ಪ್ರೀತಿಸಿ ಮದುವೆಯಾಗುವುದು ಕಷ್ಟ. ಆಮೇಲೆ “ಮುನಿಸಿಕೊಂಡಿರುವ’ ಹೆತ್ತವರ ಮನಸ್ಸು ಗೆಲ್ಲುವುದು ಇನ್ನೂ ಕಷ್ಟ. ಇಂಥದೊಂದು ಸಾಹಸದಲ್ಲಿ ಗೆದ್ದವರ ಕಥೆಗಳು ಇಲ್ಲಿವೆ. ಇಲ್ಲಿನ ವಿವರಗಳಲ್ಲಿ ತಮಾಷೆಯಿದೆ, ಹಠವಿದೆ, ಆತ್ಮವಿಶ್ವಾಸವಿದೆ, ಅಕ್ಕರೆಯಿದೆ, ಬೇಡಿಕೆಯಿದೆ. ಇವೆಲ್ಲದರ ಜೊತೆಜೊತೆಗೆ ಹೆತ್ತವರ ಹಾರೈಕೆ ನಮಗೆ ಎಂದೆಂದಿಗೂ ಬೇಕು ಎಂಬ ಅನುಗಾಲದ ಪ್ರಾರ್ಥನೆಯೂ ಇದೆ. ಪ್ರೇಮಿಗಳ ದಿನದ ಈ ಸಂದರ್ಭದಲ್ಲಿ ಒಲವು-ಗೆಲುವಿನ ಈ ಗುತ್ಛವನ್ನು ಹೆಮ್ಮೆಯಿಂದಲೇ ನಿಮ್ಮ ಮುಂದಿಡುತ್ತಿದ್ದೇವೆ. ಓದಿಕೊಳ್ಳಿ…
– – –
ಸೊಸೆ ಬರೋದು ಅಶುಭ ಹೇಗಾಗುತ್ತೆ?
ನಾವಿಬ್ಬರೂ ಊರೂರು ಅಲೆಯುತ್ತಾ ಬೀದಿನಾಟಕಗಳನ್ನು ಮಾಡುತ್ತಾ, ಸಮಾನಾಸಕ್ತಿಗಳನ್ನು ಗುರುತಿಸಿಕೊಂಡು ಪರಸ್ಪರ ಮೆಚ್ಚಿಕೊಂಡಿದ್ದವರು. ಜಾತಿ ಇಬ್ಬರದೂ ಬೇರೆ ಬೇರೆ. ಆರ್ಥಿಕವಾಗಿ ಮನೆಯವರನ್ನು ನೆಚ್ಚಿಕೊಳ್ಳುವುದನ್ನು ಬಿಟ್ಟು ವರ್ಷಗಳು ಕಳೆದಿದ್ದವು. ಇಬ್ಬರೂ ಆಯಾ ದಿನಕ್ಕೆ ಬೇಕಾಗುವಷ್ಟು ದುಡಿದು, ಹಂಚಿ ಉಣ್ಣುವುದನ್ನು ಅದಾಗಲೇ ಅಭ್ಯಾಸ ಮಾಡಿಕೊಂಡಿದ್ದೆವು. ಎಲ್ಲರೂ ಇದ್ದೂ ಯಾಕೋ ಎಲ್ಲಾ ಬಂಧಗಳನ್ನು ಕಳಚಿಕೊಳ್ಳುತ್ತಿದ್ದೇವೆ ಅನ್ನಿಸಿ ಮನೆಯವರನ್ನು ಒಪ್ಪಿಸಿ ಮದುವೆ ಮಾಡಿಕೊಳ್ಳುವುದೆಂಬ ತೀರ್ಮಾನಕ್ಕೆ ಬಂದೆವು.
ಸರಿ, ಮೊದಲು ನನ್ನ ಮನೆಯಲ್ಲಿ ಪ್ರಸ್ತಾವ ಮುಂದಿಟ್ಟೆ. ಹೆಚ್ಚಿನ ತಕರಾರೇನೂ ಬರಲಿಲ್ಲ. ಇನ್ನು ಗಿರೀಶ್ ಮನೆಯವರನ್ನು ಒಪ್ಪಿಸುವ ಕೆಲಸ. ಒಬ್ಬನೇ ಮುದ್ದಿನ ಮಗ. ಮೇಲಾಗಿ ಮಾವನವರು ಹತ್ತೂರಿಗೆ ಬೇಕಿದ್ದವರು. ಅವರ ತೀರ್ಮಾನವೆಂದರೆ ಕಡ್ಡಿ ಎರಡು ತುಂಡಾದಂತೆ. ಅವರನ್ನು ಒಪ್ಪಿಸಲು ಇಡೀ ಕುಟುಂಬವೇ ನಿಂತಿತು, ಉಹೂnಂ.. ಅವರು ಜಗ್ಗಲಿಲ್ಲ. ವರ್ಷದ ಪ್ರಯತ್ನದ ನಂತರ “ಮದುವೆಯೇನೋ ಸೈ, ಆದರೆ ನನ್ನ ಊರಿನಲ್ಲಿ, ನನ್ನ ಮನೆ ಮುಂದೆಯೇ’ ಅಂದರು. ನಾವಿಲ್ಲಿ ಬೆಂಗಳೂರಿನಲ್ಲಿ ಮಂತ್ರ ಮಾಂಗಲ್ಯ ಪದ್ಧತಿಯಂತೆ, ಶೂನ್ಯ ಮಾಸದ ಕೊನೇ ದಿನ (ಸಂಕ್ರಾಂತಿ)ಯಂದು ಸಂ-ಕ್ರಾಂತಿ ಮಾಡುವ ಉಮೇದಿನಲ್ಲಿ ಮದುವೆ ಕಾರ್ಯಕ್ರಮ ರೂಪಿಸಿದ್ದೆವು. ಇದನ್ನು ಕೇಳಿ ಅವರು ಕೆಂಡಾಮಂಡಲರಾದರು. ಅವರು ಒಪ್ಪರು ಅಂತ ತೀರ್ಮಾನಕ್ಕೆ ಬಂದು ಗಿರೀಶ್ ತನ್ನ ಪಾಡಿಗೆ ತಾನು ಆಹ್ವಾನಪತ್ರಿಕೆ ಹಂಚುತ್ತಾ ಊರೂರು ಓಡಾಡತೊಡಗಿದ.
ನನಗಿಲ್ಲಿ ಅಳುಕು. ಮದುವೆ ಹಿಂದಿನ ದಿನ ಕೊನೆಗೂ ಧೈರ್ಯಮಾಡಿ ಹಂದಲಗೆರೆಯ ಬಸ್ ಹತ್ತಿದೆ. ಹೆದಹೆದರುತ್ತಲೇ ಊರು ತಲುಪಿ ಅವರ ಮನೆಯ ಹಜಾರದಲ್ಲಿ ಕುಳಿತೆ. ಅತ್ತೆ (ಆಗ್ಬೇಕಿದ್ದವರು) ನನಗಿಂತಲೂ ಹೆಚ್ಚು ಹೆದರಿದ್ದರು! ಗಿರೀಶ್ ತಂದೆ ಮನೆಗೆ ಬಂದವರೇ ನನ್ನ ಕಂಡು ಬುಸುಗುಡುತ್ತಾ, ವ್ಯವಸಾಯ ಸಾಮಗ್ರಿಗಳನ್ನು ಹೆಗಲಿನಿಂದ ಇಳಿಸಿ, ಊರ ಹಿರಿಯರನ್ನು ಕರೆದರು. ನಾನು ಎಲ್ಲರ ಸಮ್ಮುಖದಲ್ಲಿ ಭಯವನ್ನು ನಿಭಾಯಿಸುತ್ತಾ,- “ನೀವು ಸಂಕ್ರಾಂತಿ ಹಬ್ಬದಂದು ಧವಸ- ಧಾನ್ಯಗಳನ್ನು ಮನೆ ತುಂಬಿಸಿಕೊಳ್ತೀರಲ್ವಾ? ಅದೂ ಶುಭದ ಸಂಕೇತ ಆದ್ರೆ ಸೊಸೆ ಬರೋದು ಅಶುಭ ಹೇಗಾಗುತ್ತೆ?’ ಅಂದೆ.
ಎಲ್ಲರೂ ಗುಸುಗುಸು ಮಾತಾಡಿಕೊಂಡರು. “ಆಯ್ತು ಬತ್ತೀವಿ, ನೀ ನಡ್ಯಮ್ಮಾ’ ಅಂದರು ಮಾವನ ಸ್ನೇಹಿತರು. ಇಷ್ಟೆಲ್ಲಾ ನಡೆಯುವಾಗ ಗಿರೀಶನಿಗೆ ಯಾರೋ ಫೋನ್ ಮಾಡಿ ಕರೆಸಿದ್ದರು. ನಾನು, ಭಾವಿ ಅತ್ತೆ- ಮಾವನವರ ಕಾಲಿಗೆ ಅಡ್ಡಬಿದ್ದೆ. ಮರುದಿನ ಬೆಳಗ್ಗೆ ಒಂದು ಬಸ್ ತುಂಬಾ ಜನರನ್ನು ಕರಕೊಂಡು ಮಾವ ಮದುವೆ ಮಂಟಪಕ್ಕೆ ಬಂದಿಳಿದರು!
– ದೀಪಾ ಗಿರೀಶ್ (ದೀಪದಮಲ್ಲಿ)
– – – –
ಬೇಡದ ಸೀರೆಯುಟ್ಟು, ಹುಡುಗರನ್ನು ಓಡಿಸ್ತಿದ್ದೆ!
ಆಗಿನ್ನೂ ಎಂ.ಎಸ್ಸಿ ಮುಗಿಸಿ ಕಾಲೇಜು ಉಪನ್ಯಾಸಕಿಯಾಗಿ ಸೇರಿದ್ದೆ. ಮನೆಯಲ್ಲಿ ಅದಾಗಲೇ ನನ್ನ ಮದುವೆಗೆ ವರನ ಹುಡುಕಾಟ ನಡೆಸುತ್ತಿದ್ದರು. ಬಂದ ಒಂದಿಬ್ಬರಿಗೆ ಸಾಲವಳಿ ಕೂಡಲಿಲ್ಲ, ಇನ್ನೊಬ್ಬರಿಗೆ ನಾನೇ ಹಿಡಿಸಲಿಲ್ಲ! ಅಮ್ಮನಿಗೆ ನನ್ನ ಮದುವೆಯದ್ದೇ ದೊಡ್ಡ ಚಿಂತೆ ಆಯಿತು. ಈ ನಡುವೆ ಅಪ್ಪನ ಸ್ನೇಹಿತರೊಬ್ಬರ ಗೃಹಪ್ರವೇಶಕ್ಕೆ ಹೋದಾಗ ಯಾವುದೋ ಎರಡು ಕಣ್ಣುಗಳು ನನ್ನನ್ನೇ ಹಿಂಬಾಲಿಸುತ್ತಿದ್ದವು. ಮೊದಲೇ ವಾರೆ ನೋಟದಲ್ಲಿ ನಮ್ಮ ´ೋಕಸ್ ಜಾಸ್ತಿ ಅಲ್ವಾ… ಅವರ- ನನ್ನ ಕಣ್ಣುಗಳೆರಡೂ ಬೆರೆತವು. ಯಾರೂ ಇರದ ನನ್ನ ಮನಸ್ಸಿನಲ್ಲಿ ಅವರ ನೇರಪ್ರವೇಶವಾಯಿತು. ಅಷ್ಟು ಜನಜಂಗುಳಿಯ ನಡುವೆಯೂ ನಾನು- ಅವರು ಇಬ್ಬರೇ ಇದ್ದಂಥ ಭಾವ. ಮೊದಲ ಬಾರಿಗೆ ಒಬ್ಬರಿಗೊಬ್ಬರು ಮನಸೋತಿದ್ದೆವು. ಒಂದೇ ಜಾತಿಯಾದರೂ, ಒಂದೇ ಪಂಗಡದ ವರ ಬೇಕು ಎನ್ನುತಿದ್ದ ಮನೆತನ ನಮ್ಮಿಬ್ಬರದು. ಈಗ ಮನೆಯವರನ್ನೆಲ್ಲ ಒಪ್ಪಿಸುವುದು ಹೇಗೆಂಬುದೇ ಚಿಂತೆ ಆಯಿತು.
ಆ ದಿನಗಳಲ್ಲಿ ವಾಟ್ಸಾéಪ್ ಇರಲಿಲ್ಲ. ದಿನಕ್ಕೆ ಇದ್ದ ಸಾವಿರ ಎಸ್ಸೆಮ್ಮೆಸ್ ಏನೇನೂ ಸಾಲುತ್ತಿರಲಿಲ್ಲ. ಅಪ್ಪನ ಬಳಿ ಈ ವಿಷಯ ತಿಳಿಸಿದಾಗ, ಬೆಂಕಿ ಉಗುಳುವ ಅಗ್ನಿಪರ್ವತವೇ ಆಗಿಬಿಟ್ಟರು. ಮುಂದೇನು ಎಂಬುದರ ಜೊತೆಗೆ ಅವರು ಮನಸ್ಸಿನ ಅಧಿಪತಿಯಾಗಿಬಿಟ್ಟರು.
ಇದೇ ಸಮಯದಲ್ಲಿ ಒಬ್ಬ ಹುಡುಗ ನನ್ನನ್ನು ನೋಡಲು ಬಂದ. ತುಂಬಾ ಢಾಳಾದ ಬಣ್ಣದ ಸೀರೆಯೊಂದನ್ನು ಉಟ್ಟು, ಕೆಟ್ಟದಾಗಿ ಕಾಣಿಸಿಕೊಂಡು ಅವನನ್ನು ಓಡಿಸಿಬಿಟ್ಟಿದ್ದೆ. ಇನ್ನೂ ಕಾದರೆ, ಮತ್ತೆ ಯಾರ್ಯಾರನ್ನು ನೋಡಬೇಕೋ ಎಂಬ ತಲೆನೋವು ಶುರುವಾಯಿತು. ಅತ್ತ ಅವರು ತಮ್ಮ ಚಿಕ್ಕಪ್ಪ ಹಾಗೂ ನನ್ನ ಅಪ್ಪನ ಸ್ನೇಹಿತರೊಟ್ಟಿಗೆ ಮಾತುಕತೆ ನಡೆಸಿ ಒಪ್ಪಿಸಿಬಿಟ್ಟಿದ್ದರು. ಇನ್ನು ನಮ್ಮಿಬ್ಬರ ಅಪ್ಪಂದಿರನ್ನು ಒಪ್ಪಿಸಿಬಿಟ್ಟಿದ್ದಿದ್ದರೆ, ನಮ್ಮ ಪ್ರೀತಿ ಗೆಲ್ಲುತ್ತಿತ್ತು. ನಮ್ಮ ಭಾವಿ ಮಾವನವರಿಗೆ ನನ್ನ ಜಾತಕ ತೋರಿಸಿ, ಕೊನೆಗೂ ನಮ್ಮವರು ಒಪ್ಪಿಸಿದರು.
ಅಪ್ಪನ ಸ್ನೇಹಿತರು ನಮ್ಮ ಮನೆಗೆ ಬಂದು, “ಹುಡುಗ ಓದಿದ್ದಾನೆ, ಸರ್ಕಾರಿ ಕೆಲಸ. ಮೇಲಾಗಿ ಒಂದೇ ಜಾತಿ, ಪಂಗಡ ಬೇರೆ ಇದ್ದರೆ ಏನಾಗುತ್ತೆ?’ ಎಂದೆಲ್ಲ ಹೇಳಿ ಒಪ್ಪಿಸಿದ್ದರು. ಆದರೆ, ನನ್ನ ಅಪ್ಪನನ್ನು ಒಪ್ಪಿಸಿರುವ ವಿಚಾರ ನನಗೆ ಗೊತ್ತೇ ಇರಲಿಲ್ಲ. ಇದ್ದಕ್ಕಿದ್ದ ಹಾಗೆ, ಒಂದು ಭಾನುವಾರ ವರನ ಕಡೆಯವರು ಬರುತ್ತಾರೆ, ಬೇಗನೆ ರೆಡಿಯಾಗುವಂತೆ ಅಪ್ಪ ಹೇಳಿದರು. ಮತ್ತೆ ನನಗೆ ತಲೆನೋವು. ನಾನು ಇಷ್ಟಪಟ್ಟ ಹುಡುಗನಿಗೆ ಫೋನು ಮಾಡಲು ಹುಡುಕಿದರೆ, ಅಲ್ಲಿ ಫೋನೇ ಇರಲಿಲ್ಲ. ಅಪ್ಪ ´ೋನ್ ತೆಗೆದಿಟ್ಟುಕೊಂಡಿದ್ದಾರೆ ಎಂದುಕೊಂಡು, “ಇದ್ಯಾಕಪ್ಪಾ ದೇವೆÅ ಹೀಗ್ ಮಾಡ್ತಿದೀಯ’ ಅಂತ ದೇವರ ಫೋಟೋ ನೋಡಿದ್ದೆ.
ಮತ್ತೆ ಒಲ್ಲದ ಮನಸ್ಸಿನಲ್ಲಿ ಕಡುಕೆಂಪಿನ, ಅತಿ ಢಾಳಾದ ಸೀರೆ ಧರಿಸಿ, ಆ ಹುಡುಗನ ಮುಂದೆ ನಿಂತೆ. ಯಾರೋ ಒಬ್ಬರು “ತಲೆ ಎತ್ತಮ್ಮ…’ ಅಂದಾಗ ಎದುರಿಗೆ ನಾನು ಬಯಸಿದ್ದ ಹುಡುಗನೇ ನಗುತ್ತಾ ಕುಳಿತಿದ್ದರು! ಒಮ್ಮೆಲೆ ಎದೆಯಲ್ಲಿ ಚಿಟ್ಟೆ ಹಾರತೊಡಗಿದವು. ಸಾಕ್ಷಾತ್ ಶಿವನಂತೆ ನನ್ನ ಕೈ ಹಿಡಿದರು ಮಹೇಶ್.
– ವಿದ್ಯಾ ಮಹೇಶ್
– – –
ಈಶಾನ್ಯೆ ಚೆಲುವೆಯ ಸೆರಗು ಹಿಡಿದು
ನನ್ನ ತಂದೆ- ತಾಯಿ ಈ ಸಂಬಂಧವನ್ನು ಖಂಡಿತಾ ಒಪ್ಪುತ್ತಾರೆ ಎಂದು ನಾನು ಅವಳಿಗೆ ಧೈರ್ಯ ತುಂಬುವಾಗ ನನ್ನಲ್ಲೇ ಆತಂಕ ಮನೆಮಾಡಿತ್ತು. ಧರ್ಮ ಬೇರೆ, ಭಾಷೆ ಬೇರೆ. ಸಂಸ್ಕೃತಿ, ಆಹಾರ ಪದ್ಧತಿಯಲ್ಲಂತೂ ಅಜಗಜಾಂತರ. ಆದರೆ, ಪ್ರೀತಿ ನಿಸ್ಪೃಹ. ಹೆತ್ತು, ಸಾಕಿ ಸಲುಹಿದ ತಂದೆ- ತಾಯಿ ಒಂದೆಡೆ, ತಾಯಿಯಂತೆ ಕೈಹಿಡಿದು ನಡೆಸಬಲ್ಲವಳು ಇನ್ನೊಂದೆಡೆ. ಇದು ನನ್ನ ಜೀವನದ ಅತಿ ದೊಡ್ಡ ಮನೋಯುದ್ಧ.
ನಾನು ಮತ್ತು ಅವಳು ಒಂದೇ ದಿನ ಒಂದೇ ಸಂಸ್ಥೆಗೆ ಕೆಲಸಕ್ಕೆ ಸೇರಿದ್ದು. ನನ್ನ-ಅವಳ ಭೇಟಿ, ನಾನು ಅವಳಿಗೆ ಬಿಳಿಹಾಳೆಯೊಂದನ್ನು ಕೊಡುವುದರೊಂದಿಗೆ ಆಯಿತು. ಕೆಲಸಕ್ಕೆ ಹಾಜರಾಗುತ್ತಿದ್ದೇನೆಂಬ ವರದಿಯನ್ನು ಬರೆದುಕೊಡಲು ಅವಳಿಗೆ ಬಿಳಿಹಾಳೆಯೊಂದನ್ನು ಅಂದು ಕೊಟ್ಟೆನೋ ಅಥವಾ ನನ್ನ ಜೀವನದ ಹೊಸ ಅಧ್ಯಾಯವನ್ನು ಬರೆಯಲು ಕೊಟ್ಟೆನೋ ಗೊತ್ತಿಲ್ಲ! ಮೂರು ವರ್ಷಗಳು ಕಳೆಯುವಲ್ಲಿ ಅವಳು ನನ್ನ ಬಗ್ಗೆ ತಿಳಿದುಕೊಂಡಿದ್ದಕ್ಕಿಂತ ನಾನು ಅವಳ ಬಗ್ಗೆ ತಿಳಿದುಕೊಂಡಿದ್ದೇ ಹೆಚ್ಚು. ಇಬ್ಬರೂ ಮನೆಯ ಜವಾಬ್ದಾರಿ ಹೊತ್ತವರು. ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಹೆಣಗುತ್ತಿರುವವರು. ತಂದೆ- ತಾಯಿಯ ಮಾತನ್ನು ಮೀರದವರು. ಪ್ರೀತಿಯೆಂದರೆ ಆಕರ್ಷಣೆ ಎಂಬ ಹಂತವನ್ನು ಮೀರಿದವರು. ಎಲ್ಲಕ್ಕಿಂತ ಮಿಗಿಲಾಗಿ, ಪ್ರೀತಿಯೆಂದರೆ ಒಂದು ಜವಾಬ್ದಾರಿ, ಬದ್ಧತೆ ಎಂದು ದೃಢವಾಗಿ ನಂಬಿದವರು. ಮೂರು ವರ್ಷದವರೆಗೆ ನಮಗರಿಯದಂತೆಯೇ ಒಬ್ಬರನ್ನೊಬ್ಬರು ಒರೆಗೆ ಹಚ್ಚಿ ನೋಡಿದವರು.
ಸರಿ! ನಾನೇ ಪ್ರಸ್ತಾವನೆಯನ್ನು ಅವಳ ಮುಂದಿಟ್ಟೆ. ಆ ಕ್ಷಣದಿಂದ ಅವಳಲ್ಲಿ ಕ್ಷಣಕ್ಷಣವೂ ಆತಂಕ. ಈಗಾಗಲೇ ಇಪ್ಪತ್ತು ಸಂಬಂಧ ನೋಡಿದರೂ ಒಂದನ್ನೂ ಒಪ್ಪದ ನನ್ನ ಮೇಲೆ ತಂದೆ- ತಾಯಿಗೆ ಅಸಮಾಧಾನ, ಆತಂಕ. “ಧೈರ್ಯಂ ಸರ್ವತ್ರ ಸಾಧನಂ’ ಎಂದು ತಂದೆಗೆ ವಿಷಯ ತಿಳಿಸಿದೆ. ಅವರಲ್ಲೂ ಆತಂಕ, ಅಂತರ್ಯುದ್ಧ ಶುರು. ನನಗೆ ಕಂಡಿದ್ದು ತಾಳ್ಮೆಯ ತಪಸ್ಸಿನದೊಂದೇ ದಾರಿ. ಎರಡು ವರ್ಷಗಳಲ್ಲಿ ತಪಸ್ಸು ಫಲಿಸಿತು. ನನ್ನ ತಂದೆ- ತಾಯಿ ಅಸ್ತು ಎಂದರು. ನಂತರ ಶುರುವಾದದ್ದು ಅವಳ ತಂದೆ-ತಾಯಿಯನ್ನೊಪ್ಪಿಸುವ ಕೆಲಸ.
ಅವಳ ತಾಯಿಗೆ ನನ್ನ ಮೇಲೆ ಎಲ್ಲಿಲ್ಲದ ನಂಬಿಕೆ. ಆದರೂ ಇಲ್ಲಿನ ಸಂಸ್ಕೃತಿ, ಭಾಷೆ, ಪರಿಸರದಲ್ಲಿ ಬೆಳೆಯದ ಮಗಳು ಹೇಗೆ ಹೊಂದಿಕೊಂಡಾಳು ಎಂಬ ಸಹಜ ಆತಂಕ. ಗಟ್ಟಿ ಮನಸು ಮಾಡಿ ಅವಳ ತಂದೆಯೊಂದಿಗೆ ವಿಷಯ ಪ್ರಸ್ತಾಪಿಸಿದರು. ನಂತರ ನಡೆದದ್ದೆಲ್ಲ ಹಾಲಿನಲ್ಲಿ ಸಕ್ಕರೆ ಬೆರೆತಂತೆ. ಈಶಾನ್ಯ ಭಾರತದ ಹುಡುಗಿಗೆ ದಕ್ಷಿಣ ಭಾರತದ ಹುಡುಗನೊಂದಿಗೆ ಬಂಧ ಬೆಸೆಯುವುದರೊಂದಿಗೆ ಎಲ್ಲಡೆ ಅನುರಣಿಸಿದ್ದು ಮೇರಾ ಭಾರತ್ ಮಹಾನ್!. ಎಲ್ಲರೂ ಸೋತು ಗೆದ್ದರು. ನಮ್ಮದು ಈಗ ಸುಖೀ ಸಂಸಾರ, ಆನಂದ ಸಾಗರ.
– ಮನ್‌ಬಿಂದರ್ ಕೌರ್, ರೂಪೇಶ್ ಕುಮಾರ್
ವೈರತ್ವದ ಗಡಿರೇಖೆ ದಾಟಿ…
ನಾನು- ರೇಖಾ ಬಿ.ಎಡ್ ಕ್ಲಾಸ್‌ಮೇಟ್ಸು. ಕಾಲೇಜಲ್ಲಿ ಓದೋವಾಗ ನನಗೂ ಅವಳಿಗೂ ಅಷ್ಟಾಗಿ ಪರಿಚಯವೇನೂ ಇರಲಿಲ್ಲ. ಪರಿಚಯ ಆಗಿದ್ಯಾವಾಗ ಅಂದರೆ ಕಾಲೇಜು ಮುಗಿದು, ಅವಳಿಗೆ ಟೀಚರ್ ಕೆಲಸ ಸಿಕ್ಕಿ ಅವಳು ನಮ್ಮೂರಿಗೆ ಬಂದಾಗ. ಅವಳಿಗೆ ನಮ್ಮೂರು ಹೊಸದು. ಯಾರೂ ಪರಿಚಯದವರಿರಲಿಲ್ಲ. ಹೀಗಾಗಿ ಮನೆ ಹುಡುಕೋದರಿಂದ ಹಿಡಿದು ಪ್ರತಿಯೊಂದು ಕೆಲಸಗಳಿಗೂ ಅವಳಿಗೆ ನಾನೇ ನೆರವಾದೆ. ಈ ರೀತಿ ನಾವಿಬ್ರೂ ಹತ್ತಿರವಾದ್ವಿ. ನಾವು ಇಲ್ಲಿಯವರೆಗೂ ಒಬ್ಬರನ್ನೊಬ್ಬರು ಲವ್ ಪ್ರಪೋಸ್ ಮಾಡಿಕೊಂಡಿಲ್ಲ. ನಮ್ಮಿಬ್ಬರಿಗೂ ನಾವು ಪ್ರೀತಿಯಲ್ಲಿ ಬಿದ್ದಿರೋದು ಗೊತ್ತಿತ್ತು. ಹೀಗಾಗಿ ಅದರ ಅಗತ್ಯವೇ ಬೀಳಲಿಲ್ಲ.
ನಮ್ಮಿಬ್ಬರದೂ ಬೇರೆ ಬೇರೆ ಜಾತಿಯಾದ್ದರಿಂದ ಮದುವೆಗೆ ನಮ್ಮನೇಲಿ ವಿರೋಧ ಬರಬಹುದೆಂದು ನಾನಂದುಕೊಂಡಿದ್ದೆ. ರೇಖಾಳಿಗೆ ಅವಳ ಮನೇಲಿ ಯಾವ ವಿರೋಧವೂ ಬರಲ್ಲ ಅಂತ ನಂಬಿಕೆ ಇತ್ತು. ಹಾಗೆಯೇ ಆಯಿತು. ಅವಳ ಮನೆಯವರಿಗೆ ಮೊದಲೇ ನನ್ನ ಪರಿಚಯವಿದ್ದುದರಿಂದ ಸಲೀಸಾಗಿ ಒಪ್ಪಿದರು.
ತೊಂದರೆಯಾಗಿದ್ದು ನಮ್ಮನೇಲಿ. ಅಮ್ಮ ಮತ್ತು ತಮ್ಮ ಈ ಮದುವೆ ನಡೆಯಲೇಕೂಡದೆಂದು ಹಠ ಹಿಡಿದು ಕೂತುಬಿಟ್ಟರು. ಅಪ್ಪ ಮಾತ್ರ “ಯಾರೂ ಮಾಡದೇ ಇರೋದನ್ನ ನೀನೇನೂ ಮಾಡಿಲ್ಲ’ ಅಂತ ಹೇಳಿ ನನ್ನ ಬೆಂಬಲಕ್ಕೆ ನಿಂತರು. ನನ್ನನ್ನು ರೇಖಾಳಿಂದ ದೂರ ಮಾಡೋಕೆ ಅಮ್ಮ ಅವರಿವರ ಕೈಯಿಂದ ಬುದ್ಧಿಮಾತು ಹೇಳಿಸಿದರು. ನನ್ನ ನಿರ್ಧಾರ ಅಚಲವಾಗಿತ್ತು: ನಾನು ಇಷ್ಟಪಟ್ಟ ಮೊದಲ ಹುಡುಗಿಯನ್ನೇ ನಾನು ಮದುವೆಯಾಗೋದು ಅಂತ. ಹಾಗೆಂದು ಮನೆಯವರ ಕಣ್ತಪ್ಪಿಸಿ ಎಲ್ಲೋ ಒಂದು ಕಡೆ ಮದುವೆಯಾಗಿ ಎರಡೂ ಮನೆಗಳ ನಡುವೆ ವೈರತ್ವವನ್ನು ತರೋಕೆ ನಾನು ಸಿದ್ಧನಿರಲಿಲ್ಲ. ಮದುವೆಯಾದರೆ ರೇಖಾಳನ್ನೇ, ಅದೂ ನೀವು ಒಪ್ಪಿದ ನಂತರವೇ ಆಗುತ್ತೇನೆ. ಇಲ್ಲದಿದ್ದರೆ ಮದುವೆ ಆಗೋದೇ ಇಲ್ಲ ಅಂತ ನಾನೂ ಹಟ ಹಿಡಿದು ಕೂತೆ. ಹೀಗೇ 2 ವರ್ಷಗಳು ಕಳೆದವು. ಈ ಸಮಯದಲ್ಲಿ ರೇಖಾಳ ಮನೆಯವರಂತೂ ತುಂಬಾ ಸಂಕಷ್ಟಗಳನ್ನು ಅನುಭವಿಸಿದರು. ಲವ್ ಮಾಡಿದ ಹುಡುಗಿಯನ್ನು ಮದುವೆ ಮಾಡಿಕೊಡಲಾಗದೆ, ಮನೆಯಲ್ಲಿಟ್ಟುಕೊಳ್ಳೋದರ ಸಂಕಟ ಹೆತ್ತವರಿಗೇ ಗೊತ್ತು. ನಮ್ಮ ಪ್ರೇಮ ಪ್ರಕರಣಕ್ಕೆ ಕಡೆಗೂ ಜಯ ಸಿಕ್ಕಿತು. ಅಮ್ಮ ಕಡೆಗೂ ಒಪ್ಪಿದಳು. ಇಂದಿಗೆ ನಾನು- ರೇಖಾ ಮದುವೆಯಾಗಿ ಒಂದೂವರೆ ವರ್ಷ.
ಮದುವೆಯಾದ ಮೇಲೆ ನನ್ನವಳು ಮನೆಯಲ್ಲಿ ಹೇಗೆ ಹೊಂದಿಕೊಳ್ಳುತ್ತಾಳ್ಳೋ ಎಂಬ ಭಯವಿತ್ತು. ಆದರೆ, ನನಗೇ ಆಶ್ಚರ್ಯವಾಗುವಂತೆ ನಮ್ಮ ಸಂಸಾರದಲ್ಲಿ ಒಂದಾದಳು. ಈಗ ನಮ್ಮ ಎರಡೂ ಕುಟುಂಬಗಳೂ ಚೆನ್ನಾಗಿವೆ. ಅದನ್ನು ಕಂಡಾಗ ಅಷ್ಟು ಕಷ್ಟ ಎದುರಿಸಿದ್ದಕ್ಕೂ ಸಾರ್ಥಕ ಅನ್ನಿಸುತ್ತೆ. ನನ್ನ ಪ್ರಕಾರ ಪ್ರೀತಿಸಿ ಮದುವೆಯಾಗೋದಷ್ಟೆ ಅಲ್ಲ, ಮನೆಯವರನ್ನೂ ಒಪ್ಪಿಸಿ ಮದುವೆಯಾಗೋದಿದೆಯಲ್ಲ, ಅದು ನಿಜಕ್ಕೂ ದೊಡ್ಡದು!
– ಸೋಮು - ರೇಖಾ ಕುದರಿಹಾಳ, ಗಂಗಾವತಿ
ಮನೆಯವರನ್ನು ಗೆಲ್ಲುವ ಗುಟ್ಟು…
– ಹೆತ್ತವರು ಮಾತಾಡದಿದ್ದರೂ ಚಿಂತೆಯಿಲ್ಲ. ಹುಟ್ಟೂರಿಗೆ, ಹೆತ್ತವರು ಇರುವ ಮನೆಗೆ ಆಗಿಂದಾಗ್ಗೆ ಹೋಗಿಬನ್ನಿ
– ಊರಿಗೆ/ ಮನೆಗೆ ಹೋಗುವಾಗೆಲ್ಲಾ ಅಪ್ಪ- ಅಮ್ಮನಿಗೆ ಇಷ್ಟವಾಗುವ ವಸ್ತುಗಳನ್ನು ಕೊಂಡೊಯ್ಯಿರಿ. ಹೀಗೆ ಮಾಡಿದರೆ ಮಗ(ಳು) ಮದುವೆಯ ನಂತರವೂ ನಮ್ಮನ್ನು ಮರೆತಿಲ್ಲ ಎಂಬ ಫೀಲ್ ಹೆತ್ತವರಿಗೆ ಬರುತ್ತದೆ!
– ಹೆತ್ತವರನ್ನು/ ಕುಟುಂಬವನ್ನು ತುಂಬಾ ಮಿಸ್ ಮಾಡಿಕೊಳ್ತಾ ಇದೀವಿ ಎಂಬ ಸಂದೇಶವನ್ನು ಪರಿಚಯದವರ ಮೂಲಕ ಆಗಾಗ್ಗೆ ಕಳಿಸುತ್ತಿರಿ.
– ನಾವೇನು ಯಾರೂ ಮಾಡೆªà ಇರುವ ತಪ್ಪುನ ಮಾಡಿದೀವಾ? ಈ ಹೆತ್ತವರು ಹೀಗೆಲ್ಲಾ ಮುನಿಸ್ಕೊಂಡು ಏನ್ ಸಾಧಿಸ್ತಾರೆ ಎಂಬಂಥ ಮಾತುಗಳನ್ನು ಯಾವತ್ತೂ ಆಡಬೇಡಿ.
– ಅಪ್ಪಂದಿರು ಹಠ ಸಾಧಿಸಬಹುದು. ಆದರೆ, ಅಮ್ಮನ ಮನಸ್ಸು ಸದಾ ಮಕ್ಕಳ ಕುರಿತೇ ಯೋಚಿಸುತ್ತಿರುತ್ತದೆ. ಅಮ್ಮನೊಂದಿಗೆ ಸಂಪರ್ಕದಲ್ಲಿರಿ.
– ತಮ್ಮ- ತಂಗಿ, ಚಿಕ್ಕಪ್ಪ- ದೊಡ್ಡಪ್ಪ, ಸೋದರತ್ತೆ… ಇವರೆಲ್ಲರೊಂದಿಗೆ ನಿರಂತರ ಸಂಪರ್ಕದಲ್ಲಿರಿ. ಹೆತ್ತವರ ಮನಸ್ಸನ್ನು ಕರಗಿಸುವ ಪ್ರಯತ್ನವನ್ನು ಇವರಲ್ಲಿ ಯಾರಾದರೊಬ್ಬರೂ ಖಂಡಿತಾ ಮಾಡುತ್ತಾರೆ.