೆ ಎಂದು ತಿಳಿಸಿದರು.
ಹಸಿದವರಿಗೆ ಅನ್ನ, ಬಾಯಾರಿದವನಿಗೆ ನೀರು, ಕುರುಡನಿಗೆ ಕಣ್ಣು, ಪಕ್ಷಿಗೆ ರೆಕ್ಕೆ ಇದ್ದ ಹಾಗೆ ಮನುಷ್ಯನಿಗೆ ಧರ್ಮವಿದೆ. ಧರ್ಮದಲ್ಲಿ ಮಾರ್ಗವಿದೆ. ವೇಗವಿಲ್ಲ. ಅದೇ ವಿಜ್ಞಾನದಲ್ಲಿ ವೇಗವಿದೆ. ಮಾರ್ಗವಿಲ್ಲ. ಧರ್ಮ ಮತ್ತು ವಿಜ್ಞಾನ ಸಮನ್ವಯದಿಂದ ಕೆಲಸ ಮಾಡಿದರೆ ಅದ್ಭುತ ಪ್ರಗತಿ ಸಾಧಿಸಲು ಸಾಧ್ಯ. ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರು ವೀರಶೈವ ತತ್ವ ತ್ರಯಗಳಲ್ಲಿ ಸ್ಪಷ್ಟವಾಗಿ ಬೋಧಿಸಿದ್ದಾರೆ ಎಂದು ತಿಳಿಸಿದರು. ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಾನವತೆಯಿಂದ ದೈವತ್ವದ ಕಡೆಗೆ ಕರೆದೊಯ್ಯುವ ಮಾರ್ಗವೇ ಸಂಸ್ಕೃತಿ. ಸಮಾಜದ ಓರೆ ಕೋರೆಗಳನನು ತಿದ್ದಿ ತೀಡಿ ಮುನ್ನಡೆಸುವುದೇ ಧರ್ಮ. ಪೀಠಗಳ ಧ್ಯೇಯವೂ ಅದೇ ಆಗಿದೆ ಎಂದರು.
ನೇತೃತ್ವ ವಹಿಸಿದ್ದ ಎಸಳೂರು ತೆಂಕಲಗೂಡು ಬೃಹನ್ಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಂಪತ್ತಿನಂತೆಯೇ ಸಂಸ್ಕೃತಿಯೂ ಬೆಳೆಯಬೇಕಾಗಿದೆ. ಧರ್ಮ ಸಂಸ್ಕೃತಿ ಸದ್ವಿಚಾರಗಳೂ ಜೀವನದ ಶ್ರೇಯಸ್ಸಿಗೆ ಕಾರಣ. ಗಂಡು ಹೆಣ್ಣು, ಉತ್ಛ ನೀಚ, ಬಡವ ಬಲ್ಲಿದ ಎನ್ನದೇ ವೀರಶೈವ ಧರ್ಮದ ಪಂಚಪೀಠಗಳು ಧರ್ಮ ಸಂಸ್ಕೃತಿ ಕಟ್ಟಿ ಬೆಳೆಸುವ ಮಹತ್ಕಾರ್ಯ ಮಾಡುತ್ತಿವೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಹಿಂದೆಲ್ಲಾ ಆಷಾಢ ಮಾಸ ಒಳ್ಳೆಯದಲ್ಲ. ಅಶುಭ ಎಂಬ ಭಾವನೆ ಬಲವಾಗಿ ಬೇರೂರಿತ್ತು. ಆಷಾಢ ಮಾಸವೂ ಒಳ್ಳೆಯದು. ಅಶುಭವಲ್ಲ ಎಂದು ಹೇಳಿದ ರಂಭಾಪುರಿ ಜಗಗ್ಗುರುಗಳು ಹೇಳಿದ್ದನ್ನು ಕಾರ್ಯರೂಪಕ್ಕೆ ತಂದಿದ್ದಾರೆ ಎನ್ನುವುದಕ್ಕೆ ದಾವಣಗೆರೆಯಲ್ಲಿ 22 ವರ್ಷದಿಂದ ನಡೆಯುತ್ತಿರುವ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ, ಧರ್ಮ ಜಾಗೃತಿ ಸಮಾರಂಭವೇ ಸಾಕ್ಷಿ ಎಂದು ತಿಳಿಸಿದರು. ವೀರಶೈವ ಮಹಾಸಭಾದ ತಾಲೂಕು ಘಟಕ ಅಧ್ಯಕ್ಷ ಜಿ. ಶಿವಯೋಗಪ್ಪ ಮಾತನಾಡಿ, ಇಂದಿನ ಕಾಲದಲ್ಲಿ ಧರ್ಮ ಜನಜಾಗೃತಿ ಸಮಾರಂಭ ಅತ್ಯಗತ್ಯ. ಮದುವೆಯಾಗುವ
ಮುನ್ನ ಲಿಂಗಧಾರಣೆ ಮಾಡಿಕೊಳ್ಳುವ ಅನೇಕರು ಮದುವೆ ನಂತರ ಲಿಂಗವನ್ನು ಬೇರೆ ಕಡೆ ಇಡುವುದನ್ನು ನೋಡಬಹುದು. ಧರ್ಮ, ಆಚರಣೆಯ ಬಗ್ಗೆ ರಂಭಾಪುರಿ ಜಗದ್ಗುರು ಮೂಡಿಸುತ್ತಿರುವ ಜಾಗೃತಿ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಲೆಕ್ಕ ಪರಿಶೋಧಕ ಬಿ.ಜಿ. ಒಡೆಯರ್‌ಗೆ ಸತ್ಪಥ ಸಾಧನಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೂಸ್ನೂರ್ ವಿಶ್ವನಾಥ ಸ್ವಾಗತಿಸಿದರು. ವೀರಣ್ಣ ಶೆಟ್ಟರ್ ನಿರೂಪಿಸಿದರು. ಗದುಗಿನ ಗಾನಭೂಷಣ ವೀರೇಶ ಕಿತ್ತೂರು ಸಂಗಡಿಗರು ಸಂಗೀತ ಸೌರಭ ನಡೆಸಿಕೊಟ್ಟರು.