Advertisement

Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ

03:02 AM Dec 25, 2024 | Team Udayavani |

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಿಂದ ಅಕ್ರಮವಾಗಿ 95 ಕೋಟಿ ರೂ. ವರ್ಗಾಯಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ನಿಗದಿಗೂ ಮುನ್ನ ವಾದ ಆಲಿಸುವ ಸಂಬಂಧ ಸಕ್ಷಮ ನ್ಯಾಯಾಲಯವು ವಿಚಾರಣೆಗೆ ಅರ್ಜಿಯನ್ನು ನಿಗದಿಗೊಳಿಸಿದರೆ ಹೈಕೋರ್ಟ್‌ ಮೊರೆ ಹೋಗಲು ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಅವಕಾಶ ನೀಡಲಾಗಿದೆ.

Advertisement

ಅಕ್ರಮ ಹಣ ವರ್ಗಾವಣೆ ಕಾಯ್ದೆಯ ಸೆಕ್ಷನ್‌ 4ರ ಅಡಿ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದಗೊಳಿಸುವಂತೆ ಕೋರಿ ಬಿ. ನಾಗೇಂದ್ರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ವಿಚಾರಣೆ ವೇಳೆ ನಾಗೇಂದ್ರ ಪರ ಹಿರಿಯ ವಕೀಲ ಸಿ.ವಿ.ನಾಗೇಶ್‌ ವಾದ ಮಂಡಿಸಿ, ಪ್ರಕರಣವನ್ನು ವಿಚಾರಣೆಗೆ ಪರಿಗಣಿಸುವ ಸಂಬಂಧ ಸಕ್ಷಮ ನ್ಯಾಯಾಲಯ ಅನುಸರಿಸಿರುವ ನೀತಿಯು ದೋಷಪೂರಿತವಾಗಿದೆ ಎಂದು ಹೇಳಿದರು.

ಜಾರಿ ನಿರ್ದೇಶನಾಲಯದ ಪರ ವಕೀಲ ಪಿ. ಪ್ರಸನ್ನಕುಮಾರ್‌, ಅರ್ಜಿ ಸಂಬಂಧ ಶೀಘ್ರದಲ್ಲೇ ಆಕ್ಷೇಪಣೆ ಸಲ್ಲಿಸಲಾಗುವುದು ಎಂದಿದ್ದಾರೆ. ಹೀಗಾಗಿ, ಪ್ರಕರಣದ ವಿಚಾರಣೆಯನ್ನು 2025ರ ಜ.9ಕ್ಕೆ ನಿಗದಿಪಡಿಸಲಾಗುವುದು. ಈ ಅವಧಿಯಲ್ಲಿ ಆರೋಪ ನಿಗದಿಗೂ ಮುನ್ನ ವಾದ ಆಲಿಸುವ ಸಂಬಂಧ ವಿಚಾರಣೆಗೆ ಅರ್ಜಿಯನ್ನು ಸಕ್ಷಮ ನ್ಯಾಯಾಲಯ ನಿಗದಿಗೊಳಿಸಿದರೆ ನಾಗೇಂದ್ರ ಅವರು ಹೈಕೋರ್ಟ್‌ ಮೊರೆ ಹೋಗಬಹುದು ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next