Advertisement

ಕರ್ನಾಟಕ ಬಂದ್‌ ಬೆಂಬಲಕ್ಕೆ ವಾಟಾಳ್‌ ಮನವಿ

01:26 PM May 31, 2017 | Team Udayavani |

ದಾವಣಗೆರೆ: ಸಮಗ್ರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಹಾಗೂ ಆಯಾ ಪ್ರದೇಶದ ಬೇಡಿಕೆ ಈಡೇರಿಕೆ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆಯಲು ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಜೂನ್‌ 12ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಸಾರ್ವಜನಿಕರು ಬೆಂಬಲಿಸುವಂತೆ ಒಕ್ಕೂಟದ ಮುಖಂಡ ವಾಟಾಳ್‌ ನಾಗರಾಜ್‌ ಮನವಿ ಮಾಡಿದ್ದಾರೆ.

Advertisement

ರಾಜಧಾನಿ ಬೆಂಗಳೂರು ಸೇರಿದಂತೆ ಬಯಲುಸೀಮೆ, ಉತ್ತರ ಕರ್ನಾಟಕ, ಹೈದರಾಬಾದ್‌ ಕರ್ನಾಟಕದ ಜಿಲ್ಲೆಗಳಲ್ಲಿ ಹಲವು ದಶಕಗಳಿಂದ ಜನರು ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಹಾಗೂ ನೀರಾವರಿ ಯೋಜನೆ ಜಾರಿಗೆ ಹೋರಾಟ ಮಾಡುತ್ತಿದ್ದರೂ ಈವರೆಗೂ ಸರ್ಕಾರಗಳು ಸೂಕ್ತವಾಗಿ ಸ್ಪಂದಿಸಿಲ್ಲ.

ಹಾಗಾಗಿ ಆಯಾ ಪ್ರದೇಶದ ಜನರ ಬೇಡಿಕೆ ಈಡೇರಿಕೆಗಾಗಿ ರಾಜ್ಯದ 2000ಕ್ಕೂ ವಿವಿಧ ಸಂಘ-ಸಂಸ್ಥೆಗಳ ಬೆಂಬಲದೊಂದಿಗೆ ಕರ್ನಾಟಕ ಬಂದ್‌ ಮೂಲಕ ಉಭಯ ಸರ್ಕಾರಗಳನ್ನು ಒತ್ತಾಯಿಸಲಾಗುವುದು ಎಂದು ಅವರು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. 

ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ತುಮಕೂರು,ಕೋಲಾರ, ಚಿಕ್ಕ ಬಳ್ಳಾಪುರ  ಜಿಲ್ಲೆಗಳನ್ನೊಳಗೊಂಡ ಬಯಲುಸೀಮೆಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಹಾಗೂ ನೀರಾವರಿ ಯೋಜನೆ ಜಾರಿ ಬರೀ ಮಾತಲ್ಲೇ ಉಳಿದಿದೆ. ಕಳಸಾ-ಬಂಡೂರಿ ಯೋಜನೆ ಜಾರಿಗೆ 2 ವರ್ಷದಿಂದ ಸತ್ಯಾಗ್ರಹ ನಡೆಯುತ್ತಿದ್ದರೂ ಸರ್ಕಾರಗಳು ಗಮನ ಹರಿಸಿಲ್ಲ.

ಬಿಜೆಪಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದರೆ ಈಗಾಗಲೇ ಆ ಭಾಗದ ಜನರಿಗೆ ನೀರು ಸಿಗುತ್ತಿತ್ತು. ಆದಷ್ಟು ಬೇಗ ಮೇಕೆದಾಟು ಯೋಜನೆ ಆರಂಭಿಸದಿದ್ದಲ್ಲಿ ಮುಂದೆ ಬೆಂಗಳೂರು ಸಹ ಬಯಲುಸೀಮೆಯಂತಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸಲಿದೆ. ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ಒಂದೊಂದಾಗಿ ಮುಚ್ಚಲಾಗುತ್ತಿದೆ. 

Advertisement

ಈಗ ಬಿಇಎಂಎಲ್‌ ಮೇಲೆ ಕಣ್ಣು ಹಾಕಲಾಗಿದೆ. ಸತತ ಬರಗಾಲದಿಂದ ತೀವ್ರ ಸಂಕಷ್ಟಕ್ಕೊಳಗಾಗಿರುವ ರೈತರ ಸಾಲಮನ್ನಾಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಇನ್ನೂ ಮೀನಾಮೇಷ ಏಣಿಸುತ್ತಿವೆ.ಇಷ್ಟೆಲ್ಲಾ ಸಮಸ್ಯೆಯಿಂದ ಜನತೆ ಬಳಲುತ್ತಿದ್ದರೂ ಶಾಸನ ಸಭೆಯಲ್ಲಿ ಕನಿಷ್ಠ 25 ಸದಸ್ಯರು ಕೂಡ ಕುಳಿತು ಚರ್ಚಿಸಲು ತಯಾರಿಲ್ಲ.

ಜನರ ಸಮಸ್ಯೆಗೆ ಸ್ಪಂದಿಸದ ಹಾಗೂ ಸದನದಲ್ಲಿ ಭಾಗವಹಿಸದಂತಹವರನ್ನ ಜನಪ್ರತಿನಿಧಿಗಳಾಗಿ ಆಯ್ಕೆ ಮಾಡಬಾರದು ಎಂದು ಹೇಳಿದರು. ಕಳೆದ 2 ವರ್ಷದಿಂದ ಮಹಾದಾಯಿ ಹೋರಾಟ ನಡೆಯುತ್ತಿದೆ. ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ. ನೀರಿನ ವಿಚಾರದಲ್ಲಿ ರಾಜಕೀಯ ಬೇಡ.

ಮಹಾದಾಯಿ ವಿಚಾರದಲ್ಲಿ ಪಧಾನಿಯವರೇ ಮಧ್ಯ ಪ್ರವೇಶಿಸಬೇಕು. ಗೋವಾ,  ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಮಸ್ಯೆ ಇತ್ಯರ್ಥ ಪಡಿಸಬೇಕು ಎಂದು ಅವರು ಒತ್ತಾಯಿಸಿದರು. ರಾಜ್ಯದಲ್ಲಿ ಈವರೆಗೆ ಯಾವ್ಯಾವ ಯೋಜನೆ ಕೈ ಕೊಂಡಿದ್ದೀರಿ ಎಂಬುದರ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಲಿ.

ಆ ಬಗ್ಗೆ ಜೂನ್‌ 5ರಿಂದ ಆರಂಭವಾಗುವ ಅಧಿವೇಶನಲ್ಲಿ ಶಾಸಕರು ಚರ್ಚಿಸಲಿ ಎಂದು ಆಗ್ರಹಿಸಿದ ವಾಟಾಳ್‌ ನಾಗರಾಜ್‌, ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ರಾಜಕೀಯ ಬೇಡ. ತಮಗೆ ಬೇಕಾದ ಕೆರೆಗಳಿಗೆ ನೀರು ಹರಿಸಬಾರದು. ಪಕ್ಷಾತೀತವಾಗಿ ರಾಜ್ಯದ ಎಲ್ಲಾ ಕೆರೆ ತುಂಬಿಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಬಯಲುಸೀಮೆಗೆ ಕುಡಿಯುವ ನೀರು ಹಾಗೂ ನೀರಾವರಿ ಯೋಜನೆ ಜಾರಿ, ಅಪ್ಪರ್‌ ಭದ್ರಾ, ಮಹಾದಾಯಿ, ಮೇಕೆದಾಟು ಈ ಎಲ್ಲಾ ಯೋಜನೆಗಳ ಶೀಘ್ರ ಅನುಷ್ಠಾನಕ್ಕಾಗಿ ಕರ್ನಾಟಕ ಬಂದ್‌ ಕರೆ ನೀಡಲಾಗಿದೆ. ಬಂದ್‌ ಗೆ ಬೆಂಬಲಿಸುವಂತೆ ಸರ್ಕಾರಿ ನೌಕರರ ಸಂಘ ಸೇರಿ ವಿವಿಧ ಸಂಘ-ಸಂಸ್ಥೆಗಳ ಮುಖಂಡರಲ್ಲಿ ಕೋರಲಾಗುವುದು ಎಂದು ತಿಳಿಸಿದರು. 

ಕನ್ನಡ ಪರ ಸಂಘಟನೆಗಳ ಮುಖಂಡರಾದ ಪ್ರವೀಣ್‌ ಶೆಟ್ಟಿ, ಕೆ.ಆರ್‌.ಕುಮಾರ್‌, ಶಿವರಾಜಗೌಡ, ಗಿರೀಶ್‌ಗೌಡ, ಪ್ರದೀಪ್‌, ಟಿ.ಶಿವಕುಮಾರ್‌, ಸೋಮಶೇಖರ್‌, ಕೆ.ಜಿ.ಶಿವಕುಮಾರ್‌ ಇತರರು ಸುದ್ದಿಗೋಷ್ಟಿಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next