Advertisement

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ

04:55 PM Oct 10, 2022 | Team Udayavani |

ಚಿಕ್ಕಬಳ್ಳಾಪುರ: ಇತಿಹಾಸದಲ್ಲಿ ನುಡಿದಂತೆ ನಡೆದ ಏಕೈಕ ಸರ್ಕಾರ ಎಂದರೆ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರವಾಗಿದೆ. ಕಳೆದ 40 ವರ್ಷಗಳ ನಿರಂತರ ಮೀಸಲು ಹೋರಾಟಕ್ಕೆ ಮುಕ್ತಿ ನೀಡುವಲ್ಲಿ ಬಿಜೆಪಿ ಸರ್ಕಾರ ಯಶಸ್ವಿಯಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

Advertisement

ತಾಲೂಕಿನ ಮುದ್ದೇನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿ, ಕಳೆದ 40 ವರ್ಷಗಳಿಂದ ಪ.ಪಂ ಸಮುದಾಯ ನಿರಂತರ ಹೋರಾಟ ಮಾಡುತ್ತಿತ್ತು. ಆದರೆ, ಈ ಹಿಂದೆ ಬಂದ ಯಾವುದೇ ಸರ್ಕಾರಗಳು ಇತ್ತ ಗಮನ ಹರಿಸಿದ ಉದಾಹರಣೆಯಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌ ಆರೋಪಕ್ಕೆ ತಕ್ಕ ಉತ್ತರ: ಕಳೆದ 40 ವರ್ಷದಿಂದ ಹೋರಾಟ ನಡೆಯುತ್ತಿದ್ದರೂ, ಕಾಂಗ್ರೆಸ್‌ ಸರ್ಕಾರ ಹಲವು ಬಾರಿ ಬಂದು ಹೋದರೂ ಮೀಸಲು ಸೌಲಭ್ಯ ನೀಡಲು ಸಾಧ್ಯವಾಗಿಲ್ಲ. ಆದರೆ, ಬಿಜೆಪಿ ಸರ್ಕಾರ ಬಂದರೆ ಮೀಸಲಾತಿ ತೆಗೆಯುತ್ತಾರೆ, ಸಂವಿಧಾನ ಬದಲಿಸುತ್ತಾರೆ ಎಂದು ಆರೋಪಿಸುತ್ತಿದ್ದರು. ಇಂತಹ ಸುಳ್ಳು ಆರೋಪಗಳಿಗೆ ಸರ್ಕಾರ ಈಗ ತಕ್ಕ ಉತ್ತರ ನೀಡಿದೆ. ನ್ಯಾ. ನಾಗಮೋಹನ್‌ ದಾಸ್‌ ವರದಿಯನ್ನು ಸಂಪುಟದಲ್ಲಿ ಒಪ್ಪಿಕೊಳ್ಳಲಾಗಿದೆ. ಪಜಾ, ಪಪಂ ಜನರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲು ಹೆಚ್ಚಿಸಲು ಒಪ್ಪಿಗೆ ಸೂಚಿಸಲಾಗಿದೆ. ಎಸ್‌ಟಿ ಸಮುದಾಯಕ್ಕೆ 50ಕ್ಕೂ ಹೆಚ್ಚು ಜಾತಿಗಳು ಸೇರಿದ್ದರೆ, ಎಸ್‌ಸಿ ಸಮುದಾಯಕ್ಕೂ ಹೆಚ್ಚಿನ ಜಾತಿಗಳು ಸೇರಿವೆ. ಅಲ್ಲದೆ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಇರಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶವಾಗಿದ್ದು, ಇದನ್ನು ನಿರೂಪಿಸಲಾಗಿದೆ ಎಂದು ಹೇಳಿದರು.

ಸಮಿತಿ ರಚಿಸಿದ್ದೇ ಮೈತ್ರಿ ಸರ್ಕಾರ: ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಮೈತ್ರಿ ಸರ್ಕಾರದಲ್ಲಿ ಸಮಿತಿ ರಚಿಸಲಾಗಿತ್ತು. ಆದರೆ, ಆರೇ ತಿಂಗಳಲ್ಲಿ ಸರ್ಕಾರ ಹೋಯಿತು. ನಂತರ ನಮ್ಮ ಸರ್ಕಾರ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಈ ವೇಳೆ ಸಮಿತಿ ಹೆಚ್ಚಿನ ಕಾಲವಕಾಶ ನೀಡುವಂತೆ ಕೋರಿತು. ಇದರಿಂದ ನಮ್ಮ ಸರ್ಕಾರ 1 ವರ್ಷ ಅವಧಿ ವಿಸ್ತರಿಸಲಾಯಿತು. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಬಂದ ನಂತರವೂ ಸಮಿತಿಯನ್ನು ಸಂಪರ್ಕಿಸಿ ಚರ್ಚಿಸಲಾಗಿದೆ ಎಂದು ಹೇಳಿದರು.

ಬಿಜೆಪಿ ಮಾಡಿದ ಸಾಧನೆಗಳು: ಎಸ್‌ಸಿ, ಎಸ್‌ಟಿ ಸಮುದಾಯಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂಬುದನ್ನು ತೋರಿಸಿದ್ದೇವೆ. ಬಿಜೆಪಿ ವಿರುದ್ಧ ಜನರಿಗೆ ತಪ್ಪು ತಿಳವಳಿಕೆ ಮೂಡಿಸುವ ಪ್ರಯತ್ನ ನಡೆದಿದೆ. ಎಸ್‌ಟಿ ಸಮುದಾಯದ ವಾಲ್ಮೀಕಿ ಜಯಂತಿ ಆರಂಭಿಸಿದ್ದು ಬಿಜೆಪಿ, ವಾಲ್ಮೀಕಿ ಪ್ರಶಸ್ತಿ ಪ್ರಕಟಿಸಿದ್ದು ಬಿಜೆಪಿ, ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಯೋಚನೆ ಮಾಡಿದ್ದು ಬಿಜೆಪಿ, ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು ಬಿಜೆಪಿ, ಅಲ್ಲದೆ, ಪರಿಶಿಷ್ಟ ವರ್ಗಗಳಿಗಾಗಿಯೇ ಪ್ರತ್ಯೇಕ ಇಲಾಖೆ ಮಾಡಲಾಗಿದೆ. ಎಲ್ಲವನ್ನೂ ಮಾಡಿರುವುದು ಬಿಜೆಪಿ ಸರ್ಕಾರವಾದರೆ ಸುಳ್ಳು ಆರೋಪ ಮಾಡುವುದನ್ನೇ ವಿರೋಧ ಪಕ್ಷಗಳು ಕಾಯಕ ಮಾಡಿಕೊಂಡಿವೆ ಎಂದು ಕಿಡಿಕಾರಿದರು.

Advertisement

ಜಿಲ್ಲೆಯಲ್ಲಿ ಬೃಹತ್‌ ಸಮಾವೇಶ: 40 ವರ್ಷಗಳ ನಿಮ್ಮ ಬೇಡಿಕೆಯಂತೆ ಮೀಸಲಾತಿ ಹೆಚ್ಚಿಸಲಾಗಿದೆ. ಇದು ಬಿಜೆಪಿ ಸರ್ಕಾರದ ಬದ್ಧತೆ. ಹಾಗಾಗಿಯೇ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕಳೆದ 241 ದಿನಗಳಿಂದ ವಾಲ್ಮೀಕಿ ಜಗದ್ಗುರುಗಳು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು, ಸರ್ಕಾರದ ಆದೇಶ ಪತ್ರದೊಂದಿಗೆ ಸಂಪುಟ ಸಚಿವರು ಹೋಗಿ ಆದೇಶಪತ್ರ ನೀಡಿ, ಉಪವಾಸ ಕೈ ಬಿಡುವಂತೆ ಕೋರಲಾಯಿತು. ಇದರಿಂದ ಶ್ರೀಗಳು ಉಪವಾಸ ಕೈ ಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಸ್ವಾಮೀಜಿಗಳನ್ನು ಜಿಲ್ಲೆಗೆ ಕರೆಯಿಸಿ ಪರಿಶಿಷ್ಟ ವರ್ಗಗಳ ಬೃಹತ್‌ ಸಮಾವೇಶ ಮಾಡಲಾಗುವುದು ಎಂದು ಹೇಳಿದರು.

ಶಿಕ್ಷಣ ವಲಯವಾಗಿ ಮುದ್ದೇನಹಳ್ಳಿ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮುದ್ದೇನಹಳ್ಳಿ ಗ್ರಾಪಂ ಅನ್ನು ಶಿಕ್ಷಣ ವಲಯವಾಗಿ ರೂಪಿಸಲು ಶ್ರಮಿಸಲಾಗುತ್ತಿದೆ. ಸತ್ಯಸಾಯಿ ಸಂಸ್ಥೆಯಲ್ಲಿ ನೂತನ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಈಗಾಗಲೇ ಪರವಾನಿಗೆ ನೀಡಲಾಗಿದೆ. ಒಂದೇ ತಾಲೂಕಿನಲ್ಲಿ ಎರಡು ಮೈದ್ಯಕೀಯ ಕಾಲೇಜು ನಿರ್ಮಾಣವಾಗುತ್ತಿರುವುದು ಕ್ಷೇತ್ರದ ಜನರಿಗೆ ಹೆಮ್ಮೆ ತರಲಿದೆ. ಜನರಿಗೆ ಆರೋಗ್ಯ ಮುಖ್ಯ. ಹಾಗಾಗಿಯೇ ನಮ್ಮ ಕ್ಷೇತ್ರದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆ ಈಗಾಗಲೇ ಚಾಲನೆಯಲ್ಲಿದೆ. ಮುಂದಿನ ಜನವರಿಯಲ್ಲಿ ಮೈದ್ಯಕೀಯ ಕಾಲೇಜು ಉದ್ಘಾಟನೆ ಯಾಗಲಿದ್ದು, ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.

ಬರದ ನಾಡು ಮಲೆನಾಡಾಗಲಿದೆ: ಮುಂದಿನ ದಿನಗಳಲ್ಲಿ ನೀರಾವರಿ ಕ್ಷೇತ್ರಕ್ಕೆ ಆದ್ಯತೆ ನೀಡಲಾಗುವುದು. ಬರದ ನಾಡು ಎಂಬ ಖ್ಯಾತಿಗೆ ಪಾತ್ರವಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಮಲೆನಾಡು ಮಾದರಿಯಲ್ಲಿ ಶಾಶ್ವತ ನೀರಾವರಿ ಜಿಲ್ಲೆಯಾಗಿ ರೂಪಿಸಲಾಗುವುದು. ಎತ್ತಿನಹೊಳೆ ವೇಗವಾಗಿ ಕಾಮಗಾರಿ ನಡೆಯುತ್ತಿದೆ. ಮುಂದಿನ ವರ್ಷ ಡಿಸೆಂಬರ್‌ ಅಂತ್ಯದೊಳಗೆ ಈ ಭಾಗದ ಎಲ್ಲ ಕೆರೆಗಳಿಗೆ ಎತ್ತಿನಹೊಳೆ ನೀರು ತುಂಬಿಸಲಾಗುವುದು ಎಂದು ಭರವಸೆ ನೀಡಿದರು. ಪ್ರಸ್ತುತ ನೀರಾವರಿ ಸಮಸ್ಯೆಗೆ ಪರಿಹಾರ ದೊರೆತಿದೆ. ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಾಗಿದೆ. ಮುಂದೆ ಉಳಿದಿರುವುದು ಜಿಲ್ಲೆಯ ಯುವಪೀಳಿಗೆಗೆ ಉದ್ಯೋಗ ಸೃಷ್ಟಿಯೊಂದೇ ಮಾರ್ಗವಾಗಿದೆ. ಇದಕ್ಕಾಗಿ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಉದ್ಯೋಗ ಸೃಷ್ಟಿಗಾಗಿ ಕ್ಷೇತ್ರದಲ್ಲಿ ಕೈಗಾರಿಕೆಗಳ ಸ್ಥಾಪನೆ ಮಾಡಲಾಗುವುದು. ಆ ಮೂಲಕ ಉದ್ಯೋಗ ಸೃಷ್ಟಿ ಮಾಡಿ, ಗುಳೆ ಹೋಗುವ ಯುವಪೀಳಿಗೆಯನ್ನು ಜಿಲ್ಲೆಯಲ್ಲಿಯೇ ದುಡಿಯುವಂತೆ ಮಾಡಲು ಅಗತ್ಯ ಕ್ರಮ ವಹಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಸ್ವಾಮಿಗಳು, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್‌, ಮುದ್ದೇನ ಹಳ್ಳಿ ಗ್ರಾಪಂ ಅಧ್ಯಕ್ಷ ಮುನಿನಾರಾಯಣಪ್ಪ, ಶಿವಕುಮಾರ್‌, ಛಾಯಾ, ರಂಗಣ್ಣ, ಆವುಲಕೊಂಡರಾಯಪ್ಪ, ಕೃಷ್ಣಮೂರ್ತಿ, ಲಕ್ಷ್ಮಣ್‌, ನರಸಿಂಹಮೂರ್ತಿ, ನಾರಾಯಣಸ್ವಾಮಿ, ಗೋಪಾಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next