Advertisement

Valmiki Nigama Scam: ಇನ್ನು ಐದು ದಿನ ಮಾಜಿ ಸಚಿವ ನಾಗೇಂದ್ರ ಇ.ಡಿ. ವಶಕ್ಕೆ

11:50 PM Jul 13, 2024 | Team Udayavani |

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಪರಿಶಿಷ್ಟ ವರ್ಗಗಳ ಕಲಾಣ್ಯ ಇಲಾಖೆಯ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಜುಲೈ 18ರ ವರೆಗೆ ಜಾರಿ ನಿರ್ದೇಶನಾಲಯದ (ಇ.ಡಿ.) ವಶಕ್ಕೆ ನೀಡಲಾಗಿದೆ.

Advertisement

ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರ ಯಲಹಂಕದಲ್ಲಿರುವ ನಿವಾಸಕ್ಕೆ ನಾಗೇಂದ್ರರನ್ನು ಶನಿವಾರ ಮುಂಜಾನೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಯ ಅಗತ್ಯ ಇರುವುದರಿಂದ 14 ದಿನಗಳ ಕಾಲ ವಶಕ್ಕೆ ನೀಡುವಂತೆ ಮನವಿ ಮಾಡಲಾಯಿತು. ಜುಲೈ 18ರ ವರೆಗೆ ನಾಗೇಂದ್ರ ಅವರನ್ನು ಇ.ಡಿ. ವಶಕ್ಕೆ ನೀಡಿ ನ್ಯಾಯಾಧೀಶರು ಆದೇಶಿಸಿದರು.

3 ಗಂಟೆ ವಿಚಾರಣೆ, ಬಳಿಕ ವಿಶ್ರಾಂತಿ!
ನ್ಯಾಯಾಧೀಶರ ಮುಂದೆ ಅನಾರೋಗ್ಯದ ಸಮಸ್ಯೆ ಬಿಚ್ಚಿಟ್ಟ ನಾಗೇಂದ್ರ, ಬಿಪಿ, ಸುಸ್ತು ಇದೆ ಎಂದರು. ಇದಕ್ಕೆ ಸ್ಪಂದಿಸಿದ ನ್ಯಾಯಾಧೀಶರು, ಪ್ರತೀ ದಿನ 3 ಗಂಟೆ ವಿಚಾರಣೆ ನಡೆಸಬಹುದು, ಬಳಿಕ ವಿಶ್ರಾಂತಿ ನೀಡಬೇಕು. ಪ್ರತೀ ದಿನ ವೈದ್ಯಕೀಯ ತಪಾಸಣೆ ಮಾಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇ.ಡಿ. ವಕೀಲರ ವಾದವೇನು?
ವಾಲಿ¾ಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ರೂ. ಹಗರಣ ನಡೆದಿರುವ ಕಾರಣ ಅಂದು ನಿಗಮಕ್ಕೆ ಸಂಬಂಧಿಸಿದ ಇಲಾಖೆಯ ಸಚಿವರಾಗಿದ್ದ ನಾಗೇಂದ್ರರಿಂದ ಮಾಹಿತಿಯನ್ನು ಕಲೆ ಹಾಕಬೇಕಾಗಿದೆ. ಅವ್ಯವಹಾರ ಯಾವ ರೀತಿ ಆಗಿದೆ ಎಂಬುದನ್ನು ಸಾಕ್ಷ್ಯ ಸಮೇತ ತಿಳಿದುಕೊಳ್ಳಬೇಕು ಎಂದು ಇ.ಡಿ. ಪರ ವಕೀಲರು ನ್ಯಾಯಾಲಯದ ಮುಂದೆ ಮನವಿ ಮಾಡಿದ್ದರು.

ನಾಗೇಂದ್ರ ಬಂಧನ ಏಕೆ?
ಜುಲೈ 10ರ ಬೆಳಗ್ಗೆ ನಾಗೇಂದ್ರ ಅವರ ಡಾಲರ್ಸ್‌ ಕಾಲನಿಯಲ್ಲಿರುವ ಫ್ಲ್ಯಾಟ್‌, ಕಚೇರಿ, ಶಾಸಕರ ಭವನದ ಕಚೇರಿ ಮೇಲೆ ದಾಳಿ ನಡೆಸಿದ್ದ ಇ.ಡಿ. ಕೆಲವು ದಾಖಲೆಗಳನ್ನು ಜಪ್ತಿ ಮಾಡಿತ್ತು. ಪ್ರಾಥಮಿಕ ವಿಚಾರಣೆ ವೇಳೆ ಪ್ರಕರಣದಲ್ಲಿ ತನ್ನ ಪಾತ್ರವಿಲ್ಲವೆಂದು ನಾಗೇಂದ್ರ ಹೇಳಿದ್ದರು. ಹಗರಣದಲ್ಲಿ ಈಗಾಗಲೇ ಎಸ್‌ಐಟಿಯಿಂದ ಬಂಧನಕ್ಕೊಳಗಾಗಿರುವ ಇತರ ಆರೋಪಿಗಳ ಹೇಳಿಕೆ, ನಾಗೇಂದ್ರ ಪಿಎ ಹರೀಶ್‌ ಹೇಳಿಕೆ ಮುಂದಿಟ್ಟು ಇ.ಡಿ. ಪ್ರಶ್ನಿಸಿದಾಗಲೂ ನಾಗೇಂದ್ರ ಗೊಂದಲದ ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಹೀಗಾಗಿ ಶುಕ್ರವಾರ ಬೆಳಗ್ಗೆ 9ರಿಂದ ನಿರಂತರವಾಗಿ ವಿಚಾರಣೆ ನಡೆಸಿ ಕೊನೆಗೂ ನಾಗೇಂದ್ರರನ್ನು ಬಂಧಿಸಲಾಗಿತ್ತು.

Advertisement

ಮುಖಾಮುಖೀ ಹೇಳಿಕೆ?
ಹಗರಣದ ಕೂಲಂಕಷ ತನಿಖೆಗೆ ಮುಂದಾಗಿರುವ ಇ.ಡಿ. ಅಧಿಕಾರಿಗಳು ಸಾಕ್ಷ್ಯ ಮುಂದಿಟ್ಟು ನಾಗೇಂದ್ರ ಅವರ ಹೇಳಿಕೆಯನ್ನು ವೀಡಿಯೋ ರೆಕಾರ್ಡ್‌ ಮಾಡಿ ದಾಖಲಿಸಿಕೊಳ್ಳುತ್ತಿದ್ದಾರೆ. ಮಾಜಿ ಸಚಿವರಿಗೆ ಸಹಕರಿಸಿದ್ದಾರೆ ಎನ್ನಲಾದ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಇತರ ಆರೋಪಿಗಳನ್ನು ಬಾಡಿ ವಾರಂಟ್‌ ಮೂಲಕ ಇ.ಡಿ. ವಶಕ್ಕೆ ಪಡೆದು ನಾಗೇಂದ್ರ ಹಾಗೂ ಇತರ ಆರೋಪಿಗಳನ್ನು ಮುಖಾಮುಖೀ ಕೂರಿಸಿ ಹೇಳಿಕೆ ದಾಖಲಿಸಿಕೊಳ್ಳುವ ಸಾಧ್ಯತೆಗಳಿವೆ.

2 ರಾತ್ರಿ ಇ.ಡಿ. ಕಚೇರಿಯಲ್ಲೇ!
ನಾಗೇಂದ್ರ ಅವರಿಗೆ ಶುಕ್ರವಾರ ತಡರಾತ್ರಿ ಬೌರಿಂಗ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಮತ್ತೆ ಇ.ಡಿ. ಕಚೇರಿಗೆ ಕರೆತರಲಾಗಿತ್ತು. ನ್ಯಾಯಾಧೀಶರು ಶನಿವಾರ ಬೆಳಗ್ಗೆ ನಾಗೇಂದ್ರರನ್ನು ಕರೆತರುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ರಾತ್ರಿ ಇ.ಡಿ. ಕಚೇರಿಯಲ್ಲಿ  ಅವರನ್ನು ಇರಿಸಿಕೊಳ್ಳಲಾಗಿತ್ತು. ಮಲಗಲು ಬೆಡ್‌ಶೀಟ್‌, ದಿಂಬು ಕೊಡಲಾಗಿದೆ.

ಪ್ರಕರಣದಲ್ಲಿ ಪಾತ್ರವಿಲ್ಲ: ನಾಗೇಂದ್ರ
ಇ.ಡಿ. ಕಚೇರಿಗೆ ನಾಗೇಂದ್ರ ಅವರನ್ನು ಕರೆತರುವ ವೇಳೆ ಮಾಧ್ಯಮದವರು ಪ್ರಶ್ನಿಸಿದಾಗ, ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಈ ಬಗ್ಗೆ ನನಗೇನೂ ಗೊತ್ತಿಲ್ಲ ಎಂದರು. ಇಡಿ ವಿಚಾರಣೆ ವೇಳೆಯೂ ಇದೇ ಮಾತುಗಳನ್ನು ಹೇಳಿದ್ದಾರೆ ಎನ್ನಲಾಗುತ್ತಿದೆ. ನಾನು ಇಲಾಖೆ ಸಚಿವನಾಗಿದ್ದಾರೆ. ಇದು ಬೋರ್ಡ್‌ ಮೀಟಿಂಗ್‌ ಮೂಲಕ ಆಗಿರುವ ಹಣ ವರ್ಗಾವಣೆ. ಪ್ರಕರಣದ ಬಗ್ಗೆ ನನಗೆ ಗೊತ್ತೇ ಇಲ್ಲ ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ವಾಲ್ಮೀಕಿ ಹಗರಣದ ಜಾಡು ಹಿಡಿದ ಇ.ಡಿ.!
ವಾಲ್ಮೀಕಿ ನಿಗಮದ 187 ಕೋಟಿ ರೂ. ಹಗರಣದಲ್ಲಿ ಹೈದ್ರಾಬಾದ್‌ನ ಬಂಜಾರ ಹಿಲ್ಸ್‌ನ ಆರ್‌ಬಿಎಲ್‌ ಬ್ಯಾಂಕ್‌ನ 18 ನಕಲಿ ಖಾತೆಗಳಿಗೆ ಕೋಟ್ಯಂತರ ರೂ. ವರ್ಗಾವಣೆ ಆಗಿರುವುದು ಇ.ಡಿ. ತನಿಖೆಯಲ್ಲಿ ಮೆಲ್ನೋಟಕ್ಕೆ ಕಂಡು ಬಂದಿದೆ. ನಿಗಮದ ಖಾತೆಯಿದ 9 ನಕಲಿ ಖಾತೆಗಳಿಗೆ 45 ಕೋಟಿ ರೂ. ಮೊದಲು ವರ್ಗಾವಣೆಯಾಗಿದೆ. ನಂತರ ನಿಗಮದ ಸೆಕ್ಯೂರ್‌ಡ್‌ ಓವರ್‌ಡ್ರಾಫ್ಟ್ ಖಾತೆಯಿಂದ 50 ಕೋಟಿ ರೂ. ವರ್ಗಾವಣೆಯಾಗಿದ್ದು, ಈ ಮೂಲಕ ಒಟ್ಟು 95 ಕೋಟಿ ರೂ. ವರ್ಗಾವಣೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next