ಕನಕಪುರ: ವಾಲ್ಮೀಕಿ ಮಹರ್ಷಿ ರಚಿಸಿದ ಮಹಾಕಾವ್ಯ ರಾಮಾಯಣ ಗ್ರಂಥ ಹಲವಾರು ಕೃತಿಗಳಿಗೆ ಪ್ರೇರಣೆಯಾಗಿದೆ ಎಂದು ಸಾಹಿತಿ ಕೂ.ಗಿ. ಗಿರಿಯಪ್ಪ ತಿಳಿಸಿದರು.
ನಗರದ ಮಿನಿವಿಧಾನ ಸೌಧದ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದ ಅವರು, ಗಂಗಾನದಿಯ ತೀರದಲ್ಲಿ ದಾರಿಹೋಕರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ವಾಲ್ಮೀಕಿ ಮನ ಪರಿವರ್ತನೆಗೊಂಡು ರಾಮಾಯಣ ಎಂಬ ಗ್ರಂಥವನ್ನು ರಚಿಸಿದ್ದಾರೆ . 7 ಸಾವಿರ ವರ್ಷಗಳ ಹಿಂದೆ ಈ ರಾಮಾಯಣ ನಡೆದಿದೆ ಎಂಬ ಮಾಹಿತಿ ಇದೆ. ಏಳು ಕಾಂಡಗಳ ಕಥಾ ಹಂದರಲ್ಲಿ ಮಹಾಕಾವ್ಯ ರಾಮಾಯಣ ಗ್ರಂಥ ರಚನೆಯಾಗಿದೆ ಎಂದರು.
ರಾಮಾಯಣ ಗ್ರಂಥ ಜನರ ಮನಸ್ಸಿನ ಮೇಲೆ ಅಗಾಧವಾದ ಪ್ರಭಾವ ಬೀರಿದೆ. ರಾಮಾಯಣದಂತಹ ಮಹಾಕಾವ್ಯ ವಾಲ್ಮೀಕಿ ಮಹರ್ಷಿಯಂತಹ ಮಹಾಕವಿ ದೊರೆತಿದ್ದು, ಭುವನದ ಭಾಗ್ಯ ಎಂದು ಅನೇಕ ಕವಿ, ಸಾಹಿತಿಗಳು ವರ್ಣನೆ ಮಾಡಿದ್ದಾರೆ. ರಾಮಾಯಣ ಗ್ರಂಥವನ್ನು ಆಧಾರವಾಗಿಟ್ಟು ಕೊಂಡು ಕುವೆಂಪು ಅವರು ಶ್ರೀ ರಾಮಾಯಣ ದರ್ಶನಂ ಎಂಬ ಕೃತಿಯನ್ನು ವಿವಿಧ ಆಯಾಮಗಳಲ್ಲಿ ರಚಿಸಿದ್ದಾರೆ ಎಂದರು.
ಇತಿಹಾಸಕಾರರನ್ನು ಸ್ಮರಿಸಿ: ತಾಪಂ ಇಒ ಮಧು ಮಾತನಾಡಿ, ಆಧುನಿಕ ಸಮಾಜದಲ್ಲಿ ಮೌಲ್ಯಯುತ ಜೀವನ ಮತ್ತು ಬದುಕನ್ನು ಕಟ್ಟಿಕೊಳ್ಳಲು ಸಾಕಷ್ಟು ವಿಚಾರ ವಾಲ್ಮೀಕಿ ಅವರು ರಚಿಸಿರುವ ರಾಮಾಯಣ ಗ್ರಂಥದಲ್ಲಿದೆ. ರಾಮಾಯಣ, ಮಹಾಭಾರತದಂತಹ ಗ್ರಂಥ ಮುಂದಿನಪಿಳಿಗೆಗೂ ತಲುಪಬೇಕು. ಶರಣರು, ದಾರ್ಶನಿಕರು, ಇತಿಹಾಸಕಾರರನ್ನು ಸ್ಮರಿಸಿ ಅವರ ಆಚಾರ-ವಿಚಾರ ಮಾನವ ಕುಲಕ್ಕೆ ತಿಳಿವಳಿಕೆ ನೀಡಿ ಆ ಮೂಲಕ ವಾಲ್ಮೀಕಿಯವರಂತೆ ಸಮಾಜದ ಪರಿವರ್ತನೆ ಮಾಡುವ ಉದ್ದೇಶದಿಂದ ಸರ್ಕಾರ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಗ್ರೇಡ್-2 ತಹಶೀಲ್ದಾರ್ ಶಿವಕುಮಾರ್, ಶಿರಸ್ತೆದಾರ್ ಜಗದೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ, ಬಿಆರ್‌ಸಿ ಶ್ರೀನಿವಾಸ್, ಶಿರಸ್ತೇದಾರ್ ಪ್ರಕಾಶ್, ಸಹಾಯಕ ನಿರ್ದೇಶಕ ಜಯಪ್ರಕಾಶ್, ನಗರಸಭೆ ಪೌರಾಯುಕ್ತೆ ಶುಭಾ, ತಾಪಂ ಸಹಾಯಕ ನಿರ್ದೇಶಕ ಮೋಹನ್ ಬಾಬು, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸತೀಶ್, ಶಿಕ್ಷಕ ಗುರುಮೂರ್ತಿ ಹಾಗೂ ಮತ್ತಿತರರು ಇದ್ದರು.