Advertisement
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದ ಒಳಿತಿನ ಸಂದೇಶ ಸಾರಿದ ಮಹಾನುಭಾವರ ತತ್ವ, ಆದರ್ಶಗಳನ್ನು ಅನುಷ್ಠಾನಗೊಳಿಸುವ, ಪಾಲಿಸುವ ಇಚ್ಛಾಶಕ್ತಿ ಕೊರತೆ ಕಾಣುತ್ತಿದೆ. ಸಮಾಜವನ್ನು ನಾವೇ ವಿಭಜಿಸಿಕೊಂಡಿದ್ದೇವೆ. ಕೆಲವು ಪಕ್ಷವು ಶ್ರೀರಾಮನನ್ನು ಬಳಸಿಕೊಳ್ಳುತ್ತವೆ. ಆದರೆ ರಾಮಾಯಣ ಕೃತಿ ರಚಿಸಿದ ವಾಲ್ಮೀಕಿ ಅವರನ್ನು ಸ್ಮರಿಸುವುದಿಲ್ಲ.
Related Articles
Advertisement
ಪೂರ್ವಯೋಜಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಎಚ್.ಡಿ.ದೇವೇಗೌಡರು ಬುಧವಾರ ಬೆಳಗ್ಗೆ ಲಂಡನ್‌ಗೆ ಪ್ರಯಾಣ ಬೆಳೆಸಿದ್ದರಿಂದ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿರಲಿಲ್ಲ. ಇದೇ ವೇಳೆ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಾದ ಚಿತ್ರದುರ್ಗದ ಪ್ರದೀಪ್, ಬೆಳಗಾವಿಯ ದೀಪಾ ನಾಯ್ಕರ್, ತುಮಕೂರಿನ ರವಿತೇಜ ಅವರಿಗೆ ಕ್ರಮವಾಗಿ 5,000 ರೂ, 4,500 ರೂ. ಹಾಗೂ 4000 ರೂ. ಪ್ರೋತ್ಸಾಹ ಧನ ನೀಡಿ ಅಭಿನಂದಿಸಲಾಯಿತು.
ಮೇಯರ್ ಗಂಗಾಬಿಕೆ, ವಿಧಾನ ಪರಿಷತ್ ಸದಸ್ಯರಾದ ಎಂ.ಎ.ಗೋಪಾಲಸ್ವಾಮಿ, ಎಂ.ಸಿ.ವೇಣುಗೋಪಾಲ್, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ, ಪರಿಶಿಷ್ಟ ಜಾತಿ ಮತ್ತು ಗಡದ ಉಪಯೋಜನೆ ಸಲಹೆಗಾರ ಡಾ.ಇ.ವೆಂಕಟಯ್ಯ, ಪಾಲಿಕೆ ಸದಸ್ಯರಾದ ಕೆ.ನರಸಿಂಹ ನಾಯಕ, ನೇತ್ರ ಪಲ್ಲವಿ ಇತರರು ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಗೈರು ಹಾಜರಿಗೆ ಗರಂಪೂರ್ವಯೋಜಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಾರ್ಯಕ್ರಮಕ್ಕೆ ಗೈರಾಗಿದ್ದರು. ದಿಢೀರ್ ಅನಾರೋಗ್ಯದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪಚುನಾವಣೆ ಪ್ರಚಾರ ದಲ್ಲಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವುದಕ್ಕೆ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಗಣ್ಯರ ಗೈರು ಹಾಜರಿಯಿಂದ ಕೋಪಗೊಂಡ ಮುಖಂಡರು ವಿಧಾನಸೌಧದ ಮೊಗಸಾಲೆಯಲ್ಲಿ ಧರಣಿ ನಡೆಸಿ ಧಿಕ್ಕಾರ ಕೂಗಿದರು. ಸಚಿವ ಪ್ರಿಯಾಂಕ್ ಖರ್ಗೆ ವೇದಿಕೆ ಬಳಿ ಬಂದಾಗಲೂ ಈ ಬಗ್ಗೆ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಸಂಜೆವರೆಗೂ ಕಾಯಲು ಸಿದ್ಧವಿದ್ದು,
ಮುಖ್ಯಮಂತ್ರಿಗಳು ಬರುವವರೆಗೆ ಕಾರ್ಯಕ್ರಮ ಆರಂಭಿಸುವುದು ಬೇಡ ಎಂದು ಪಟ್ಟು ಹಿಡಿದರು. ಆಕ್ಷೇಪಣೆಯಿಂದಾಗಿ ವೇದಿಕೆ ಹಿನ್ನೆಲೆಯಲ್ಲಿ ಪ್ರದರ್ಶಿಸಲಾಗುತ್ತಿದ್ದ ಎಲೆಕ್ಟ್ರಾನಿಕ್ ಪರದೆಯಲ್ಲಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳ ಭಾವಚಿತ್ರವಿದ್ದ ದೃಶ್ಯ ತೆರೆದ ಬಳಿಕ ಮುಖಂಡರು ಧರಣಿ ಹಿಂಪಡೆದರು. ಕಾರ್ಯಕ್ರಮದ ಬಳಿಕವೂ ಪ್ರವೇಶದ್ವಾರದ ಬಳಿ ಮತ್ತೂಂದು ಗುಂಪು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿತು. ವಾಲ್ಮೀಕಿ ಜನಾಂಗವನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಗುತ್ತಿದೆ. ಇದಕ್ಕೆ ಮುಂದೆ ಸೂಕ್ತ ಉತ್ತರ ನೀಡುತ್ತೇವೆ ಎಂದು ಮುಖಂಡರು ಎಚ್ಚರಿಕೆ ನೀಡಿದರು. ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಘೇರಾವ್ ಹಾಕಿ ಆಕ್ಷೇಪ ವ್ಯಕ್ತಪಡಿಸಿದರು. ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಕೂಡ ತಮ್ಮ ಭಾಷಣದಲ್ಲಿ ಮುಖ್ಯಮಂತ್ರಿಗಳ ಗೈರು ಹಾಜರಿ ಬಗ್ಗೆ ಪ್ರಸ್ತಾಪಿಸಿ, ಅವರು ಬೇಗ ಗುಣಮುಖರಾಗಲಿ ಎಂದು ಆಶಿಸಿದರು. ಪ್ರಶಸ್ತಿಗೆ ದೇವೇಗೌಡರು ಅರ್ಹರು: ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಆಯ್ಕೆ ಮಾಡಿರುವುದಕ್ಕೆ ಕೆಲವರು ಅಪಸ್ವರ ತೆಗೆದಿದ್ದಾರೆ. ಆಯ್ಕೆ ಸಮಿತಿಯ ಕಾರ್ಯ ನಿರ್ವಹಣೆಯಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ. ನಿವೃತ್ತ ನ್ಯಾ.ಎಚ್.ಎಲ್.ನಾಗಮೋಹನ್‌ದಾಸ್ ಅವರ ಸಮಿತಿಯು ಪ್ರಶಸ್ತಿಗೆ ದೇವೇಗೌಡರ ಹೆಸರು ಶಿಫಾರಸು ಮಾಡಿತ್ತು. 1984 -85ರಲ್ಲಿ ನಾಯಕ, ವಾಲ್ಮೀಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡು ನಂತರ ಕೇಂದ್ರಕ್ಕೆ ಶಿಫಾರಸು ಸಲ್ಲಿಸುವಲ್ಲಿ ದೇವೇಗೌಡರು ಮಹತ್ವದ ಪಾತ್ರ ವಹಿಸಿದ್ದರು. 1981ರಲ್ಲಿ ಸಂಸದರಾಗಿದ್ದಾಗ ಸಾಕಷ್ಟು ಹೋರಾಟ ನಡೆಸಿ ವಾಲ್ಮೀಕಿ, ನಾಯಕ ಎಂಬ ಪರ್ಯಾಯ ಪದ ಬಳಕೆ ಸಂಬಂಧ ಸುಗ್ರೀವಾಜ್ಞೆ ಹೊರಡಿಸುವಲ್ಲಿಯೂ ಅವರ ಪಾತ್ರವಿತ್ತು. ಸಮುದಾಯದ ಗುರುಪೀಠ ಸ್ಥಾಪನೆಗೂ ಅನುಕೂಲ ಮಾಡಿಕೊಟ್ಟಿದ್ದು, ಅವರ ಆಯ್ಕೆ ಸೂಕ್ತವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡರು.