ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಕೋಟ್ಯಂತರ ರೂ. ಹಗರಣದ ಸಂಬಂಧ ಮೂವರು ಐಎಎಸ್ ಅಧಿಕಾರಿಗಳಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ಭೀತಿ ಎದುರಾಗಿದ್ದು, ಶೀಘ್ರದಲ್ಲೇ ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಪ್ರಕ ರಣದ ಇ.ಡಿ. ತನಿಖೆಯು ಬಗೆದಷ್ಟು ಆಳಕ್ಕೆ ಹೋಗುತ್ತಿದೆ. ಇದೀಗ ಹಣಕಾಸು ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಐಎಎಸ್ ಅಧಿಕಾರಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲು ಇ.ಡಿ. ಸದ್ದಿಲ್ಲದೆ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.
ಮಾಜಿ ಸಚಿವ ಬಿ. ನಾಗೇಂದ್ರ, ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ ಹಾಗೂ ನಿಗಮದ ಕೆಲವು ಅಧಿಕಾರಿಗಳು ವಿಚಾರಣೆ ವೇಳೆ ಕೊಟ್ಟ ಮಾಹಿತಿ ಆಧರಿಸಿ ಇ.ಡಿ. ತನಿಖೆ ಮುಂದುವರಿಸಿತ್ತು. ಈ ವೇಳೆ ಹಣಕಾಸು ಇಲಾಖೆಯಿಂದ ವಾಲ್ಮೀಕಿ ನಿಗಮಕ್ಕೆ ದುಡ್ಡು ಒದಗಿಸಲು ಅನುಮತಿ ಕೊಟ್ಟಿರುವುದು ಸೇರಿದಂತೆ ದೊಡ್ಡ ಮೊತ್ತದ ಹಣ ವರ್ಗಾವಣೆ ನಡೆಸಿ ಅಕ್ರಮ ಎಸಗಿರುವುದು ಈ ಮೂವರು ಐಎಎಸ್ ಅಧಿಕಾರಿಗಳ ಗಮನಕ್ಕೆ ಬಂದಿರಲಿಲ್ಲವೇ ಎಂಬಿತ್ಯಾದಿ ಅನುಮಾನಗಳು ಹುಟ್ಟಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿಚಾರಣೆ ನಡೆಸಿ ನಿಗಮದ ದೊಡ್ಡ ಮೊತ್ತದ ದುಡ್ಡಿನ ರಹಸ್ಯ ಕೆದಕಲು ಇ.ಡಿ. ಮುಂದಾಗಿದೆ ಎನ್ನಲಾಗಿದೆ.
ಹಗರಣದ ಮಾಹಿತಿ ಕಲೆ ಹಾಕುತ್ತಿರುವ ಸಿಬಿಐ
ಇಡಿ ತನಿಖೆಯ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು ಹಗರಣದ ಇಂಚಿಂಚೂ ಮಾಹಿತಿ ಹಾಗೂ ದಾಖಲೆ ಕಲೆ ಹಾಕಲು ಪ್ರಾರಂಭಿಸಿದ್ದಾರೆ. ನಿಗಮದಿಂದ ಬ್ಯಾಂಕ್‌ಗೆ ಹಣ ವರ್ಗಾವಣೆ ಮಾಡಲು ಸಹಕರಿಸಿದ ಬ್ಯಾಂಕ್ ಸಿಬಂದಿಯ ವಿರುದ್ಧ ಸಿಬಿಐ ಸಾಕ್ಷ್ಯ ಸಂಗ್ರಹಿಸಿದೆ. ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಗೌಪ್ಯವಾಗಿ ಸಿಬಿಐ ಮಾಹಿತಿ ಕಲೆ ಹಾಕುತ್ತಿದೆ ಎನ್ನಲಾಗಿದೆ. ಬ್ಯಾಂಕ್ ಅವ್ಯವಹಾರದ ತನಿಖೆ ನಡೆಸಿದ ಬಳಿಕ ಹಗರಣದಲ್ಲಿ ಶಾಮೀಲಾದ ಮಾಜಿ ಸಚಿವ ನಾಗೇಂದ್ರ ಸೇರಿ ಇತರ ಆರೋಪಿಗಳನ್ನು ಸಿಬಿಐ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ. ಹಗರಣದಲ್ಲಿ ಶಾಮೀಲಾದ ಕೆಲವರಿಗೆ ಇಡಿ ಬೆನ್ನಲ್ಲೇ ಸಿಬಿಐ ಭೀತಿಯೂ ಎದುರಾಗಿದೆ.
ಬ್ಯಾಂಕ್ ಅವ್ಯವಹಾರದ ಬಗ್ಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಡಿಜಿಎಂ ಜೆ. ಮಹೇಶ್ ಸಿಬಿಐಗೆ ದೂರು ನೀಡಿದ್ದರು. ಫೆ. 21ರಿಂದ ಮೇ 6ರವರೆಗೆ ಬ್ಯಾಂಕ್‌ನಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿಬಿಐಗೆ ಒದಗಿಸಿದ್ದರು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಂಜಿ ರಸ್ತೆ ಶಾಖೆಯ ಮುಖ್ಯ ವ್ಯವಸ್ಥಾಪಕಿಯರಾದ ಶುಚಿಸ್ಮಿತಾ ರಾವುಲ್ (ಎ1), ಡಿ.ದೀಪಾ (ಎ2), ಬ್ಯಾಂಕ್‌ನ ಕ್ರೆಡಿಟ್ ಆಫೀಸರ್ ವಿ.ಕೃಷ್ಣಮೂರ್ತಿ (ಎ3) ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿಕೊಂಡಿತ್ತು.
ಬೆಳವಣಿಗೆಗಳೇನು?
-ವಾಲ್ಮೀಕಿ ನಿಗಮ ಅಧ್ಯಕ್ಷ ದದ್ದಲ್,ಮಾಜಿ ಸಚಿವ ನಾಗೇಂದ್ರ ವಿಚಾರಣೆ ವೇಳೆ ಹಲವು ಮಾಹಿತಿ ಬಹಿರಂಗ?
-ಹಣಕಾಸು, ಸಮಾಜ ಕಲ್ಯಾಣ ಇಲಾಖೆಯ ಐಎಎಸ್ ಅಧಿಕಾರಿಗಳಿಗೆ ನೋಟಿಸ್ ಸಾಧ್ಯತೆ
-ಅಧಿಕಾರಿಗಳ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲು ಇ.ಡಿ.ಯಿಂದ ಸದ್ದಿಲ್ಲದೇ ಸಿದ್ಧತೆ