ಬೆಂಗಳೂರು: ಮುಂದಿನ ವಿಧಾನಸಭೆಯಲ್ಲಿ ಸಮುದಾಯವಾರು ಬೆಂಬಲ ಪಡೆಯುವ ನಿಟ್ಟಿನಲ್ಲಿ ನಿರಂತರ ಸಮಾವೇಶ ನಡೆಸಲು ಮುಂದಾಗಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ವಾಲ್ಮೀಕ ಸಮುದಾಯದ ಸಮಾವೇಶ ನಡೆಸುವ ಸಂಬಂಧ ಮುಖಂಡರ ಜತೆ ಸಮಾಲೋಚನೆ ನಡೆಸಿದರು.
ಸೋಮವಾರ ಪಕ್ಷದ ಕಚೇರಿ ಜೆಪಿ ಭವನದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರ ಜತೆ ಪೂರ್ವಭಾವಿ ಸಭೆ ನಡೆಸಿದ ಗೌಡರು, ಸಮಾವೇಶ ಎಲ್ಲಿ ನಡೆಸಬೇಕು ಎಂಬುದರ ಬಗ್ಗೆ ಸಲಹೆ ಪಡೆದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾಡಬಹುದೇ? ಅಥವಾ ಆ ಸಮುದಾಯ ಹೆಚ್ಚಾಗಿರುವ ಜಿಲ್ಲಾ ಕೇಂದ್ರದಲ್ಲಿ ಮಾಡಬಹುದೇ? ಎಂಬ ಬಗ್ಗೆ ಚರ್ಚಿಸಿದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಕಾರಕ್ಕೆ ಬಂದರೆ ವಾಲ್ಮೀಕಿ ಸಮುದಾಯದ ಅಭಿವೃದ್ಗೆ ಕ್ರಮ ಕೈಗೊಳ್ಳಲಾಗುವುದು. ಸಮುದಾಯದ ಎಲ್ಲ ಬೇಡಿಕೆಗಳ ಬಗ್ಗೆಯೂ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು.
ಮೇ ವೇಳೆಗೆ ಸಮಾವೇಶ ಸಾಧ್ಯತೆ: ಮೇ ಮೊದಲ ವಾರ ಅಥವಾ ಕೊನೇ ವಾರದಲ್ಲಿ ವಾಲ್ಮೀಕಿ ಸಮುದಾಯದ ಸಮಾವೇಶ ಆಯೋಜಿಸುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು. ಇದರ ಜತೆಗೆ ಹಿಂದುಳಿದ ವರ್ಗಗಳ ಸಮಾವೇಶದ ಬಗ್ಗೆಯೂ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ದೇವೇಗೌಡರು, ವಾಲ್ಮೀಕಿ ಒಬ್ಬ ಮಹಾನ್ ವ್ಯಕ್ತಿ. ಆ ಸಮುದಾಯದಕ್ಕೆ ಸೇರಿದವರ ಸ್ಥಿತಿ ಇಂದು ಕಷ್ಟವಾಗಿದೆ. ನಮ್ಮ ಪಕ್ಷಕ್ಕೆ ಶಕ್ತಿ ಬಂದರೆ ಆ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂಬ ಆಸೆ ಇದೆ. ಸಮುದಾಯದ ಮುಖಂಡರ ಜತೆ ಮಾತನಾಡಿದ್ದೇನೆ. ಸಮಾವೇಶಗಳ ಬಗ್ಗೆಯೂ ಚರ್ಚೆ ನಡೆಯಿತು ಎಂದು ಹೇಳಿದರು.
ಕಷ್ಟ ಪಟ್ಟರೆ 120 ಸೀಟು ಕಷ್ಟವಲ್ಲ: ನನಗೆ ಮತ್ತೆ ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಆಗಬೇಕೆಂಬ ಆಸೆಯಿಲ್ಲ. ಜಾತ್ಯತೀತ ಜನತಾದಳ ಮೂಲಕ ಎಲ್ಲ ಸಣ್ಣ ಮತ್ತು ಹಿಂದುಳಿದ ಸಮುದಾಯಗಳಿಗೆ ಶಕ್ತಿ ತುಂಬುವುದು ನನ್ನ ಆಸೆ. ನಮ್ಮ ಕಾರ್ಯಕರ್ತರು ಮತ್ತು ಮುಖಂಡರು ಕಷ್ಟ ಪಟ್ಟರೆ 120 ಸೀಟು ಗೆಲ್ಲವುದು ಕಷ್ಟವಲ್ಲ ಎಂದು ತಿಳಿಸಿದರು. ಯಾರೋ ಮಹಾನುಭಾವರು, ಜೆಡಿಎಸ್ 120 ಸೀಟು ಗೆದ್ದರೆ ದೇಶಾನೇ ಬಿಡ್ತೀನಿ ಅಂತ ಹೇಳಿದ್ದಾರೆ. ಅಣಕು ಮಾತು ಕೇಳಿದಾಗ ನೋವಾಗುತ್ತದೆ. ಆದರೆ, ಒಂದು ಮಾತಂತೂ ನಿಜ. ಜೆಡಿಎಸ್‌ಗೆ ರಾಜ್ಯದಲ್ಲಿ ಭವಿಷ್ಯ ಇದೆ. ನೆಲೆಯೂ ಇದೆ. ಇದನ್ನು ಕಾರ್ಯಕರ್ತರು ಸಾಬೀತುಪಡಿಸಬೇಕು ಎಂದು ಹೇಳಿದರು.
ವಿಶ್ವನಾಥ್ ಸೇರ್ಪಡೆ ಗುಸು ಗುಸು
ಕಾಂಗ್ರೆಸ್ ಮುಖಂಡ ಎಚ್.ವಿಶ್ವನಾಥ್ ಜೆಡಿಎಸ್ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿ ಕುರಿತು ಕೆಲವರು ಮುಖಂಡರು ಗೌಡರ ಬಳಿ ಪ್ರಸ್ತಾಪಿಸಿದರು. ಆದರೆ, ಆ ಕುರಿತು ನನ್ನ ಜತೆ ಯಾರೂ ಮಾತನಾಡಿಲ್ಲ. ಸ್ಥಳೀಯ ನಾಯಕರು ಮಾತನಾಡಿರಬಹುದೇನೋ? ಆದರೆ, ಸದ್ಯಕ್ಕೆ ಅಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.