Advertisement

ಮೌಲ್ಯಾಧಾರಿತ ಶಿಕ್ಷಣ ಅನಿವಾರ್ಯ

09:06 AM Jul 16, 2019 | Suhan S |

ದಾವಣಗೆರೆ: ದಡ್ಡರಿಗಿಂತ ಬುದ್ಧಿವಂತರೇ ಸಮಾಜ ಹಾಳು ಮಾಡುವ ಪ್ರಯತ್ನಕ್ಕೆ ಕೈ ಹಾಕುತ್ತಿದ್ದು, ಪ್ರಸ್ತುತ ಮೌಲ್ಯಾಧಾರಿತ ಶಿಕ್ಷಣದ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್‌ ಹೇಳಿದ್ದಾರೆ.

Advertisement

ಸೋಮವಾರ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2019ರ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ, ಮಾತನಾಡಿದ ಅವರು, ಶಿಕ್ಷಣದ ಮೂಲ ಆಶಯಕ್ಕೆ ಧಕ್ಕೆ ಬರದಂತೆ ರಾಷ್ಟ್ರೀಯ ಶಿಕ್ಷಣ ನೀತಿ ಬದಲಾವಣೆ ಅಗತ್ಯವಿದೆ ಎಂದರು.

ಇಡೀ ರಾಷ್ಟ್ರದ ಸಂಪನ್ಮೂಲವೇ ಶಿಕ್ಷಣವಾಗಿದೆ. ಹಾಗಾಗಿ ಮಹಾನ್‌ ವ್ಯಕ್ತಿಗಳಾದ ಡಾ| ಎ.ಪಿ.ಜೆ. ಅಬ್ದುಲ್ ಕಲಾಂ, ಸರ್‌| ಎಂ. ವಿಶ್ವೇಶ್ವರಾಯ ಅವರಂತಹ ವಿದ್ಯಾರ್ಥಿಗಳನ್ನು ಸೃಷ್ಟಿಸುವ ಸೃಜನಾತ್ಮಕ, ಸಕಾರತ್ಮಕ ಹಾಗೂ ಸಂಪ್ರದಾಯಿಕ ಶಿಕ್ಷಣ ಇಂದಿನ ಅನಿವಾರ್ಯತೆಯಾಗಿದೆ ಎಂದು ಅವರು ಪ್ರತಿಪಾದಿಸಿದರು.

ದೇಶದ ಆಡಳಿತ ವ್ಯವಸ್ಥೆಯಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸಲಿದೆ. 40ಕ್ಕೂ ಹೆಚ್ಚು ಕ್ಷೇತ್ರಗಳು ಶಿಕ್ಷಕರ ಗರಿಷ್ಠ ಪ್ರಭಾವ ಹೊಂದಿವೆ. ಹಾಗಾಗಿ ಮೌಲ್ಯಾಧಾರಿತ ಶಿಕ್ಷಣಕ್ಕೆ ಶಿಕ್ಷಕರ ಮಾರ್ಗದರ್ಶನ ಬೇಕಿದೆ ಎಂದು ಹೇಳಿದರು.

ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಪ್ರೊ| ಎಸ್‌.ಬಿ.ರಂಗನಾಥ್‌ ಮಾತನಾಡಿ, ದೇಶದ ಶಕ್ತಿಯೇ ಶಿಕ್ಷಣವಾಗಿದೆ. ಶಿಕ್ಷಣವೇ ದೇಶದ ಸಂಪತ್ತು. ವೈಶಿಷ್ಟವಾದ ಭಾರತವನ್ನು ಒಗ್ಗೂಡಿಸುವಂತಹ ನಿಟ್ಟಿನಲ್ಲಿ 2019ರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಎಲ್ಲರ ಮಾರ್ಗದರ್ಶನ ಅಗತ್ಯವಿದೆ ಎಂದರು.

Advertisement

ರಾಷ್ಟ್ರೀಯ ಶಿಕ್ಷಣ ನೀತಿಗಳು ನಡೆದು ಬಂದ ದಾರಿ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿದ ಡಯಟ್ ಪ್ರಾಚಾರ್ಯ ಎಚ್.ಕೆ.ಲಿಂಗರಾಜು, ಸ್ವಾತಂತ್ರ್ಯ ನಂತರದ ಭಾರತದಲ್ಲಿ 1968ರ ವರೆಗೆ ಯಾವುದೇ ಶಿಕ್ಷಣ ನೀತಿ ಜಾರಿಗೆ ತಂದಿರಲಿಲ್ಲ. ಈ ಹಿಂದೆ ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಪ್ರಥಮ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಯಿತು ಎಂದು ತಿಳಿಸಿದರಲ್ಲದೆ, ಇಲ್ಲಿವರೆಗೂ ಅನುಷ್ಠಾನಗೊಳಿಸಿದ ಶಿಕ್ಷಣ ನೀತಿಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.

ಬಿಐಇಟಿ ಕಾಲೇಜಿನ ನಿರ್ದೇಶಕ ಡಾ| ವೈ. ವೃಷಭೇಂದ್ರಪ್ಪ, ದಾವಿವಿ ಸಿಂಡಿಕೇಟ್ ಮಾಜಿ ಸದಸ್ಯ ಮುರಿಗೇಂದ್ರಪ್ಪ, ಬಿಐಇಟಿ ಸಿವಿಲ್ ವಿಭಾಗದ ಮುಖ್ಯಸ್ಥ ಎಚ್.ಬಿ.ಅರವಿಂದ್‌, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು, ಶಿಕ್ಷಣ ತಜ್ಞರು, ಇತರರು ಈ ಸಂದರ್ಭದಲ್ಲಿದ್ದರು.

ಡಯಟ್ ಉಪನ್ಯಾಸಕ ಲೇಪಾಕ್ಷಪ್ಪ ಸ್ವಾಗತಿಸಿದರು. ಮಹೇಶ್‌ ದೊಡ್ಡಮನಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next