Advertisement

ವಾಲ್ಮೀಕಿ ಕಾರ್ಯಕರ್ತರ ಕೈಯಲ್ಲಿ ಬುಗುರಿ

10:30 AM May 07, 2018 | Team Udayavani |

ಚಿತ್ತಾಪುರ: ಬಿಜೆಪಿಯಲ್ಲಿ ಹೊಸಬರು ಹಾಗೂ ಹಳಬರು ಎನ್ನುವ ಗೊಂದಲ ಆರಂಭವಾಗಿದ್ದು, ಹಳೆ ಕಾರ್ಯಕರ್ತರು ಮೂಲೆಗುಂಪಾಗಿದ್ದಾರೆ. ಹೊಸದಾಗಿ ಸೇರ್ಪಡೆಗೊಂಡವರು ಅಭ್ಯರ್ಥಿ ವಾಲ್ಮೀಕಿ ನಾಯಕರನ್ನು ಬುಗರಿ ತರ ಆಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಸ್ಥಿತಿಯನ್ನು ಆ ದೇವರೇ ಕಾಪಾಡಬೇಕು ಎಂದು ಐಟಿ-ಬಿಟಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ ವ್ಯಂಗ್ಯವಾಡಿದರು.

Advertisement

ತಾಲೂಕಿನ ಸಾತನೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಾಯಕ ತಮ್ಮ ಮೂರುವರೆ ವರ್ಷದಲ್ಲಿ ಮಾಡಿರುವ ಅಭಿವೃದ್ಧಿ ಹಾಗೂ ನನ್ನ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಜಾಗೃತ ಮತದಾರರು ತುಲನೆ ಮಾಡಿ ಮತದಾನ ಮಾಡುತ್ತಾರೆ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ನಾಯಕರು ಮುಂದಿನ ಸರ್ಕಾರ ನಮ್ಮದೇ ಎಂದು ಕೂಸು ಹುಟ್ಟುವ ಮೊದಲೆ ಕುಲಾವಿ ಹೊಲಿಸಿದಂತೆ ಹಗಲು ಕನಸು ಕಾಣುತ್ತಿದ್ದಾರೆ. ಇದಕ್ಕೆ ರಾಜ್ಯದ ಜನತೆ ಅವಕಾಶ ನೀಡುವುದಿಲ್ಲ ಎಂದರು.

ಅಫಜಲಪುರ ಶಾಸಕ ಮಾಲಿಕಯ್ಯ ಗುತ್ತೇದಾರ ತಮ್ಮ ಕ್ಷೇತ್ರದಲ್ಲಿ ಆರು ಬಾರಿ ಚುನಾಯಿತರಾಗಿದ್ದರೂ ಕೆಲ ಗ್ರಾಮಗಳಿಗೆ ಇನ್ನು ರಸ್ತೆಗಳನ್ನು ನಿರ್ಮಿಸಿಲ್ಲ. ಬಂಡಿಗಳ ಮೂಲಕ ಹೋಗುವ ಪರಿಸ್ಥಿತಿ ಅಲ್ಲಿದೆ. ಆದರೆ ಬೇರೆಯವರ ಕ್ಷೇತ್ರಕ್ಕೆ ಬಂದು ಅಭಿವೃದ್ಧಿ ಆಗಿಲ್ಲ ಎನ್ನುವುದು ನಗೆಪಾಟಲಿಗೀಡಾಗಿದೆ. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಬೇರೆಯವರ ತಟ್ಟೆಯಲ್ಲಿ ನೊಣ ಬಿದ್ದಿದೆ ಎನ್ನುತ್ತಿದ್ದಾರೆ ಎಂದು ವ್ಯಂಗವಾಡಿದರು.

ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ಮರಗೊಳ ಮಾತನಾಡಿ, ಕಾಂಗ್ರೆಸ್‌ನಲ್ಲಿ ವೀರಶೈವ ಲಿಂಗಾಯತರೆ ಇಲ್ಲವೆಂದು ಬಿಜೆಪಿಯವರು ಹೇಳಿದ್ದರು. ಕಾಂಗ್ರೆಸ್‌ ಸಭೆಯಲ್ಲಿ ಮೂರು ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ವೀರಶೈವ
ಲಿಂಗಾಯತರು ಭಾಗವಹಿಸಿದ್ದು ಬಿಜೆಪಿಯವರಿಗೆ ಚಳಿ ಜ್ವರ ಆರಂಭವಾಗಿದೆ ಎಂದರು.

Advertisement

ಚಿತ್ತಾಪುರ ಮತಕ್ಷೇತ್ರದಲ್ಲಿನ ಪುರಸಭೆ, ತಾಪಂ, ಜಿಪಂ, ರಾಯಚೂರ ಕೃಷಿ ವಿಶ್ವವಿದ್ಯಾಲಯ ನಿರ್ದೇಶಕರು, ಎಪಿಎಂಸಿ ಸೇರಿದಂತೆ 16 ರಂಗಗಳಲ್ಲಿ ವೀರಶೈವ ಲಿಂಗಾಯತರಿಗೆ ಕಾಂಗ್ರೆಸ್‌ನಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಅಧಿ ಕಾರ ನೀಡಿದ್ದಾರೆ. ಈ ಕಾರ್ಯವನ್ನು ಪಕ್ಷ ಬೇಧ ಬಿಟ್ಟು ಪ್ರತಿಯೊಬ್ಬರು ಶ್ಲಾಘಿಸಬೇಕು ಎಂದರು.

ಬ್ಲಾಕ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಜೆಸ್ಕಾಂ ನಿರ್ದೇಶಕ ಮುಕ್ತಾರ ಪಟೇಲ, ವಿಜಯಕುಮಾರ ಸಾತನೂರ ಮಾತನಾಡಿದರು.
 
ಜಿಪಂ ಸದಸ್ಯರಾದ ಶಿವರುದ್ರ ಭೀಣಿ, ಶಿವಾನಂದ ಪಾಟೀಲ, ಶೀಲಾ ಕಾಶಿ, ಚಂದ್ರಶೇಖರ ಕಾಶಿ, ಮುಖಂಡರಾದ ಸಾಹೇಬಗೌಡ ಪೊಲೀಸ್‌ ಪಾಟೀಲ, ಎಸ್‌.ಎ. ಪಾಟೀಲ, ಎಸ್‌.ಎಸ್‌. ಪಾಟೀಲ, ಜಗದೀಶ ಸಿಂಧೆ, ಭೀಮರಾಯ ಕೊಂಚೂರ, ಚನ್ನಪ್ಪ ಸಾಹುಕಾರ, ಮೌನೇಶ ಕರದಾಳ, ಶಿವಮೂರ್ತಿ ಶಾಸ್ರೀ, ಬಸವರಾಜ ಹೊನ್ನಾಳ್ಳ, ಅಜೀತ ಪಾಟೀಲ ಇದ್ದರು. ಬಸಯ್ಯ ಸ್ವಾಮಿ ಸ್ವಾಗತಿಸಿದರು, ಶಾಂತಣ್ಣ ಚಾಳಿಕಾರ ನಿರೂಪಿಸಿ, ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next