Advertisement

Valmiki Corporation scam; ಯತ್ನಾಳ್ ಜತೆ ರಮೇಶ ಜಾರಕಿಹೊಳಿ ಪಾದಯಾತ್ರೆ!

05:54 PM Jul 28, 2024 | Team Udayavani |

ಬೆಳಗಾವಿ: ವಾಲ್ಮೀಕಿ ನಿಗಮದ ಹಗರಣ ರಾಜ್ಯದಲ್ಲೇ ಅತ್ಯಂತ ದೊಡ್ಡ ಹಗರಣವಾಗಿದ್ದು, ಅದನ್ನು ನಿಷಪಕ್ಷಪಾತವಾಗಿ ತನಿಖೆ ನಡೆಸುವಂತೆ ಆಗ್ರಹಿಸಿ ನಾನು ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕುಡಲಸಂಗಮದಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದೇವೆ ಎಂದು ಗೋಕಾಕ್ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

Advertisement

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಾಗಿನಿಂದ ಒಂದಿಲ್ಲೊಂದು ಹಗರಣಗಳು ಸಂಭವಿಸುತ್ತಲೇ ಇವೆ. ಅದರಲ್ಲಿ ಅತ್ಯಂತ ದೊಡ್ಡ ಹಗರಣ ವಾಲ್ಮೀಕಿ ನಿಗಮದ ಹಗರಣವಾಗಿದೆ. ವಾಲ್ಮೀಕಿ ನಿಗಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಬೇರೆ,ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿ ದೊಡ್ಡ ಮಟ್ಟದಲ್ಲಿ ಹಗರಣ ನಡೆಸಲಾಗಿದೆ.ಇದನ್ನು ಪ್ರತಿಭಟಸಿ ನಾನು ಮತ್ತು ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ ಅವರು ಬಳ್ಳಾರಿ ವರೆಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದು, ಆದಷ್ಟು ಬೇಗ ಹೈಕಮಾಂಡ್ ಅನುಮತಿ ಪಡೆದು ದಿನಾಂಕ ಪ್ರಕಟಿಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.

”ಪದೇಪದೇ ಮಹಾನಾಯಕ ಎಂದು ಸಂಭೋಧಿಸಿದರೆ ಮಹಾ ನಾಯಕರಿಗೆ ಅಪಮಾನ ಮಾಡಿದಂತಾಗುತ್ತದೆ ಎಂದು ಭಾವಿಸಿ ನಾನು ಮತ್ತು ಎಚ್.ಡಿ.ಕುಮಾರಸ್ವಾಮಿ ಮಹಾನಾಯಕನಿಗೆ ಮರು ನಾಮಕರಣ ಮಾಡಿದ್ದು, ಇನ್ಮುಂದೆ ಅವನು ಮಹಾನಾಯಕ ಅಲ್ಲ ಬದಲಾಗಿ ಅವನು ಸಿ.ಡಿ.ಶಿವು ಎಂದು ಮರುನಾಮಕರಣ ಮಾಡುತ್ತೇವೆ” ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ರಮೇಶ ಜಾರಕಿಹೊಳಿ ಟಾಂಗ್ ನೀಡಿದರು.

ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ನಾವು ಇನ್ನೂ ಒಪ್ಪಿಲ್ಲ. ನಮಗೇನಿದ್ದರೂ ಹೈಕಮಾಂಡ್ ಮುಖ್ಯ. ಹೈಕಮಾಂಡ್ ಅಪ್ಪಣೆ ಮೇರೆಗೆ ನಾನು ಕಾರ್ಯನಿರ್ವಹಿಸುತ್ತೇನೆ ವಿನಃ ರಾಜ್ಯನಾಯಕರ ಅಪ್ಪಣೆ ಮೇರೆಗೆ ಅಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಹಮ್ಮಿಕೊಂಡಿರುವ ಬೆಂಗಳೂರಿನಿಂದ ಮೈಸೂರು ಪಾದಯಾತ್ರೆ ವೇಳೆ ವಾಲ್ಮೀಕಿ ಸಮುದಾಯಕ್ಕೆ ಸೇರಿರುವ ಪ್ರಬಲ ನಾಯಕ ರಮೇಶ್ ಜಾರಕಿಹೊಳಿ ಅವರು ಇನ್ನೊಂದು ಪಾದಯಾತ್ರೆ ನಡೆಸುವುದಾಗಿ ಹೇಳುವ ಮೂಲಕ ಬಿಜೆಪಿಗೆ ಸೆಡ್ಡು ಹೊಡೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next