Advertisement

ನಿಮಗೆ ಗೊತ್ತಿಲ್ಲದ “ವ್ಯಾಲೆಂಟೈನ್ಸ್ ಡೇ” ..!

11:18 AM Feb 14, 2021 | Team Udayavani |

ಫೆಬ್ರವರಿ ೧೪ ಎಂದಾಕ್ಷಣ ಎಲ್ಲರ ತಲೆಗೆ ಹೊಳೆಯುವುದು ಪ್ರೇಮಿಗಳ ದಿನ. ವಿಶ್ವಾದ್ಯಂತ ವಿವಿಧ ರೀತಿಯಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಪಾಶ್ಚಾತ್ಯ ದೇಶಗಳಲ್ಲಿ ವಿಜೃಂಭಣೆಯಿಂದ ಕೂಡಿರುವ ಆಚರಣೆ ಇತ್ತೀಚಿನ ವರ್ಷಗಳಲ್ಲಿ ಭಾರತ ಸೇರಿದಂತೆ ಏಷ್ಯಾ ಖಂಡದಲ್ಲೂ ಪ್ರಾಮುಖ್ಯತೆ ಪಡೆಯುತ್ತಿದೆ. ನಿಜಕ್ಕೂಈ ಪ್ರೇಮಿಗಳ ದಿನದ ಇತಿಹಾಸ ಏನು? ಯಾಕಾಗಿ ಆಚರಿಸಲಾಗುತ್ತದೆ ? ಭಾರತದಲ್ಲಿ ಏನಿದರ ಪ್ರಾಮುಖ್ಯತೆ? ಎಂಬೆಲ್ಲಾ ಪ್ರಶ್ನೆಗಳಿಗೆ ಇಲ್ಲಿ ಸಂಕ್ಷಿಪ್ತವಾಗ ಉತ್ತರ ಸಿಗಲಿದೆ.

Advertisement

ಸಾಮಾನ್ಯವಾಗಿ ಪ್ರೇಮಿಗಳು ಶುಭಾಶಯಗಳನ್ನು ರವಾನಿಸುವುದರ ಮೂಲಕ ಹಾಗೂ ಒಬ್ಬರಿಗಿನ್ನೊಬ್ಬರು ಉಡುಗೊರೆಯನ್ನು ನೀಡುವ ಮೂಲಕ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಸೈಂಟ್ ವ್ಯಾಲೆಂಟೈನ್ಸ್ ಡೇ ಎಂದು ಕರೆಯಲಾಗುತ್ತದೆ.

ವ್ಯಾಲೆಂಟೈನ್ ಎಂಬ ಹೆಸರಿನ ಹಲವಾರು ರಾಜ-ಮಹಾರಾಜರು, ಹುತಾತ್ಮರನ್ನು ನಾವು ಇತಿಹಾಸದಲ್ಲಿ ಕಾಣುತ್ತೇವೆ. ಆದರೆ ನಾವು ಈಗ ಆಚರಿಸುವ ವ್ಯಾಲೆಂಟೈನ್ಸ್ ಡೇ ಯಾರ ನೆನಪಿನಲ್ಲಿ ಎಂಬುವುದಕ್ಕೆ ಸ್ಪಷ್ಟ ಉತ್ತರ ಇಲ್ಲ. ಕೆಲವರ ಪ್ರಕಾರ, ೩ನೇ ಶತಮಾನದಲ್ಲಿ ಚಕ್ರವರ್ತಿ ಕ್ಲಾಡಿಯಸ್ IIಗೋಥಿಕಸ್ ಅವರಿಂದ ಹುತಾತ್ಮರಾದ ಪಾದ್ರಿಯೊಬ್ಬರಿಂದ ಈದಿನವು ಹೆಸರು ಪಡೆದಿದೆ. ಒಂಟಿ ಪುರುಷರು, ದಾಂಪತ್ಯವನ್ನು ಹೊಂದಿರುವ ಪುರುಷರಿಗಿಂತ ಉತ್ತಮ ಗುಣಮಟ್ಟದ ಸೈನಿಕರಾಗಿರುತ್ತಾರೆ ಎಂದು ಚಕ್ರವರ್ತಿಯು ನಂಬಿದ್ದರು. ಆದ್ದರಿಂದ ಸೈನ್ಯಕ್ಕೆ ಸೇರ ಬಯಸುವಯುವವರು ಮದುವೆಯಾಗ ಬಾರದು ಎಂದು ಆದೇಶಿಸುತ್ತಾರೆ. ಆದರೆ ವ್ಯಾಲೆಂಟೈನ್ ಇವರ ಆದೇಶಕ್ಕೆ ವಿರುದ್ಧವಾಗಿ, ರಹಸ್ಯವಾಗಿ ಯುವಕರ ಮದುವೆಯನ್ನು ಮಾಡುತ್ತಿದ್ದರು. ಇದನ್ನು ತಿಳಿದ ಚಕ್ರವರ್ತಿ ಕ್ಲಾಡಿಯಸ್, ವ್ಯಾಲೆಂಟೈನ್‌ ಅನ್ನು ಗಲ್ಲಿಗೇರಿಸುತ್ತಾರೆ. ಹೀಗಾಗಿ, ಈ ದಿನವನ್ನು ಪ್ರೇಮಿಗಳ ದಿನವನ್ನಾಗಿ ಆಚರಿಸಲಾಗುತ್ತದೆ.

ಇನ್ನೂ ಕೆಲವರ ಪ್ರಕಾರ, ವ್ಯಾಲೆಂಟೈನ್ ಎಂಬ ಹೆಸರಿನ ಒಬ್ಬ ಖೈದಿ, ತನ್ನ ಮೊದಲ “ವ್ಯಾಲೆಂಟೈನ್” ಶುಭಾಶಯವನ್ನು ಒಬ್ಬಳು ಯುವತಿಗೆ ಕಳುಹಿಸುತ್ತಾನೆ – ಅವಳು ಅಲ್ಲಿ ಕಾಯುತ್ತಿದ್ದ ಜೈಲರ್‌ನ ಮಗಳು ಎಂದು ನಂಬಲಾಗಿದೆ. ಇವಳು ವ್ಯಾಲೆಂಟೈನ್‌ ನ ಬಂಧನದ ಸಮಯದಲ್ಲಿ ಜೈಲಿಗೆ ಬಂದಿರುವಾಗ, “ನಿನ್ನ ವ್ಯಾಲೆಂಟೈನ್‌ ನಿಂದ…” ಎಂದು ಪತ್ರವನ್ನು ಬರೆದಿರುತ್ತಾನೆ. ಈ ನುಡಿಗಟ್ಟು ಅಥವಾ ಪದಗಳು ಈಗಲೂ ಪ್ರೇಮಿಗಳು ಎಂಬ ಪದಕ್ಕೆ ತತ್ಸಮ ರೂಪವಾಗಿ ಬಳಕೆಗೆ ಬಂತು ಎಂಬ ಉಲ್ಲೇಖಗಳಿವೆ..

ಮತ್ತೊಂದು ಇತಿಹಾಸದ ಪ್ರಕಾರ, ರೋಮನ್ ಜೈಲಿನಲ್ಲಿ ಬಹಳ ಕಠಿಣ ಶಿಕ್ಷೆಗಳನ್ನು ಅನುಭವಿಸುತ್ತಿದ್ದ ಖೈದಿಗಳನ್ನು ಜೈಲಿನಿಂದ ತಪ್ಪಿಸಿಕೊಳ್ಳಲು ವ್ಯಾಲೆಂಟೈನ್ ಎಂಬುವವನು ಸಹಾಯ ಮಾಡುತ್ತಿದ್ದ. ಇದನ್ನು ತಿಳಿದ ಜೈಲಿನ ಅಧಿಕಾರಿಯೊಬ್ಬರು ಮಹಾರಾಜರಿಗೆ ತಿಳಿಸಿ, ಬಳಿಕ ಈತನಿಗೆ ಮರಣದಂಡನೆ ವಿಧಿಸಲಾಗುತ್ತದೆ. ಈತನ ಪ್ರೇಮ ಹಾಗೂ ವಾತ್ಸಲ್ಯದ ನೆನಪಿನಲ್ಲಿ ಪ್ರೇಮಿಗಳ ದಿನ ಆಚರಿಸಲಾಗುತ್ತದೆ ಎಂದೂ ಕೂಡ ಹೇಳಲಾಗುತ್ತದೆ.

Advertisement

ಈ ದಿನದ ಇತಿಹಾಸ ಇನ್ನೂ ಅಸ್ಪಷ್ಟವಾಗಿದ್ದರೂ, ಎಲ್ಲಾ ಕಥೆ-ಘಟನೆ-ಸನ್ನಿವೇಶಗಳು ಸಹಾನುಭೂತಿ, ಸಾಹಸಿ ಹಾಗೂ ಪ್ರಮುಖವಾಗಿ, ಪ್ರೀತಿ-ಪ್ರಣಯದ ಸಂದೇಶವನ್ನು ಸಾರುತ್ತದೆ.

 ಭಾರತದಲ್ಲಿ ವ್ಯಾಲೆಂಟೈನ್ಸ್ ಡೇ ಇತಿಹಾಸ

ಭಾರತ ಪಾರಂಪರಿಕ ದೇಶ, ಸಂಪ್ರದಾಯಗಳ ಶಿಖರ. ಪ್ರೀತಿ, ಬಾಂಧವ್ಯ ಭಾರತದ ಮಣ್ಣಿನ ಗುಣ. ವ್ಯಾಲೆಂಟೈನ್ಸ್ ಡೇ  ಎಂಬುವುದು ಪಾಶ್ಚಾತ್ಯರ ಸಂಸ್ಕೃತಿ ಎಂದು ಬೊಗಳೆ ಬಿಡುವ ವರ್ಗ ಇತಿಹಾಸವನ್ನು ಓದಿಕೊಳ್ಳದ “ಖಾಲಿ ತಲೆಗಳ ಬುದ್ಧಿ ಜೀವಿಗಳು ಅನ್ನಿಸುತ್ತದೆ” ಭಾರತದ ಇತಿಹಾಸ, ಶಿಲ್ಪಕಲೆ, ಸಾಹಿತ್ಯವನ್ನು ಸರಿಯಾಗಿ ಓದಿಲ್ಲ ಅನ್ನಿಸುತ್ತೆ! ಖಜುರಾಹೋ, ಕೊನಾರ್ಕ್ಸೂರ್ಯ ದೇವಸ್ಥಾನದಲ್ಲಿ ಶಿಲ್ಪಕಲೆಗಳ ಬಗ್ಗೆ, ಅಷ್ಟವಕ್ರ-ಅಮೃತಮತಿ ನಡುವಿನ ಪ್ರೇಮ, ವಾತ್ಸಾಯನನ “ಕಾಮಸೂತ್ರ” ಪುಸ್ತಕ ಇತ್ಯಾದಿಗಳಲ್ಲಿ ಪ್ರಾಚೀನ ಭಾರತದಲ್ಲಿ ಕಾಮ ಹಾಗೂ ಪ್ರೇಮ ಯಾವ ಮಟ್ಟದಲ್ಲಿತ್ತು ಎಂಬುವುದನ್ನು ಪ್ರತಿಬಿಂಬಿಸುತ್ತದೆ. ಭಗವಾನ್ ಶ್ರೀ ಕೃಷ್ಣ ಹಾಗೂ ಗೋಪಿಕೆಯರ ನಡುವಿನ ಪ್ರೇಮವೂ ಒಂದು ಉತ್ತಮ ಉದಾಹರಣೆ.. ಆದರೂ, ಆಧ್ಯಾತ್ಮಿಕ ಪ್ರೇಮ ಮತ್ತು ತ್ಯಾಗವು ಭಾರತೀಯ ಸಂಸ್ಕೃತಿಯಲ್ಲಿ ಅಡಕವಾಗಿದೆ ಎಂದೇ ಹೇಳಬಹುದು.

ಆದರೆ, ಒಂದು ಪ್ರತ್ಯೇಕ ದಿನವನ್ನು ಪ್ರೇಮಿಗಳ ದಿನವನ್ನಾಗಿ ಆಚರಿಸುವುದು ಭಾರತೀಯರಿಗೆ ತೀರಾ ಹೊಸದು ಎನ್ನಬಹುದು. ಪ್ರಮುಖವಾಗಿ, ೧೯೯೨ ರಲ್ಲಿ ಕೇಂದ್ರ ಸರ್ಕಾರವು ಜಾಗತೀಕರಣ ಹಾಗೂ ಉದಾರೀಕರಣಕ್ಕೆ ಅನುವುಮಾಡಿಕೊಟ್ಟಿತು. ಆ ಸಮಯದಲ್ಲಿ ಶ್ರೀಮಂತ ವರ್ಗದವರಿಗೆ ವಿದೇಶೀ ಟಿವಿ ಚ್ಯಾನಲ್‌ ಗಳ ಮೂಲಕ ಈ ದಿನದ ಬಗ್ಗೆ ಅರಿವು ಮೂಡುತ್ತದೆ. ಸಮಯ ಕಳೆದಂತೆ, ಭಾರತದಲ್ಲಿ ತಲೆಯೆತ್ತಿದ ಮನರಂಜನೆಯ ಚ್ಯಾನೆಲ್‌ ಗಳು ಫೆಬ್ರವರಿ ೧೪ ರಂದು ಪ್ರೀತಿ-ಪ್ರೇಮ ಸಾರುವ ಹಾಡುಗಳನ್ನು ಹಾಕಿ, ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದವು. ಈ ಮೂಲಕ ಭಾರತದಲ್ಲಿ ಪ್ರೇಮಿಗಳ ದಿನದ ಆಚರಣೆ ಮುಖ್ಯ ವಾಹಿನಿಗೆ ಬಂದಿದೆ ಎಂದು ನಂಬಲಾಗಿದೆ.

“ವಿವಿಧತೆಯಲ್ಲಿ ಏಕತೆಯೆನ್ನುವ ಭಾರತ, ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸುತ್ತದೆ..!”

“ವಿವಿಧತೆಯಲ್ಲಿ ಏಕತೆ” ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ರಾಷ್ಟ್ರ ಭಾರತ. ಪ್ರತಿನಿತ್ಯ ಒಂದಲ್ಲ ಒಂದು ಆಚರಣೆಗಳು ನಡೆಯುವ ನಮ್ಮ ದೇಶದಲ್ಲಿ ವ್ಯಾಲೆಂಟೈನ್ಸ್ ಡೇ ಗೆ ಭಾರೀ ವಿರೋಧವಿದೆ. ಪ್ರಮುಖವಾಗಿ ಹಿಂದೂ ಹಾಗೂ ಇಸ್ಲಾಂ ಸಂಘಟನೆಗಳು, ಕೆಲ ರಾಜಕೀಯ ಬೆಂಬಲಿತ ಗುಂಪುಗಳು ಈ ದಿನದ ಆಚರಣೆಗೆ ವಿರೋಧಿಸುತ್ತಲೇ ಬಂದಿದೆ. ಶಿವಸೇನೆಯ ನಾಯಕ ಬಾಳ ಸಾಹೆವ್ ಠಾಕ್ರೆಯವರು ಅಂದು ಎಲ್ಲೂ ಅಹಿಂಸೆಯಾಗಬಾರದು ಎಂದು ಬಯಸುವವರು ಪ್ರೇಮಿಗಳ ದಿನವನ್ನು ಆಚರಿಸಬಾರದು ಎಂದಿದ್ದರು. ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್, ಯಾರೆಲ್ಲಾ ಪ್ರೇಮಿಗಳ ದಿನವನ್ನು ಆಚರಿಸುವುದನ್ನು ಕಾಣುತ್ತೇವೋ, ಅವರನ್ನು ಆಕ್ಷಣದಲ್ಲೇ ಬಲವಂತವಾಗಿ ಮದುವೆ ಮಾಡಿಕೊಡಲಾಗುವುದು. ಒಂದು ವೇಳೆ ಅವರು ಒಪ್ಪದಿದ್ದರೆ, ಹುಡುಗಿ ಕೈಯಿಂದ ಹುಡುಗನಿಗೆ ರಾಖಿ ಕಟ್ಟಿಸಲಾಗುವುದು ಎಂದು ಹೇಳಿದ್ದರು.

ಇಷ್ಟೇ ಅಲ್ಲದೆ, ಕೆಲ ಸಂಘಟನೆಯ ಕಾರ್ಯಕರ್ತರು, ಪ್ರೇಮಿಗಳ ದಿನದಂದು ಹಾಳಾದ ಟೊಮ್ಯಾಟೋಗಳನ್ನು ಪ್ರೇಮಿಗಳ ಮೇಲೆ ಎಸೆದಿರುವ ಘಟನೆಗಳೂ ಭಾರತದಲ್ಲಿ ನಡೆದಿವೆ. ಫೆಬ್ರವರಿ ತಿಂಗಳು ಬಂತೆಂದರೆ ಸಾಕು, ಫ್ಯಾನ್ಸಿ ಅಂಗಡಿಗಳಿಗೆ ಹೋಗಿ, ವ್ಯಾಲೆಂಟೈನ್ಸ್ ಡೇ ಕಾರ್ಡ್‌ ಗಳನ್ನು ಸುಟ್ಟು ಹಾಕಿರುವುದರ ಉದಾಹರಣೆಯೂ ಇದೆ. ವಿಶ್ವ ಹಿಂದೂ ಪರಿಷದ್, ಬಜರಂಗ ದಳ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್, ಭಾರತೀಯ ಇಸ್ಲಾಮಿಕ್ ವಿದ್ಯಾರ್ಥಿಗಳ ಸಂಘಟನೆ ಇತ್ಯಾದಿ ಸಂಘಟನೆಗಳು ಪ್ರೇಮಿಗಳ ದಿನವನ್ನು ವಿರೋಧಿಸುತ್ತಲೇ ಬಂದಿದೆ.

ಭಾರತದಲ್ಲಿ ಆಚರಣೆಯ ಶೈಲಿ

ದೇಶದಲ್ಲಿ ಫೆಬ್ರವರಿ ೧೪ನೇ ತಾರೀಖಿಗೆ ತನ್ನದೇ ಆದ ವಿಶೇಷತೆ ಇದೆ. ಹಲವಾರು ಯುವ ಪ್ರೇಮಿಗಳು ಇದ್ದರೂ, ಕೆಲ ಸಂಘಟನೆಗಳಿಗೆ ಹೆದರಿಕೊಂಡು ಸಾರ್ವಜನಿಕವಾಗಿ ಆಚರಿಸಲು ಹಿಂಜರಿಯುತ್ತಾರೆ. ಬದಲಾಗಿ, ಈ ದಿನವನ್ನು ಹಲವರು, ವಿವಿಧ ರೂಪದಲ್ಲಿ ಆಚರಿಸುತ್ತಾರೆ. ಮಾತೃ-ಪಿತೃ ಪೂಜನಿಯ ದಿವಸ್ (ರಾಜ್ಯದ ಶಾಲೆಗಳಲ್ಲಿ ಈ ವರ್ಷದಿಂದ ಫೆ.೧೪ ರಂದು ವಿದ್ಯಾರ್ಥಿಗಳು ಶಾಲೆಗೆ ತಮ್ಮ ಪೋಷಕರನ್ನು ಕರೆಸಿ ಆಚರಿಸಬೇಕೆಂದು ರಾಜಸ್ಥಾನ ಸರ್ಕಾರ ಆದೇಶ ಹೊರಡಿಸಿದೆ), ಶಿಸ್ತಿನ ದಿನ(ಕಾಲೇಜಿನ ಆವರಣದಲ್ಲಿ ಯಾರಾದರೂ ಜೊತೆಯಾಗಿ ತಿರುಗಾಡುತ್ತಿರುವುದು ಕಂಡು ಬಂದರೆ ಶಿಸ್ತು ಕ್ರಮ ಕೈಗೊಳ್ಳುವುದೆಂದು ೨೦೧೮ ರಲ್ಲಿ ಲಖ್ನೋ ವಿವಿ ಸುತ್ತೋಲೆ ಹೊರಡಿಸಿತ್ತು), ಸಹೋದರಿಯ ದಿನ, ಹೀಗೆ ಅನೇಕ ರೂಪದಲ್ಲಿ ಆಚರಿಸಲಾಗುತ್ತದೆ..! ಅದೇ ರೀತಿ, ಪ್ರೇಮಿಗಳ ದಿನವನ್ನು ಬ್ಲ್ಯಾಕ್ ಡೇ (೨೦೧೯ರಲ್ಲಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಭಾರತದ ೪೦ ಸಿ ಆರ್‌ ಪಿ ಎಫ್  ಸೈನಿಕರ ನೆನಪಿನಲ್ಲಿ), ಲಾಠೀ ಪೂಜಾ (೨೦೧೮ ರಲ್ಲಿ ಶಿವಸೇನೆಯ ಕಾರ್ಯಕರ್ತರು ಸಾರ್ವಜನಿಕವಾಗಿ ಈ ದಿನವನ್ನು ಆಚರಿಸುತ್ತಿದ್ದವರ ಮೇಲೆ ಲಾಠೀಯಿಂದ ಹೊಡೆದು ಕಳುಹಿಸುತ್ತಿದ್ದರು) ರೂಪದಲ್ಲೂ ಆಚರಿಸಲಾಗುತ್ತದೆ!

ಪ್ರೇಮಿಗಳ ದಿನಾಚರಣೆಗೆ ಇಷ್ಟೆಲ್ಲಾ ವಿರೋಧಗಳಿದ್ದರೂ, ಆಚರಿಸುವವರು ಹೇಗಾದರೂ ಆಚರಿಸುತ್ತಾರೆ. ಪ್ರಚಲಿತವಾಗಿರುವಂತೆ ಫೆಬ್ರವರಿ೭ ರಿಂದ ೧೩ ರವರೆಗೆಕ್ರಮವಾಗಿ ರೋಜ಼್ ಡೇ, ಪ್ರೊಪೋಸ್ ಡೇ, ,ಚಾಕೊಲೇಟ್ ಡೇ, ಟೆಡ್ಡಿ ಡೇ, ಪ್ರಾಮಿಸ್ ಡೇ, ಹಗ್ ಡೇ, ಕಿಸ್ ಡೇ ಹಾಗೂ ಕೊನೆಯಲ್ಲಿ ಫೆ.೧೪ ರಂದು ವ್ಯಾಲೆಂಟೈನ್ಸ್ ಡೇ ಆಚರಿಸುವ ಮೂಲಕ ಪ್ರೇಮಿಗಳ ಒಂದು ವಾರದ ಆಚರಣೆ ಅಥವಾ ವ್ಯಾಲೆಂಟೈನ್ಸ್ ವೀಕ್ ಕೊನೆಗೊಳ್ಳುತ್ತದೆ.

-ಇಂದುಧರ ಹಳೆಯಂಗಡಿ

Advertisement

Udayavani is now on Telegram. Click here to join our channel and stay updated with the latest news.

Next