ಆಧುನಿಕ ಪ್ರಪಂಚದಲ್ಲಿ ನಮಗೆ ಬೇಕಾದ ಎಲ್ಲ ವಸ್ತುಗಳು ಸುಲಭವಾಗಿ ಸಿಗುತ್ತವೆ. ಉಡುವ ಬಟ್ಟೆಯಿಂದ ಹಿಡಿದು, ತಿನ್ನುವ ತಿನಿಸುಗಳವರೆಗೂ ಎಲ್ಲವೂ ನಮ್ಮ ಮನೆ ಬಾಗಿಲಿಗೆ ಬರುವ ತಂತ್ರಜ್ಞಾನವನ್ನು ನಾವು ದಿನನಿತ್ಯ ಬಳಸುತ್ತೇವೆ. ಅಷ್ಟೇ ಯಾಕೆ? ಹಿಂದಿನ ಕಾಲದಲ್ಲಿ ಗುರು-ಹಿರಿಯರು ಸೇರಿ ಒಂದು ಹೆಣ್ಣಿಗೆ ಗಂಡನ್ನು ಹುಡುಕುತ್ತಿರುವ ಸಂಪ್ರದಾಯಗಳು ಇಂದು ಮ್ಯಾಟ್ರಿಮೋನಿಯಂತಹ ಅಪ್ಲಿಕೇಷನ್‌ಗಳಿಂದ ಮರೆತೇ ಹೋಗಿದೆ. ಎಲ್ಲೋ ದೂರದ ಅಪರಿಚಿತರು ಪರಿಚಿತರಾಗುತ್ತಿದ್ದಾರೆ, ಸ್ನೇಹಿತರಾಗುತ್ತಿದ್ದಾರೆ.
ಇದು ಖುಷಿಯ ವಿಚಾರವೇ ಆದರೂ ನಾವು ದೂರದ ಅಪರಿಚಿತರಲ್ಲಿ ಸ್ನೇಹವನ್ನು ಹುಡುಕುವ ಭರದಲ್ಲಿ ಪಕ್ಕದ ಮನೆಯವರ ಪರಿಚಯವನ್ನೇ ಮರೆಯುತ್ತಿದ್ದೇವೆ. ಕೆಲವೊಮ್ಮೆ ದೂರದ ಅಪರಿಚಿತರಿಂದ ಅಪಾಯದ ಸುಳಿಯಲ್ಲಿಯೂ ಸಿಲುಕಿದವರು ಇದ್ದಾರೆ.
ಸಕ್ಕರೆ, ಚಹಾ ಹುಡಿ, ಅಕ್ಕಿಯಂತಹ ದಿನಬಳಕೆಯ ವಸ್ತುಗಳು ಸಿಗುತ್ತಿದ್ದ ಶೆಟ್ಟರ ಅಂಗಡಿ ಇಂದು ಬಿಕೋ ಎನ್ನುತ್ತಿದೆ. ಬದಲಿಗೆ ತಿಂಗಳ ಲೆಕ್ಕಾಚಾರದ ಜೀವನ ಎಂಬ ಹೆಸರಿನಲ್ಲಿ ಮಾಲ್‌ಗಳಿಗೆ ಜೋತು ಬಿದ್ದಿದ್ದೇವೆ. ಒಟ್ಟಾರೆಯಾಗಿ ಮನುಷ್ಯ ಮನುಷ್ಯನನ್ನೇ ಮರೆತು ಕಾಣದ ಲೋಕದ ಗುಲಾಮನಾಗುತ್ತಿದ್ದಾನೆ. ಯಾವುದೇ ಸಂದರ್ಭದಲ್ಲಿ ಸಹಾಯಕ್ಕಾಗಿ ನಿಲ್ಲುತ್ತಿದ್ದ ನೆರೆಮನೆಯವ ಇಂದು ಅವನ ಪಾಡಿಗೆ ಅವನೇ ಕೂತಿದ್ದಾನೆ. ತಪ್ಪು ನಮ್ಮದೇ. ತಂತ್ರಜ್ಞಾನ ಬಂದಿತೇನೋ ಸರಿ, ಅದನ್ನು ಯಾವುದಕ್ಕೆ ಉಪಯೋಗಿಸಬೇಕು, ಯಾವುದಕ್ಕೆ ಉಪಯೋಗಿಸಬಾರದು ಎನ್ನುವುದನ್ನು ನಾವು ತಿಳಿಯಲಿಲ್ಲ, ಮಕ್ಕಳಿಗೂ ತಿಳಿಸಲಿಲ್ಲ. ಹಿಂದಿನ ಕಾಲದಲ್ಲಿ ಒಟ್ಟಿಗೆ ಕುಳಿತು ಊಟ ಮಾಡುತ್ತ ಹರಟೆ ಹೊಡೆದು ಹೊಂದಾಣಿಕೆಯಿಂದ ಇರುತ್ತಿದ್ದ ಗಂಡ ಹೆಂಡತಿ ಇಂದು ಊಟದೊಂದಿಗೆ ಮೊಬೈಲ್ ಹಿಡಿದು ಮೌನವಾಗಿಬಿಟ್ಟಿದ್ದಾರೆ.
ಹೆಂಡತಿಯ ವೈಯಕ್ತಿಕ ಕಷ್ಟಗಳನ್ನು ಅರಿತು ಪ್ರೀತಿಯನ್ನು ನೀಡಿ ಕಾಳಜಿಯನ್ನು ತೋರಿಸಬೇಕಿದ್ದ ಗಂಡನಿಗೆ ಸಮಯವಿಲ್ಲ. ಮುದ್ದು ಮುದ್ದಾಗಿ ಹಠವನ್ನು ಮಾಡಿ ತನಗೆ ಬೇಕಾದುದನ್ನು ಪಡೆದುಕೊಳ್ಳುತ್ತಿದ್ದ ಹೆಂಡತಿಗೆ ಸ್ವಾಭಿಮಾನ ಬಿಡುತ್ತಿಲ್ಲ, ತಪ್ಪು ಯಾರದು?
ವಿಪರ್ಯಾಸವೆಂದರೆ ಅತ್ತಾಗ ಮಗುವನ್ನು ಆಟವಾಡಿಸಿ ನಗಿಸಬೇಕಿದ್ದ ತಾಯಿ ಇಂದು ಮೊಬೈಲ್ ಕೊಟ್ಟು ಸುಮ್ಮನಾಗುತ್ತಿದ್ದಾಳೆ. ಮಗುವಿನ ಮನಸ್ಸನ್ನು ಮೊಬೈಲ್ ಎಂಬುದಕ್ಕೆ ಅಂಟಿಸಿ ಮುಂದಕ್ಕೆ ಮಕ್ಕಳು ಹಾಳಾದರೆ ಹೊಣೆ ಯಾರು?
ಇನ್ನಾದರೂ ಎಚ್ಚೆತುಕೊಳ್ಳೋಣ, ಮನೆಯ ನಾಲ್ಕು ಗೋಡೆಗಳ ಒಳಗೆ ಮೌನಿಯಾಗದೆ ಹೊರಗಿನ ಪ್ರಪಂಚದಲ್ಲಿ ಬೆರೆಯೋಣ. ನಿಮ್ಮ ಸಂಗಾತಿಯ ಮನಸ್ಸಿನಲ್ಲಿ ಪ್ರೀತಿ ಬಿತ್ತುವ ಕೆಲಸ ನೀವೇ ಮಾಡಿ, ಮಕ್ಕಳಿಗೆ ಸ್ನೇಹ ಸಂಬಂಧಗಳ ಮೌಲ್ಯವನ್ನು ತಿಳಿಸಿ. ಮನದಲ್ಲಿ ನಾವು, ನಮ್ಮವರು ಎಂಬ ಭಾವನೆಗಳು ಬೆಳೆದರೆ ಸಕಲವು ಸುಂದರ.
-ಮೋಹನ್ ಕೋಟ್ಯಾನ್ ಪಡ್ಡಂದಡ್ಕ