Advertisement

ಗಡುವು ಮುಗಿದ್ರು ಬಿಪಿಎಲ್‌ ಕಾರ್ಡ್‌ ವಾಪಸಿ!

12:03 PM Oct 05, 2019 | Suhan S |

ಧಾರವಾಡ: ಹೊಸದಾಗಿ ಕಾರು ಖರೀದಿಸಿದ್ದೇವೆ..ಹೊಸದಾಗಿ ಮನೆ ಕಟ್ಟಿಸಿದ್ದೇವೆ..ಜಾಗ ಖರೀದಿ ಮಾಡಿದ್ದೇವೆ..ನಮ್ಮ ಕಂಪನಿಯಲ್ಲಿ ಈ ಸಲ ವೇತನ ಹೆಚ್ಚಳ ಮಾಡಿದ್ದು, ಹೀಗಾಗಿ ಬಿಪಿಎಲ್‌ ಕಾರ್ಡ್‌ ಮರಳಿ ನೀಡುತ್ತಿದ್ದೇವೆ!

Advertisement

ಇಂತಹ ಹತ್ತಾರು ಕಾರಣ ನೀಡಿ ಸೆ.30 ರೊಳಗೆ ಜಿಲ್ಲೆಯಲ್ಲಿ 744 ಬಿಪಿಎಲ್‌ ಕಾರ್ಡ್‌ಗಳನ್ನು ಮರಳಿಸಲಾಗಿದೆ. ಸೆ. 30ರ ಬಳಿಕವೂ ಬಗೆ ಬಗೆಯ ಕಾರಣ ಮುಂದಿಟ್ಟು ಬಿಪಿಎಲ್‌ ಕಾರ್ಡ್‌ ಮರಳಿಸುವ ಕಾರ್ಯ ಈಗಲೂ ಆಗುತ್ತಿವೆ. ಕುಂದಗೋಳ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 213 ಕಾರ್ಡ್‌ಗಳನ್ನು ಮರಳಿಸಿದ್ದರೆ, ಕಲಘಟಗಿ ತಾಲೂಕಿನಲ್ಲಿ ಬರೀ 15 ಕಾರ್ಡ್‌ಗಳನ್ನು ಹಿಂತಿರುಗಿಸಲಾಗಿದೆ. ಉಳಿದಂತೆ ನವಲಗುಂದ-175, ಧಾರವಾಡ ಗ್ರಾಮೀಣ-107, ಹುಬ್ಬಳ್ಳಿ ಶಹರ-102, ಧಾರವಾಡ ಶಹರ-105, ಹುಬ್ಬಳ್ಳಿ ಗ್ರಾಮೀಣ-27 ಕಾರ್ಡ್‌ಗಳನ್ನು ವಿವಿಧ ಕಾರಣ ನೀಡಿ ಆಹಾರ ಇಲಾಖೆಗೆ ಒಪ್ಪಿಸಲಾಗಿದೆ.

ಮರಳುತ್ತಲಿವೆ ಕಾರ್ಡ್‌: ಸದೃಢ ಕುಟುಂಬಗಳು ಸುಳ್ಳು ಮಾಹಿತಿ ನೀಡಿ ಪಡೆದುಕೊಂಡಿದ್ದ ಬಿಪಿಎಲ್‌ ಕಾರ್ಡ್‌ಗಳನ್ನು ಸೆ. 30ರೊಳಗೆ ಮರಳಿಸುವಂತೆ ನೀಡಿದ್ದ ಒಂದು ತಿಂಗಳ ಗಡುವು ಮುಗಿದಿದ್ದರೂ ಪಡಿತರ ಚೀಟಿ ಹಿಂದಿರುಗಿಸುವ ಕಾರ್ಯ ಸಾಗಿದೆ. ಗಡುವಿನ ಅವಧಿಯಲ್ಲಿ ನಿರ್ಲಕ್ಷ್ಯ ಮಾಡಿದ್ದು, ಅವಧಿ ಮುಕ್ತಾಯ ಆಗುವ ವಾರದ ಮುಂಚೆ ಸಾಕಷ್ಟು ಅನರ್ಹರು ಪಡಿತರ ಚೀಟಿ ಹಿಂದಿರುಗಿಸಿದ್ದಾರೆ. ಇದಲ್ಲದೇ ಸೆ. 30ರ ಅವಧಿ ಮುಕ್ತಾಯವಾದ ಬಳಿಕವೂ ಕಾರ್ಡ್‌ ಹಿಂದಿರುಗಿಸಲು ಅನರ್ಹರು ಮುಂದಾಗಿದ್ದಾರೆ.

ಸೆ. 30ರೊಳಗೆ ಪಡಿತರ ಚೀಟಿ ನೀಡಿದವರ ಪಟ್ಟಿ ಒಂದೆಡೆ ಸಿದ್ಧಪಡಿಸಿಕೊಂಡಿರುವ ಆಹಾರ ಇಲಾಖೆ, ಬಳಿಕ ಬರುತ್ತಿರುವ ಪಡಿತರ ಚೀಟಿಗಳ ಪಟ್ಟಿ ಮತ್ತೂಂದೆಡೆ ಸಿದ್ಧಪಡಿಸಲು ಮುಂದಾಗಿದೆ. ಸೆ. 30ರೊಳಗೆ ಪಡಿತರ ಚೀಟಿ ಮರಳಿಸಿರುವವರಿಗೆ ತೊಂದರೆ ಇಲ್ಲ. ಸೆ. 30ರ ನಂತರ ಮರಳಿ ಸಲ್ಲಿಕೆ ಮಾಡುತ್ತಿದ್ದವರ ಮೇಲೆ ಸರಕಾರವು ನೀಡುವ ಸೂಚನೆಗಳ ಅನ್ವಯ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

ಮಾಹಿತಿ ಕಲೆ: ಮೊದಲ ಹಂತದಲ್ಲಿ ಎಚ್ಚರಿಕೆ ಸಂದೇಶ ನೀಡಿದ್ದ ಆಹಾರ ಇಲಾಖೆ, ಕಾರ್ಡ್‌ ಮರಳಿ ನೀಡಲು ಕಾಲಾವಧಿ ಸಹ ನೀಡಿತ್ತು. ಇದೀಗ ಅವಧಿ ಮುಗಿದ ಹಿನ್ನೆಲೆಯಲ್ಲಿ ಅನರ್ಹರ ಪತ್ತೆಗಾಗಿ ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ಮಗ್ನಗೊಂಡಿದೆ. ವಿವಿಧ ಸರಕಾರಿ ಇಲಾಖೆಯಲ್ಲಿನ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರ ಮಾಹಿತಿ, ಸಾರಿಗೆ ಇಲಾಖೆಯಿಂದ ವಾಹನವುಳ್ಳವರ ಮಾಹಿತಿ, ಪಾಲಿಕೆಯಿಂದ ನಗರ ಪ್ರದೇಶದಲ್ಲಿ ಮನೆವುಳ್ಳವರ ಮಾಹಿತಿ ಹಾಗೂ ಭೂಮಿ ಸಾಫ್ಟ್ ವೇರ್‌ನಿಂದ ಭೂಮಿ ಉಳ್ಳವರ ಬಗ್ಗೆ ಮಾಹಿತಿ ಕಲೆ ಹಾಕುವ ಕೆಲಸವನ್ನು ಆಹಾರ ಇಲಾಖೆ ಕೈಗೊಳ್ಳುತ್ತಿದೆ. ಈ ಮಾಹಿತಿ ಪಟ್ಟಿ ಬಂದ ಬಳಿಕ ಅನರ್ಹರ ಪತ್ತೆಗೆ ಮುಂದಾಗಲಿದೆ.

Advertisement

ಈ ವೇಳೆ ಕಂಡುಬರುವ ಅನರ್ಹರಿಗೆ ಈವರೆಗೆ ಅಕ್ಕಿ ಪಡೆದ ಮಾಹಿತಿ ಪಡೆದು ಮಾರುಕಟ್ಟೆ ದರದಂತೆ ದಂಡ ವಸೂಲಿ ಮಾಡುವುದರ ಜೊತೆಗೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಆಹಾರ ಇಲಾಖೆ ಆಸಕ್ತಿ ವಹಿಸಿದೆ.

 

 

ಅನರ್ಹ ಕಾರ್ಡ್‌ದಾರರ ಮಾಹಿತಿ :  ನೀಡಿ ನಗದು ಬಹುಮಾನ ಗೆಲ್ಲಿ ಪಡಿತರ ಸೋರಿಕೆ ತಡೆಗಾಗಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಅನರ್ಹ ಪಡಿತರ ಚೀಟಿ ಪತ್ತೆ ಹಚ್ಚಲು ಬಹುಮಾನ ಯೋಜನೆ ಜಾರಿಗೊಳಿಸಲಾಗಿದೆ. ಪತ್ತೆಯಾದ ಪ್ರತಿ ಅನರ್ಹ ಪಡಿತರ ಚೀಟಿ ಮಾಹಿತಿದಾರರಿಗೆ 400 ನಗದು ಬಹುಮಾನವಿದೆ. ಇದಲ್ಲದೇ ಅಕ್ರಮ ಸಾಗಾಣಿಕೆ/ ಕಾಳಸಂತೆಯಲ್ಲಿ ಪಡಿತರ ಮಾರಾಟ ಪತ್ತೆ ಮಾಡಿ ಮಾಹಿತಿ ನೀಡುವ ಸಾರ್ವಜನಿಕರಿಗೆ ಪ್ರಕರಣವು ಸಾಬೀತಾದ ನಂತರ ಒಟ್ಟು ದಾಸ್ತಾನು ಮೌಲ್ಯದ ಶೇ.5 ನಗದು ಬಹುಮಾನ ನೀಡುವ ಯೋಜನೆ ಸಹ ಜಾರಿಯಲ್ಲಿದೆ.

ಪಡಿತರ ಕಾಳಸಂತೆಗೆ ಕಡಿವಾಣ ಬೀಳ್ಳೋದ್ಯಾವಾಗ? :  ಸುಳ್ಳು ಮಾಹಿತಿ ನೀಡಿ ಬಿಪಿಎಲ್‌ ಕಾರ್ಡ್‌ ಪಡೆದ ಸ್ಥಿತಿವಂತರು ಉಚಿತವಾಗಿ ನೀಡುವ ಅಕ್ಕಿಯನ್ನು ದಾಸ್ತಾನು ಮಾಡುತ್ತಿದ್ದಾರೆ. 2-3 ತಿಂಗಳಿಗೊಮ್ಮೆ ಅಂಗಡಿಗಾರರಿಗೆ ಪ್ರತಿ ಕೆಜಿಗೆ 12 ರೂ.ಗೆ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದವರು ತಮ್ಮೂರಿನ ಸಂತೆ, ವ್ಯಾಪಾರಸ್ಥರು ಹಾಗೂ ಧಾರವಾಡದ ಸೂಪರ್‌ ಮಾರುಕಟ್ಟೆಯ ಕಿರಾಣಿ ವ್ಯಾಪಾರಸ್ಥರಿಗೆ ಅಕ್ಕಿ ತಂದು ಮಾರಾಟ ಮಾಡುತ್ತಿದ್ದಾರೆ. ಇನ್ನೂ ನಗರ ಪ್ರದೇಶದಲ್ಲೂ ಮಾರಾಟ ಜೋರಾಗಿದ್ದು, ಕೆಲವರು ಅಂಗಡಿಕಾರರಲ್ಲಿ ಹೋಗಿ ಮಾರಾಟ ಮಾಡುತ್ತಿದ್ದರೆ ಕೆಲ ಅಂಗಡಿಕಾರರು ಓಣಿ, ಕಾಲೋನಿಗಳಿಗೆ ತೆರಳಿ ಮನೆಯಲ್ಲಿ ದಾಸ್ತಾನು ಮಾಡಿರುವ ಕ್ವಿಂಟಾಲ್‌ಗ‌ಳಷ್ಟು ಅಕ್ಕಿಯನ್ನು ಖರೀದಿ ಮಾಡುತ್ತಿರುವುದು ಕಂಡು ಬರುತ್ತಿದೆ. ಈ ಕಾಳಸಂತೆಗೆ ಕಡಿವಾಣ ಹಾಕುವತ್ತ ಆಹಾರ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

 

-ಶಶಿಧರ್‌ ಬುದ್ನಿ

Advertisement

Udayavani is now on Telegram. Click here to join our channel and stay updated with the latest news.

Next