Advertisement
ಇ.ಡಿ. ಅಧಿಕಾರಿಗಳು ಇದುವರೆಗೆ ನಿಗಮದ ಬ್ಯಾಂಕ್ ಖಾತೆಯಿಂದ ಹೈದರಾಬಾದ್ ಹಾಗೂ ರಾಜ್ಯದ ಬೇರೆ ಬೇರೆ ಖಾಸಗಿ ಸಂಸ್ಥೆಗಳ ಖಾತೆಗಳಿಗೆ ವರ್ಗಾವಣೆಯಾದ ಹಣದ ಬಗ್ಗೆಯಷ್ಟೇ ಮಾಹಿತಿ ಸಂಗ್ರಹಿಸುತ್ತಿದ್ದರು. ಆದರೆ ಈಗ ಮಾಜಿ ಸಚಿವ ನಾಗೇಂದ್ರ ಅವರ ಆದಾಯ ಮೂಲ ಕೆದಕಲು ಆರಂಭಿಸಿದ್ದಾರೆ.
ನಾಗೇಂದ್ರ ಈ ಹಿಂದೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿದ್ದರು. ಜತೆಗೆ ಲೋಕಾಯುಕ್ತ ಮತ್ತು ಸಿಬಿಐ, ಆದಾಯ ತೆರಿಗೆ ಇಲಾಖೆ, ಇ.ಡಿ.ಯಿಂದಲೂ ವಿಚಾರಣೆ ಎದುರಿಸಿದ್ದರು. ಈ ನಡುವೆ ಪ್ರತೀ ವರ್ಷ ತಮ್ಮ ಆದಾಯ ಹಾಗೂ ಆಸ್ತಿಯನ್ನು ಒಂದಲ್ಲ ಒಂದು ರೀತಿಯಲ್ಲಿ ಹೆಚ್ಚಿಸಿಕೊಳ್ಳುತ್ತಿರುವ ನಾಗೇಂದ್ರ ಕಳೆದ ಒಂದು ವರ್ಷದಲ್ಲಿ ಸಂಪಾದಿಸಿರುವ ಆಸ್ತಿ ಎಷ್ಟು, ಚುನಾವಣ ಪ್ರಮಾಣ ಪತ್ರದಲ್ಲಿ ಉಲ್ಲೇಖೀಸಿರುವ ಆಸ್ತಿ ಮೌಲ್ಯ ಎಷ್ಟು ಎಂಬ ಬಗ್ಗೆ ಲೆಕ್ಕಾಧಿಕಾರಿಗಳ ಮೂಲಕ ಇ.ಡಿ. ಮಾಹಿತಿ ಸಂಗ್ರಹಿಸುತ್ತಿದೆ. 2023ರ ವಿಧಾನಸಭಾ ಚುನಾವಣ ಪೂರ್ವ ಪ್ರಮಾಣ ಪತ್ರದಲ್ಲಿ ನಾಗೇಂದ್ರ ಘೋಷಿಸಿಕೊಂಡಿದ್ದ ಆಸ್ತಿ ವಿವರ ಹಾಗೂ ಪ್ರಸ್ತುತ ಅವರ ಆದಾಯ, ಆಸ್ತಿ ವಿವರವನ್ನು ಇ.ಡಿ ಅಧಿಕಾರಿಗಳು ತಾಳೆ ಹಾಕಲಾರಂಭಿಸಿದ್ದಾರೆ.
Related Articles
2023ರ ವಿಧಾನಸಭಾ ಚುನಾವಣೆಗಾಗಿ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ನಗದು, ಚಿನ್ನಾಭರಣ, ನಿವೇಶನ ಸೇರಿ ಒಟ್ಟು 17.20 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿಯನ್ನು ನಾಗೇಂದ್ರ ಘೋಷಿಸಿದ್ದರು. ಬ್ಯಾಂಕ್ ಖಾತೆ, ಇನ್ಶೂರೆನ್ಸ್ ಪಾಲಿಸಿ, ಖಾಸಗಿ ಕಂಪೆನಿಯಲ್ಲಿ ಹೂಡಿಕೆ, ವಾಹನ, ಚಿನ್ನಾಭರಣ ಸೇರಿ 12.35 ಕೋಟಿ ರೂ. ಮೌಲ್ಯದ ಚರಾಸ್ತಿ, ಒಟ್ಟು 4.88 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಘೋಷಿಸಿದ್ದರು. ಚುನಾವಣ ಪ್ರಮಾಣ ಪತ್ರದ ಪ್ರಕಾರ ಒಟ್ಟು 17.20 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿಯನ್ನು ಹೊಂದಿರುವುದಾಗಿ ಮಾಹಿತಿ ನೀಡಿದ್ದರು.
Advertisement
ಸದ್ಯ ಇ.ಡಿ. ಅಧಿಕಾರಿಗಳ ಶೋಧ ಸಂದರ್ಭದಲ್ಲಿ ದೊರೆತಿರುವ ದಾಖಲೆಗಳ ಪ್ರಕಾರ ನಾಗೇಂದ್ರ ಅವರ ಆಸ್ತಿಯ ವಿವರ, ಆದಾಯದ ಮೂಲಗಳಲ್ಲಿ ಕೆಲವು ವ್ಯತ್ಯಾಸ ಕಂಡುಬಂದಿದೆ ಎನ್ನಲಾಗಿದೆ. ಒಂದು ವೇಳೆ ತನಿಖೆ ವೇಳೆ ದೊಡ್ಡ ಪ್ರಮಾಣದ ವ್ಯತ್ಯಾಸ ಕಂಡು ಬಂದರೆ ನಾಗೇಂದ್ರಗೆ ಪ್ರಕರಣ ಮತ್ತಷ್ಟು ಕಗ್ಗಂಟಾಗಲಿದೆ.