Advertisement

Valmiki Nigama Scam; ಮುಂದುವರಿದ ನಾಗೇಂದ್ರ ವಿಚಾರಣೆ

01:25 AM Jul 17, 2024 | Team Udayavani |

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣದಲ್ಲಿ ಮಾಜಿ ಸಚಿವ ನಾಗೇಂದ್ರಗೆ ಜಾರಿ ನಿರ್ದೇಶನಾಲಯ (ಇಡಿ)ದಿಂದ ವಿಚಾರಣೆ ಮುಂದುವರಿದಿದ್ದು ಅವರ ಆಪ್ತ ಸಹಾಯಕರಾದ ಹರೀಶ್‌ ಹಾಗೂ ದೇವೇಂದ್ರಪ್ಪ ಅವರನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲಾಗಿದೆ.

Advertisement

ಇಡಿ ಅಧಿಕಾರಿಗಳು ಜಪ್ತಿ ಮಾಡಿರುವ ದಾಖಲೆಗಳು ಹಾಗೂ ಸಾಕ್ಷ್ಯ ಮುಂದಿಟ್ಟು ನಾಗೇಂದ್ರ ಅವರನ್ನು ಮಂಗಳವಾರ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ. ಆದರೆ ನಾಗೇಂದ್ರ ಗೊಂದಲದ ಹೇಳಿಕೆ ಮುಂದುವರಿಸಿದ್ದಾರೆ.

ಮತ್ತೂಂದೆಡೆ ನಾಗೇಂದ್ರ ಪರ ವಕೀಲ ಶ್ಯಾಮ್‌ಸುಂದರ್‌ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದು ನಾಗೇಂದ್ರ ಅವರ ಇಚ್ಛೆಯಂತೆ ಅವರು ನೀಡುವ ಹೇಳಿಕೆಯನ್ನೇ ಇ.ಡಿ. ವೀಡಿಯೋ ರೆಕಾರ್ಡ್‌ ಮಾಡಬೇಕು. ಇ.ಡಿ. ತಮ್ಮ ಇಷ್ಟದಂತೆ ಬಲವಂತವಾಗಿ ಅವರ ಹೇಳಿಕೆ ದಾಖಲಿಸಿಕೊಳ್ಳಬಾರದು. ವಕೀಲರ ಜತೆಗೆ ಚರ್ಚಿಸಲು ಅವಕಾಶ ನೀಡಲು ಅನುಮತಿಸಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೋರ್ಟ್‌, ಹೇಳಿಕೆ ವೀಡಿಯೋ ಮಾಡುವುದು ತನಿಖಾಧಿಕಾರಿಗಳಿಗೆ ಬಿಟ್ಟ ವಿಚಾರ ಎಂದಿದೆ.

ವಾದ-ಪ್ರತಿವಾದ ಆಲಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಜುಲೈ 18ಕ್ಕೆ ಮುಂದೂಡಿದೆ.

ವಾದ-ಪ್ರತಿವಾದ ಹೇಗಿತ್ತು ?

Advertisement

ಸರಿಯಾದ ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಆಗಬೇಕು: ನಾಗೇಂದ್ರ ಪರ ವಕೀಲರು
ನಾಗೇಂದ್ರ ಪರ ವಕೀಲ ಶ್ಯಾಮ್‌ ಸುಂದರ್‌ ವಾದ ಮಂಡಿಸಿ, ನಾಗೇಂದ್ರ ಅವರಿಗೆ ವಕೀಲರೊಂದಿಗೆ ಚರ್ಚೆ ನಡೆಸಲು ಖಾಸಗಿ ಸ್ಥಳಾವಕಾಶ ವ್ಯವಸ್ಥೆ ಮಾಡಬೇಕು. ಈಗಾಗಲೇ ನಾಗೇಂದ್ರ ಅವರಿಗೆ ಸ್ಟಂಟ್‌ ಹಾಕಿಸಲಾಗಿದೆ. ಹೀಗಾಗಿ ಸರಿಯಾದ ರೀತಿಯಲ್ಲಿ ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕಾಗಿದೆ. ಸಾಕ್ಷಿ ದಾಖಲಿಸುವಾಗ, ಸಾಕ್ಷಿ ಕಲೆ ಹಾಕುವಾಗ ಒತ್ತಡ ಹಾಕುವಂತಿಲ್ಲ.

ವಕೀಲರು ಇಡಿ ವಶದಲ್ಲಿರುವ ನಾಗೇಂದ್ರ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುವ ಸಂದರ್ಭದಲ್ಲಿ ಅಧಿಕಾರಿಗಳು ಪಕ್ಕದಲ್ಲಿ ಬಂದು ನಿಲ್ಲುತ್ತಾರೆ. ಏನೇ ಮಾತನಾಡಿದರೂ ನಮ್ಮ ಮುಂದೆಯೇ ಮಾತನಾಡಬೇಕೆಂದು ಹೇಳುತ್ತಾರೆ. ಇನ್ನು ಅರ್ಜಿದಾರರಿಂದ ವಶಕ್ಕೆ ಪಡಿಸಿಕೊಂಡಿರುವ ಮೊಬೈಲ್‌ ಅನ್ನು ಮಿರರ್‌ ಇಮೇಜ್‌ ಮಾಡುವುದಕ್ಕೆ ಅವಕಾಶ ನೀಡಬಾರದು. ತನಿಖಾಧಿಕಾರಿಗಳು ಕಾನೂನು ಉಲ್ಲಂ ಸುತ್ತಿದ್ದಾರೆ ಎಂದು ವಾದಿಸಿದರು.

ಆಧಾರ ರಹಿತವಾಗಿ ಏನನ್ನೂ ಹೇಳಬಾರದು: ಇಡಿ ಪರ ವಕೀಲರು
ಇಡಿ ಪರ ವಕೀಲ ಪ್ರಸನ್ನ ಕುಮಾರ್‌ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಕಾನೂನಿನಲ್ಲಿ ಇರುವ ಅಂಶಗಳು ಹಾಗೂ ನ್ಯಾಯಾಲಯದ ಆದೇಶಗಳನ್ನು ಸ್ಪಷ್ಟವಾಗಿ ತಿಳಿಸಿ ವಾದ ಮಂಡಿಸಬೇಕೇ ಹೊರತು ಅರ್ಜಿದಾರರ ಪರ ವಕೀಲರು ಆಧಾರ ರಹಿತವಾಗಿ ಏನನ್ನೂ ಹೇಳಬಾರದು. ಆರೋಪಿ ವೀಡಿಯೋ ಗ್ರಾಫ್ಗೆ ರೆಡಿ ಇದ್ದರೂ ಮಾಡಲು ಅವಕಾಶ ಇಲ್ಲ. ಆರೋಪಿಗೆ ಲಾಭದ ರೀತಿಯಲ್ಲಿ ಪ್ರಾಸಿಕ್ಯೂಷನ್‌ ಕೆಲಸ ಮಾಡಲು ಸಾಧ್ಯವಿಲ್ಲ. ಪ್ರಕರಣದಲ್ಲಿ ಪರಿಣಾಮಕಾರಿ ವಿಚಾರಣೆ ನಡೆಸಬೇಕಾಗಿದೆ ಎಂದರು.

ಇಡಿ ವಿಚಾರಣೆಗೆ ಹಾಜರಾಗದ ದದ್ದಲ್‌
ಬೆಂಗಳೂರು: ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವನಗೌಡ ದದ್ದಲ್‌ ಜಾರಿ ನಿರ್ದೇಶನಾಲಯ (ಇಡಿ) ಬಂಧನ ಭೀತಿಗೆ ಸಿಲುಕಿದ್ದು, ಇಡಿ ನೋಟಿಸ್‌ ಕೊಟ್ಟರೂ ಹಾಜರಾಗಿಲ್ಲ. ವಿಧಾನಸಭೆ ಅಧಿವೇಶನಕ್ಕೆ ಹಾಜರಾಗಿರುವ ದದ್ದಲ್‌ ಇಡಿ ಗಾಳಕ್ಕೆ ಸಿಗದಂತೆ ಭಾರೀ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಸದ್ಯ ಅಧಿವೇಶನವಿರುವ ಹಿನ್ನೆಲೆಯಲ್ಲಿ ಇಡಿ ವಿಚಾರಣೆಗೆ ಹಾಜರಾಗಿಲ್ಲ ಎಂದು ಕಾರಣ ಕೊಡುವ ಸಾಧ್ಯತೆಗಳಿವೆ. ಶೀಘ್ರದಲ್ಲೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next