Advertisement
ಅಕ್ರಮ ಹಣ ವರ್ಗಾವಣೆಯ ದಾಖಲೆಗಳನ್ನು ಮುಂದಿಟ್ಟು ರವಿವಾರ ಇಡೀ ದಿನ ನಾಗೇಂದ್ರ ಅವರಿಂದ ಅಧಿಕಾರಿಗಳು ಹೇಳಿಕೆ ಪಡೆದಿದ್ದಾರೆ. ದುಡ್ಡು ವರ್ಗಾವಣೆ ಮಾಡಲು ಒತ್ತಡ ಹಾಕಿದ್ದೀರಲ್ಲವೇ ಎಂದು ಕೇಳಿದಾಗ, ನಾನು ಯಾರಿಗೂ ಒತ್ತಡ ಹಾಕಿಲ್ಲ ಎಂದಿದ್ದಾರೆ. ನಿಮ್ಮ ಆಪ್ತರಾದ ನೆಕ್ಕುಂಟಿ ನಾಗರಾಜ್, ನಾಗೇಶ್ವರ್ ರಾವ್, ನಿಗಮದ ಎಂಡಿ ಪದ್ಮನಾಭ್ ಜತೆ ಐಷಾರಾಮಿ ಹೊಟೇಲ್‌ನಲ್ಲಿ ಸಭೆ ನಡೆಸಿರುವುದು ಏಕೆ ಎಂಬ ಪ್ರಶ್ನೆಗೆ, ಊಟಕ್ಕೆ ಸೇರಿದ್ದೆವು ಎಂದಿದ್ದಾರೆ.
ಇನ್ನು ನಿಗಮದ ಎಂ.ಡಿ. ಪದ್ಮನಾಭ ವಿಚಾರಣೆ ವೇಳೆ ನಾಗೇಂದ್ರ ಪಾತ್ರವಿರುವ ಕುರಿತು ಕೊಟ್ಟಿರುವ ಹೇಳಿಕೆ ಬಗ್ಗೆ ವಿಚಾರಿಸಿದಾಗ, ನನಗೆ ಗೊತ್ತಿಲ್ಲ ಸರ್, ಅವರನ್ನೇ ಕೇಳಿ ಎಂದು ನಾಗೇಂದ್ರ ಹೇಳಿದ್ದಾರೆನ್ನಲಾಗಿದೆ. ಈ ಮಧ್ಯೆ ನಾಗೇಂದ್ರ ಅವರ ಆಪ್ತ ಸಹಾಯಕ ಹರೀಶ್ ಪ್ರಕರಣದ ಇಂಚಿಂಚೂ ಮಾಹಿತಿ ಒದಗಿಸಿದ್ದಾನೆ ಎನ್ನಲಾಗಿದೆ. ನಾಗೇಂದ್ರ ಹಾಗೂ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳಲ್ಲಿನ ವಹಿವಾಟಿನ ವಿವರಗಳನ್ನು ಅಧಿಕಾರಿಗಳು ಪಡೆದಿದ್ದಾರೆ. ನಿಗಮದ 20 ಕೋಟಿ ರೂ. ಚುನಾವಣೆಗೆ?
Related Articles
Advertisement
ರಾಜ್ಯ ಖಜಾನೆ-2ರಿಂದ ಕಳೆದ ಮಾ. 4ರಂದು ಹಾಗೂ ಮಾ. 21ರಂದು 44 ಕೋಟಿ ರೂ., ಮಾ. 22ರಂದು 33 ಕೋಟಿ ರೂ. ಹಾಗೂ ಮೇ 21ರಂದು 50 ಕೋಟಿ ರೂ. ಸೇರಿದಂತೆ ಒಟ್ಟು 187.33 ಕೋಟಿ ರೂ. ವಾಲ್ಮೀಕಿ ನಿಗಮದ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿದೆ. ಇದರಲ್ಲಿ 94.73 ಕೋಟಿ ರೂ. ದುಡ್ಡು ಎಂ.ಜಿ. ರಸ್ತೆಯ ಯೂನಿಯನ್ ಬ್ಯಾಂಕ್ ಖಾತೆಯಿಂದ ಹೈದರಾಬಾದ್‌ನ ಫಸ್ಟ್‌ಫೈನಾನ್ಸ್ ಕೋ-ಆಪರೇಟಿವ್ ಬ್ಯಾಂಕ್‌ನ 18 ನಕಲಿ ಖಾತೆಗಳಿಗೆ ರವಾನೆಯಾಗಿದೆ. ಅಕ್ರಮ ಬೆಳಕಿಗೆ ಬರುತ್ತಿದ್ದಂತೆ 5 ಕೋಟಿ ರೂ. ನಿಗಮದ ಖಾತೆಗೆ ವಾಪಸಾಗಿದೆ.
ಇನ್ನುಳಿದ 89.73 ಕೋಟಿ ರೂ. ಅನ್ನು ಹೈದರಾಬಾದ್ ಗ್ಯಾಂಗ್ ದೋಚಿದೆ. ಹೈದರಾಬಾದ್ ಫಸ್ಟ್ ಬ್ಯಾಂಕ್‌ನಲ್ಲಿ ಕಳೆದ ಜನವರಿ ಮತ್ತು ಫೆಬ್ರವರಿಯಲ್ಲಿ 18 ನಕಲಿ ಖಾತೆಗಳನ್ನು ತೆರೆಯುವ ಮೂಲಕ ಈ ಖಾತೆಗಳಿಗೆ ಮಾರ್ಚ್, ಎಪ್ರಿಲ್, ಮೇಯಲ್ಲಿ 89 ಕೋಟಿ ರೂ. ವರ್ಗಾಯಿಸಲಾಗಿದೆ. ಮೇ 7ರಂದು ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು. ಚುನಾವಣೆಗೂ ಮುನ್ನ ನಿಗಮದ ದುಡ್ಡನ್ನು ಬಂಧಿತರು ಪಡೆದುಕೊಂಡಿದ್ದರು. 89 ಕೋಟಿ ರೂ. ಪೈಕಿ 20.19 ಕೋಟಿ ರೂ. ಹಣವನ್ನು ನಾಗೇಂದ್ರ ಚುನಾವಣೆಗೆ ಬಳಕೆ ಮಾಡಿದ್ದಾರೆ ಎಂದು ಇ.ಡಿ. ಆರೋಪ ಮಾಡಿದೆ.