ಕೆಜಿಎಫ್: ಕೆ.ಸಿ. ವ್ಯಾಲಿ, ಎತ್ತಿನಹೊಳೆ ಮತ್ತು ಎಚ್.ಎನ್. ವ್ಯಾಲಿ ಯೋಜನೆಗೆ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಭಗೀರಥ ರಾಗಿದ್ದಾರೆ. ಒಬ್ಬರೇ ಅನ್ನುವುದು ಹಾಸ್ಯಾಸ್ಪದಆಗುತ್ತದೆ ಎಂದು ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಹೇಳಿದರು.
ಬೇತಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗೆ ನೀರನ್ನು ತುಂಬುವುದರಿಂದ ರೈತರ ಬದುಕು ಹಸನಾಗುತ್ತದೆಎಂದು ಎಲ್ಲರ ಪ್ರಯತ್ನದಿಂದ ಯೋಜನೆಯನ್ನು ಜಾರಿಗೆ ತರಲಾಯಿತು. ಇದರಲ್ಲಿ ಒಬ್ಬರೇ ಭಗೀರಥರಾಗಲು ಸಾಧ್ಯವಿಲ್ಲ. ಆ ರೀತಿಯಲ್ಲಿ ಯಾಕೆ ಬಿಂಬಿಸುತ್ತಿದ್ದಾರೆಯೋ ತಿಳಿದಿಲ್ಲ ಎಂದು ಹೇಳಿದರು.
15 ಅಡಿಗೆ ನೀರು ಸಿಗುವ ಕಾಲ ಬರುತ್ತೆ: ಯೋಜನೆ ಜಾರಿಗೆ ತರಲು ಎಲ್ಲಾ ಪಕ್ಷಗಳ ಸಂಸದರು, ಶಾಸಕರು, ಸಂಘ ಸಂಸ್ಥೆಗಳ ಹೋರಾಟಗಾರರು ಕಾರಣಕರ್ತರಾಗಿದ್ದಾರೆ. ಯೋಜನೆಗೆ ಹಣ ಮಂಜೂರು ಮಾಡಿ ಸಿದ್ದರಾಮಯ್ಯ ಐತಿಹಾಸಿಕ ನಿರ್ಣಯ ಕೈಗೊಂಡರು.ಎರಡನೇ ಹಂತದಲ್ಲಿ ನೀರನ್ನು ಶುದ್ಧೀಕರಿಸಿ ಬಿಡಬಹುದು. ಆದರೆ, ಕುಡಿಯಲು ಅಲ್ಲ ಎಂದು ಹೇಳಲಾಗಿತ್ತು.
50 ವರ್ಷದ ಹಿಂದೆ 10-15 ಅಡಿಗಳಲ್ಲಿ ನೀರನ್ನು ನೋಡಿದ್ದೆವು. ಅದೇ ಕಾಲ ಮುಂದೆ ಬರುವ ವಾತಾವರಣ ಬರಲಿದೆ ಎಂದು ಹೇಳಿದರು. 240 ಕೋಟಿ ರೂ. ಬಿಡುಗಡೆ: ಕೋಲಾರ, ಚಿಕ್ಕ ಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಮಲೆನಾಡಾಗಿ ಪರಿವರ್ತನೆಯಾಗುತ್ತದೆ. 1992-93ರಲ್ಲಿ ಗಂಗಾ ಕಾವೇರಿ ಜೋಡಣೆ ಮಾಡಬೇಕೆಂದುಸಂಸತ್ತಿನಲ್ಲಿ ಪ್ರತಿಪಾದಿಸಿದ್ದೆ. ಬಯಲು ಸೀಮೆಗೆ ನೀರಿಲ್ಲ, ನದಿ ನಾಲೆ ಇಲ್ಲ ಎಂದು ವಸ್ತುಸ್ಥಿತಿವಿವರಿಸಿದಾಗ, ಪ್ರಧಾನಿ ನರಸಿಂಹರಾವ್ ಮತ್ತು ಜಲ ಸಂಪನ್ಮೂಲ ಸಚಿವರಾದ ವಿದ್ಯಾಚರಣ ಶುಕ್ಲ, ನಿಮ್ಮಲ್ಲಿ ನದಿಗಳು ಇಲ್ಲದೆ ಇದ್ದರೆ ಕೆರೆಗಳನ್ನು ತುಂಬಲು ಹಣ ಕೊಡುತ್ತೇವೆ ಎಂದು 240 ಕೋಟಿ ರೂ. ಅನುದಾನ ಕೆರೆಗೆ ನೀರು ತುಂಬಲು ಬಿಡುಗಡೆ ಮಾಡಿದರು ಎಂದು ವಿವರಿಸಿದರು.
ಇದನ್ನೂ ಓದಿ;- ಅವರನ್ನು ‘ಹೀರೋ’ ಎಂದು ಕರೆಯುತ್ತಾರೆ ಆದ್ರೆ ಇನ್ನು ಸಂಭಾವನೆ ಮಾತ್ರ ಸಿಕ್ಕಿಲ್ಲ !|
ಅಧಿಕಾರಿಗಳು ಪ್ರಾಮಾಣಿಕವಾಗಿ ದುಡಿದರು: ಜಲ ಸಂವರ್ಧನೆ ಯೋಜನೆಯಡಿ ವಿಶ್ವ ಬ್ಯಾಂಕ್ ಯೋಜನೆ ಜಾರಿಗೆ ತರಲಾಯಿತು. ನಂತರ ಕೆರೆಗಳನ್ನು ತುಂಬುವುದೊಂದೆ ಮಾರ್ಗ ಎಂದು ಕೆ.ಸಿ. ವ್ಯಾಲಿ, ಎತ್ತಿನ ಹೊಳೆ ಯೋಜನೆ ಜಾರಿಗೆ ತರಲಾಯಿತು. ಜಿಲ್ಲಾಧಿಕಾರಿ ಆಗಿದ್ದ ದಿವಂಗತ ಡಿ.ಕೆ.ರವಿ ಸೇರಿ ಹಲವು ಅಧಿಕಾರಿಗಳು ಪ್ರಾಮಾಣಿಕವಾಗಿ ದುಡಿದರು ಎಂದು ಹೇಳಿದರು.
ಮಾಜಿ ಸ್ಪೀಕರ್‌ಗೆ ಟಾಂಗ್: ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಒಪ್ಪಿಗೆ ನೀಡಿದ ಮೇಲೆ ಅವರ ಸಂಪುಟದಲ್ಲಿದ್ದ ಕೃಷ್ಣಬೈರೇಗೌಡ, ರಮೇಶ್ ಕುಮಾರ್ ಮೊದಲಾದ ಮಂತ್ರಿಗಳು ಮುಂದುವರಿಸಿದರು. ಇವೆಲ್ಲವೂ ಕೆಲವರಿಗೆ ಜ್ಞಾಪಕ ಬರುವುದಿಲ್ಲ ಎಂದು ರಮೇಶ್‌ಕುಮಾರ್ ಅವರಿಗೆ ಟಾಂಗ್ ನೀಡಿದರು.
ಬೆಲೆ ಏರಿಕೆ ಮಾಡಿದ್ದೇಕೆ?: ದಿನನಿತ್ಯ ಇಂಧನ, ಗ್ಯಾಸ್ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಕಷ್ಟದಲ್ಲಿದ್ದಾರೆ. 2103ರಲ್ಲಿ ಯುಪಿಎ ಸರ್ಕಾರ ಇದ್ದಾಗ ಬ್ಯಾರಲ್ ಬೆಲೆ ಏನಿತ್ತೋ ಅದೇ ಬೆಲೆ ಈಗ ಇದೆ. ಆದರೆ, ಮಾರುಕಟ್ಟೆ ದರ ಮಾತ್ರ ಡಬ್ಬಲ್ ಆಗಿದೆ. ಲಾಭದ ಹಣ ಆರ್‌ಎಸ್‌ಎಸ್ ಫಂಡ್‌ಗೆ ಕಳಿಸುತ್ತಿದ್ದೀರಾ. ಜನರ ರಕ್ತ ಹೀರಲಾಗುತ್ತಿದೆ. ಎನ್‌ಡಿಸಿ ಸರ್ಕಾರ ಸಿಕ್ಕಾಪಟ್ಟೆ ಬೆಲೆ ಏರಿಕೆ ಮಾಡಿರುವುದು ಏಕೆ ಎಂದು ಮಾಜಿ ಸಂಸದರು ಪ್ರಶ್ನಿಸಿದರು.
ಮುಂದೆ ಕೈ ಅಧಿಕಾರಕ್ಕೆ ಬರುತ್ತೆ: ಬೆಲೆ ಏರಿಕೆಯಿಂದ ಕೃಷಿಕನ ಕಷ್ಟ ಹೆಚ್ಚಾಗಿದೆ. ಮಾರಾಟ ಮಾಡಿದರೆ ಕೈಗೆ ಲಾಭ ಬರುತ್ತಿಲ್ಲ. ಬೆಳೆದ ಬೆಳೆಗೆ ಲಾಭ ಬರುವ ಖಾತ್ರಿ ಇಲ್ಲ. ಬಹುದೊಡ್ಡ ಕಂಪನಿಗಳಿಗೆ ಸಾರ್ವಜನಿಕ ಉದ್ದಿಮೆಗಳನ್ನು ಮುಚ್ಚಿ ಮಾರುತ್ತಿದ್ದಾರೆ. ಅದಾನಿ, ಅಂಬಾನಿಗಳು ಶ್ರೀಮಂತರಾಗುತ್ತಲೇ ಇದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಮುನಿಯಪ್ಪ ಹೇಳಿದರು.
2017ರಲ್ಲಿ ಸಂಸದರ ಅನುದಾನದಲ್ಲಿ ಮತ್ತು ಇತ್ತೀಚಿಗೆ ಶಾಸಕಿ ಎಂ.ರೂಪಕಲಾ ಅವರು ಬೇತ ಮಂಗಲ ಜಲಾಶಯವನ್ನು ಶುದ್ಧೀಕರಣ ಮಾಡಲಾದ ಪರಿಣಾಮವಾಗಿ ಕೆರೆಯಲ್ಲಿ ನೀರು ತುಂಬಿತು. ಕೆ.ಸಿ ವ್ಯಾಲಿ ನೀರನ್ನು ಇಲ್ಲಿಯವರೆಗೂ ತುಂಬಲು ಮೂಲ ಉದ್ದೇಶವಾಗಿತ್ತು ಎಂದು ಹೇಳಿದರು. ಶಾಸಕಿ ಎಂ.ರೂಪಕಲಾ, ಮುಖಂಡರಾದ ಅ.ಮು. ಲಕ್ಷ್ಮೀನಾರಾಯಣ, ಅಪ್ಪಿರೆಡ್ಡಿ, ನಾಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣರೆಡ್ಡಿ, ಮೊದಲೈಮುತ್ತು, ಎಪಿಎಂಸಿ ಅಧ್ಯಕ್ಷ ವಿಜಯರಾಘವರೆಡ್ಡಿ, ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಉಪಾಧ್ಯಕ್ಷೆ ದೇವಿ,ಮಾಜಿ ಅಧ್ಯಕ್ಷ ರಮೇಶ್‌ಕುಮಾರ್, ವಿವಿಧ ಗ್ರಾಪಂ ಅಧ್ಯಕ್ಷರು, ನಗರಸಭೆ ಸದಸ್ಯರು ಹಾಜರಿದ್ದರು.
ವ್ಯಾಲಿ ನೀರಿಂದ ರೋಗಗಳು ಹರಡುತ್ತೆ ಎಂಬುದು ಸುಳ್ಳು;-
ಬೇತಮಂಗಲ: ಕೆಲವರು ಕೆ.ಸಿ.ವ್ಯಾಲಿ ನೀರಿನಿಂದ ರೋಗಗಳು ಹರಡುತ್ತವೆ ಎಂದು ಸುಳ್ಳು ವಂದತಿ ಹಬ್ಬಿಸುತ್ತಿದ್ದು, ಇದನ್ನು ನಿಲ್ಲಸಬೇಕೆಂದು ಕೇಂದ್ರ ಮಾಜಿ ಸಚಿವ ಕೆ.ಎಚ್ ಮುನಿಯಪ್ಪ ಹೇಳಿದರು. ಪಟ್ಟಣದ ಇತಿಹಾಸ ಪ್ರಸಿದ್ಧ ಪಾಲಾರ್ ಕೆರೆಯು ತುಂಬಿ ಕೋಡಿ ಹರಿದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಬಯಲುಸೀಮೆ ಜಿಲ್ಲೆಗಳ ಕೆರೆಗಳನ್ನು ತುಂಬಿಸಿ, ರೈತರ ಕೊಳವೆ ಬಾವಿಗಳು ಮರುಪೂರಣಗೊಳಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಅವಧಿಯಲ್ಲಿ ಪಕ್ಷಾತೀತವಾಗಿ ಕೆ.ಸಿ.ವ್ಯಾಲಿ ಮತ್ತು ಎತ್ತಿನಹೊಳೆ ಯೋಜನೆ ಕಾರ್ಯರೂಪಕ್ಕೆ ತರಲಾಯಿತು ಎಂದು ತಿಳಿಸಿದರು.
ಕಟ್ಟೆಚ್ಚರವಹಿಸಲು ಸೂಚನೆ: ಶಾಸಕಿ ಎಂ.ರೂಪಕಲಾ ಮಾತನಾಡಿ, ಕೊಟ್ಟ ಮಾತಿನಂತೆ ಬಿಇಎಂಎಲ್ ಕಾರ್ಖಾನೆ ಸಹಕಾರದೊಂದಿಗೆ ತಮ್ಮ ಸ್ವಂತ ಹಣದಿಂದ ಕೆರೆಯಲ್ಲಿದ್ದ ಗಿಡ ಗಂಟಿ ತೆರವುಗೊಳಿಸಿದ್ದೆ. ಇಂದು 1,300 ಎಕರೆಗಿಂತ ಹೆಚ್ಚು ಪ್ರದೇಶದಲ್ಲಿ ನೀರು ತುಂಬಿದೆ. ಕ್ಷೇತ್ರದ ಜನರಿಗೆ ಕುಡಿಯುವ ನೀರು ಒದಗಿಸಿದ್ದ ಕೆರೆಯು 10 ವರ್ಷಗಳಿಂದ ಬರಿದಾಗಿತ್ತು. 2007ರಲ್ಲಿ ಕೋಡಿ ಹರಿದಿದ್ದರೂ ನೀರು ಹೆಚ್ಚಿನ ಕಾಲ ಇರಲಿಲ್ಲ.ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕಟ್ಟೆಚ್ಚರ ವಹಿಸಲು ಸೂಚಿಸುತ್ತೇನೆ ಎಂದು ತಿಳಿಸಿದರು.
ದೇವರಿಗೆ ಪೂಜೆ: ಗ್ರಾಮದ ವಿಜಯೇಂದ್ರ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಶಾಸಕರು, ಕಾರ್ಯಕರ್ತರೊಂದಿಗೆ ನಾದಸ್ವರ ವಿದ್ವಾನ್ ರಮೇಶ್ ನೇತೃತ್ವದಲ್ಲಿ 1.ಕಿ.ಮೀ. ದೂರದ ಪಾಲಾರ್ ಕೆರೆಗೆ ಕಾಲ್ನಡಿಗೆಯಲ್ಲೇ ಬಂದು ಸಂಗಮೇಶ್ವರ ದೇಗುಲ ಮುಂಭಾಗ ಪೂಜೆ ಸಲ್ಲಿಸಿ, ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಅವರೊಂದಿಗೆ ಬಾಗಿನ ಅರ್ಪಿಸಿದರು.
ಜಿಪಂ ಮಾಜಿ ಸದಸ್ಯ ಅ.ಮು. ಲಕ್ಷ್ಮೀನಾರಾಯಣ, ವಿಜಿಯಶಂಕರ್, ಅಪ್ಪಿ ರೆಡ್ಡಿ, ಎಪಿಎಂಸಿ ಅಧ್ಯಕ್ಷ ವಿಜಯ್‌ರಾಘವ ರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣರೆಡ್ಡಿ, ಎಪಿಎಂಸಿ ನಿರ್ದೇಶಕ ರಾಮಚಂದ್ರ, ಉಪಾಧ್ಯಕ್ಷೆ ಯಶೋದಮ್ಮ, ಗ್ರಾಪಂ ಅಧ್ಯಕ್ಷರಾದ ರಾಂಬಾಬು, ಪವಿತ್ರಾ, ಉಪಾಧ್ಯಕ್ಷ ಶ್ರೀರಾಮಪ್ಪ, ತಾಪಂ ಸದಸ್ಯ ಜಯರಾಮರೆಡ್ಡಿ, ಮುಖಂಡರಾದ ಪದ್ಮನಾಭರೆಡ್ಡಿ, ಅನಂತರಾಮಾಪುರ ನಾರಾಯಣಪ್ಪ, ಸುಬ್ಟಾರೆಡ್ಡಿ, ಮಂಜುನಾಥ್, ಸುರೇಂದ್ರಗೌಡ ಇತರರಿದ್ದರು.