Advertisement
ಮೂರು ದಿನಗಳಿಂದ ನಾಗೇಂದ್ರ ನಿವಾಸ, ಕಚೇರಿಗಳ ಮೇಲೆ ಇ.ಡಿ. ದಾಳಿ ನಡೆಸಿತ್ತು. ಬಳಿಕ ನಾಗೇಂದ್ರ ಅವರನ್ನು ಬಂಧಿಸಲಾಗಿದೆ. ನಾಗೇಂದ್ರ ಅವರ ಡಾಲರ್ಸ್ ಕಾಲನಿಯ ಫ್ಲ್ಯಾಟ್‌ನಲ್ಲಿ 2 ದಿನಗಳ ಕಾಲ ಶೋಧ ನಡೆಸಿದ್ದ ಇ.ಡಿ. ಅಧಿಕಾರಿಗಳು, ಶುಕ್ರವಾರ ಬೆಳಗ್ಗೆ ಅವರನ್ನು ತಮ್ಮ ವಾಹನ ದಲ್ಲೇ ಇ.ಡಿ. ಕಚೇರಿಗೆ ಕರೆತಂದಿದ್ದರು. ಅವರನ್ನು ರಾತ್ರಿ 9.30ರ ವರೆಗೂ ತೀವ್ರ ವಿಚಾರಣೆಗೆ ಒಳ ಪಡಿಸ ಲಾಗಿತ್ತು. ಹಗರಣದ ಬಗ್ಗೆ ಮಾಹಿತಿ ಇಲ್ಲ ಎಂದಷ್ಟೇ ನಾಗೇಂದ್ರ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಜುಲೈ 10ರಂದು ಇ.ಡಿ. ಅಧಿಕಾರಿ ಗಳು ಮಾಜಿ ಸಚಿವ ನಾಗೇಂದ್ರ ಅವರ ಡಾಲರ್ಸ್ ಕಾಲನಿ ನಿವಾಸ, ಕಚೇರಿ, ಶಾಸಕರ ಭವನದಲ್ಲಿರುವ ಕಚೇರಿ ಸಹಿತ ವಿವಿಧೆಡೆ ಶೋಧ ನಡೆಸಿ ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದ ದಾಖಲೆ ಜಪ್ತಿ ಮಾಡಿದ್ದರು. ಗುರುವಾರ ಮತ್ತೆ ದಾಳಿ ಮುಂದುವರಿಸಿದ್ದರು. ಸುಧೀರ್ಘ ವಿಚಾರಣೆಯ ಅನಂತರ ಕೊನೆಗೂ ಶುಕ್ರವಾರ ಇ.ಡಿ. ಕಚೇರಿಗೆ ಕರೆ ತಂದು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ನಿಗಮದ ಎಂ.ಡಿ. ಪದ್ಮನಾಭ್, ಲೆಕ್ಕಪರಿಶೋಧಕ ಪರಶುರಾಮ್, ನಾಗೇಂದ್ರ ಆಪ್ತರಾದ ನೆಕ್ಕುಂಟಿ ನಾಗರಾಜ್, ನಾಗೇಶ್ವರ್ ರಾವ್ ಇ.ಡಿ. ವಿಚಾರಣೆ ವೇಳೆ ಹಗರಣಕ್ಕೆ ಸಂಬಂಧಿಸಿ ನೀಡಿದ್ದ ಹೇಳಿಕೆಯನ್ನು ಮಾಜಿ ಸಚಿವ ನಾಗೇಂದ್ರ ಮುಂದಿಟ್ಟು ವಿವರಣೆ ಪಡೆದಿದ್ದಾರೆ. ಆದರೆ ನಾಗೇಂದ್ರ ಮಾತ್ರ ಹಗರಣಕ್ಕೂ ತಮಗೂ ಸಂಬಂಧವಿಲ್ಲ ಎಂದೇ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
Related Articles
ವಿಚಾರಣೆಗೆಂದು ಇ.ಡಿ. ಕಚೇರಿಗೆ ಕರೆತರುವ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ನಾಗೇಂದ್ರ ಪ್ರತಿಕ್ರಿಯಿಸಿದ್ದು, “ಮನೆಯಿಂದ ಇ.ಡಿ. ಅಧಿಕಾರಿಗಳು ಅವರ ಕಚೇರಿಗೆ ಕರೆ ತಂದಿದ್ದಾರೆ. ಪ್ರಕರಣದ ಬಗ್ಗೆ ಗೊತ್ತಿಲ್ಲ’ ಎಂದು ಹೇಳುವಷ್ಟರಲ್ಲಿ ಪಕ್ಕದಲ್ಲಿದ್ದ ಇ.ಡಿ. ಅಧಿಕಾರಿಗಳು ನಾಗೇಂದ್ರ ಅವರನ್ನು ಕಚೇರಿಯೊಳಗೆ ಕರೆದೊಯ್ದರು.
Advertisement
ನಾಗೇಂದ್ರ ವಿರುದ್ಧದ ಆರೋಪ, ಸಾಕ್ಷ ಗಳೇನು?-ಹಗರಣದಲ್ಲಿ ನಾಗೇಂದ್ರ ಪಾತ್ರದ ಬಗ್ಗೆ ನಿಗಮದ ಎಂ.ಡಿ. ಪದ್ಮನಾಭ್, ಇತರರು ವಿಚಾರಣೆ ವೇಳೆ ಕೊಟ್ಟ ಹೇಳಿಕೆ.
-ಯೂನಿಯನ್ ಬ್ಯಾಂಕ್‌ನಲ್ಲಿ ಸುಳ್ಳು ದಾಖಲೆ ನೀಡಿ ಅಕ್ರಮ ಖಾತೆ ತೆರೆದು, ನಿಗಮದ ಹಣ ವರ್ಗಾವಣೆ ಬಗ್ಗೆ ನಾಗೇಂದ್ರ ಅವರ ಪಿ.ಎ. ಹರೀಶ್ ಹೇಳಿಕೆ
-ಐಷಾರಾಮಿ ಹೊಟೇಲ್ ಒಂದಕ್ಕೆ ಡೀಲ್ ಸಂಬಂಧ ಮಾತುಕತೆಗೆ ಸ್ವತಃ ಹೋಗಿರುವ ಶಂಕೆ
-ಆಪ್ತರ ಜತೆ ಮಾತುಕತೆ ನಡೆಸಿರುವುದಕ್ಕೆ ತಾಂತ್ರಿಕ ಸಾಕ್ಷ್ಯ
-ಡೀಲ್‌ನಲ್ಲಿ ನಾಗೇಂದ್ರ ಪಿ.ಎ. ದೇವೇಂದ್ರಪ್ಪ, ಆಪ್ತ ನೆಕ್ಕುಂಟಿ ನಾಗರಾಜ್, ಸಂಬಂಧಿ ನಾಗೇಶ್ವರ್ ರಾವ್ ಭಾಗಿ ಶಂಕೆ
-ಹೊಸ ಬ್ಯಾಂಕ್ ಖಾತೆ ತೆರೆದು ನಿಗಮದ ದುಡ್ಡು ವರ್ಗಾವಣೆ ಮಾಡಲು ನಾಗೇಂದ್ರ ಒತ್ತಡ: ಆರೋಪಿಗಳ ಹೇಳಿಕೆ?
-ಮಾಜಿ ಸಚಿವರ ಆಪ್ತರ ಕೋಟ್ಯಂತರ ರೂ. ವಹಿವಾಟಿನ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಂದ ಕೆಲವು ದಾಖಲೆ ಸಲ್ಲಿಕೆ?
-ಆತ್ಮಹತ್ಯೆ ಮಾಡಿಕೊಂಡ ನಿಗಮದ ಅಧಿಕಾರಿ ಚಂದ್ರಶೇಖರ್ ಡೆತ್‌ನೋಟ್‌ನಲ್ಲಿ ಸಚಿವರು ಕಾರಣ ಎಂದು ಉಲ್ಲೇಖ
-ಮಹರ್ಷಿ ವಾಲ್ಮೀಕಿ ನಿಗಮದ ಮಾಜಿ ಎಂ.ಡಿ. ಪದ್ಮನಾಭ್, ನಾಗೇಂದ್ರ ಆಪ್ತ ಸಹಾಯಕ ಹರೀಶ್‌ಗೆ 25 ಲಕ್ಷ ರೂ. ನೀಡಿರುವುದು. ಎಸ್‌ಐಟಿಯಿಂದ ಶಾಸಕ ದದ್ದಲ್ ವಿಚಾರಣೆ
ಬೆಂಗಳೂರು: ಮಹರ್ಷಿ ವಾಲ್ಮೀಕಿ ನಿಗಮದ ಅಧ್ಯಕ್ಷ ಹಾಗೂ ರಾಯ ಚೂರು ಗ್ರಾಮಾಂ ತರ ವಿಧಾನಸಭಾ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ್ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ವಿಚಾರಣೆಗೆ ಶುಕ್ರವಾರ ಹಾಜರಾಗಿದ್ದಾರೆ. ಸೋಮವಾರ ಮತ್ತೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ನೀಡಿದೆ. ಬಂಧನ ಭೀತಿಯಿಂದ ದದ್ದಲ್ ಶುಕ್ರವಾರ ಇ.ಡಿ. ಅಧಿಕಾರಿಗಳ ಕಣ್ತಪ್ಪಿಸಿ, ಯಲಹಂಕದ ನಿವಾಸದಿಂದ ನೇರವಾಗಿ ಎಸ್‌ಐಟಿ ಕಚೇರಿಯತ್ತ ಸಾಗಿದ್ದರು ಎನ್ನಲಾಗಿದೆ. ಇತ್ತ ಇ.ಡಿ. ಅಧಿಕಾರಿಗಳು ದದ್ದಲ್‌ಗಾಗಿ ಶೋಧ ನಡೆಸಿದಾಗ ಎಸ್‌ಐಟಿ ಕಚೇರಿಯಲ್ಲಿ ಇರುವುದು ತಿಳಿದು ಬಂದಿತ್ತು. ನಾಗೇಂದ್ರ ಅವರ ಹೇಳಿಕೆ ದಾಖಲಿಸಲು ಇ.ಡಿ. ಕರೆದುಕೊಂಡು ಹೋಗಿದೆ ಎಂಬುದಷ್ಟೇ ಗೊತ್ತು. ಉಳಿದ ವಿಷಯಗಳು ಗೊತ್ತಿಲ್ಲ. ಗೊತ್ತಿಲ್ಲದೆ ನಾನು ಏನೂ ಹೇಳಲು ಬಯಸುವುದಿಲ್ಲ. ಎಸ್‌ಐಟಿ ತನಿಖೆ ಮಾಡುತ್ತಿದೆ. ಇ.ಡಿ.ಯೂ ತನಿಖೆ ಮಾಡುತ್ತಿದೆ. ಇದು ರಾಜಕೀಯ ಪ್ರೇರಿತ ಅನ್ನಿಸುತ್ತದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ