Advertisement

ಬಾರದ ರೈಲಿಗೆ ಸಡಗರದಿಂದ ಕಾಯಬಲ್ಲ ಹಠಮಾರಿ ನಾನಲ್ಲ! ಕೈ ಕೊಟ್ಟ ಪ್ರೇಮಿಗೊಂದು ಮನದಾಳದ ಮಾತು

12:03 PM Feb 14, 2021 | Team Udayavani |

ಪ್ರೀತಿ ಎಂದರೆ ಸಿಹಿಯಾದ ನೋವು. ಆದರೆ ಈ ಸಿಹಿಯಾದ ನೋವು ನನ್ನ ಬದುಕಿನ ಅರ್ಧದಷ್ಟು ಕನಸುಗಳನ್ನು ಹಸಿ ಹಸಿಯಾಗಿ ಸುಟ್ಟು ಹಾಕುವಂತೆ ಮಾಡಿತ್ತು. ಎಷ್ಟು ಘೋರವೋ, ಅಷ್ಟೇ ಸತ್ಯವೂ ಕೂಡ. ಇಂದು ನಾನು ನಿನಗೆ ತೀರಾ ಅಪರಿಚಿತ ವ್ಯಕ್ತಿ. ಬದುಕಿನ ದಾರಿಯಲ್ಲಿ ನಾನು ಎದುರಾದರೂ ಕೂಡ, ಕಿರುನಗೆಯನ್ನು ನಿನ್ನ ತುಟಿಯಂಚಿನಲ್ಲಿ ಬಲವಂತವಾಗಿ ಎಳೆದುಕೊಳ್ಳದಷ್ಟು ಅಪರಿಚಿತ ವ್ಯಕ್ತಿ.

Advertisement

ಒಂದು ಕಾಲದಲ್ಲಿ ನಾನೇ ನಿನ್ನ ಪ್ರಪಂಚ ಆಗಿದ್ದೆ. ಕಾಲ ಎಲ್ಲವನ್ನೂ ಬದಲಾಯಿಸಿ ಬಿಟ್ಟಿತು. ಆದರೂ ಅಂದು ನನ್ನ ಪಾಲಿಗೆ ನೀನೇ ಜಗತ್ತು. ಇವತ್ತಿಗೂ ನನ್ನ ನೆನಪು, ಅಲೆದಾಟ, ವಿಶ್ರಾಂತಿ, ಆಸೆ, ಕನಸು, ಕವನ, ಕಲ್ಪನೆ ಕನವರಿಕೆಗಳೆಲ್ಲವೂ ನಿನ್ನ ಸುತ್ತಲೇ. ಯಾವತ್ತಾದರೊಮ್ಮೆ ನನ್ನ ಬದುಕು ಶೂನ್ಯವಾಗಿ ಬಿಡಬಹುದು ಎಂಬುದನ್ನು ಊಹಿಸದ ಹುಡುಗಿ ನಾನು. ಭಾವಗೀತೆಯಂತೆ ಬದುಕು ಭಾವನೆಗಳು ತುಂಬಿದ ಹಾಡಿತ್ತು.  ಜೊತೆಗೆ ಎಲ್ಲೋ ದೂರದ ಕತ್ತಲಲ್ಲಿ ಸಂಭ್ರಮಗಳಿದ್ದವಾದರೂ ಅವು ನನ್ನವಲ್ಲ. ನನ್ನಲ್ಲಿ ಆಸೆ ಕನಸುಗಳಿದ್ದವು ಅವುಗಳಿಗೆ ನದಿಯಾಗುವುದು ಗೊತ್ತಿರಲ್ಲಿಲ್ಲ. ನೀನು ಯಾವಾಗ ಬದುಕಿನ ಅಂಗಳಕ್ಕೆ ಅಪ್ಪಣೆಯಿಲ್ಲದೇ ಲಗ್ಗೆ ಇಟ್ಟೆ. ಅಂದೇ ಬದುಕು ಅಲ್ಲೋಲ ಕಲ್ಲೋಲವಾಗಿ ಬಿಟ್ಟಿತ್ತು. ಮನಸು ನನ್ನ ಮಾತು ಕೇಳುವುದನ್ನು ನಿಲ್ಲಿಸಿತ್ತು, ಅಂದು ನೀನೇ ನನ್ನ ಸಂಪೂರ್ಣ ಬದುಕಾಗಿದ್ದೆ, ನನ್ನ ಅಸ್ತಿತ್ವವನ್ನು ಕದಡಿ ಬಿಟ್ಟಿದ್ದೆ. ನೀನು ಸಿಗುವ ಮುನ್ನವೇ ಚೆನ್ನಾಗಿತ್ತು, ಕ್ಷಮಿಸು ಆದರೆ ನೀನು ಯಾವಾಗ ಬದುಕಿನ ಪುಟದಲ್ಲಿ ಲಗ್ಗೆ ಇಟ್ಟೆಯೋ ಆಮೇಲೆ ನಾನೇ ಬದಲಾಗಿಬಿಟ್ಟಿದ್ದೆ.

ಇದನ್ನೂ ಓದಿ:ನಿಮಗೆ ಗೊತ್ತಿಲ್ಲದ “ವ್ಯಾಲೆಂಟೈನ್ಸ್ ಡೇ” ..!

ನೀ ದೂರಾದ ಬಳಿಕ ಶೂನ್ಯ ತುಂಬಿದ ಬದುಕಲ್ಲಿ ನೆನಪಿಸಿಕೊಂಡದ್ದು, ನಾ ನಂಬಿದ ದೈವವನ್ನು. ಒಂದೇ ಸಮನೆ ನಿಟ್ಟಿಸಿರುನೊಂದಿಗೆ ದೇವರನ್ನು ಶಪಿಸಿದ್ದೆ. ಕೈ ಹುಡುಗನ ಮೋಸವನ್ನು ಅರಿಯದಾದೆ ಎಂದು ನನಗೆ ಹಿಡಿ ಶಾಪ ಹಾಕಿದ್ದೆ. ದೇವರು ಮಾತ್ರ ಯಾವಾಗಲೂ ಹಸನ್ಮುಖಿಯಾಗಿ ಕುಳಿತಿದ್ದ. ಆತನಿಗೆ ಎಲ್ಲ ಗೊತ್ತಿದ್ದರೂ ಏನು ಗೊತ್ತಿಲ್ಲದವನ ಹಾಗೆ ಇರುತ್ತಿದ್ದ, ಮಂತ್ರ ಗೊತ್ತಿಲ್ಲದ ಹುಡುಗ ಭಗವಂತನನ್ನು ಕರಿಯುವ ತರಹ.

ನೋಡು, ನೀನು ಬೇಡ ಎಂದಾಕ್ಷಣ ಈ ಸಮಯ ಕಾಯಲ್ಲಿಲ್ಲ. ಈ ಬದುಕು ನೀನಿಲ್ಲದೇನೆ ಮುಂದಕ್ಕೆ ಓಡುತ್ತಿತ್ತು, ಈಗಾಗಲೂ ನಿರಂತರವಾಗಿ ಸಾಗುತ್ತಿದೆ. ಪ್ರೇಮಿಗಳಿಗೆ ಕಾಯುವುದು ಗೊತ್ತೇ ಹೊರತು, ಪ್ರೇಮಿಗಳಿಗಾಗಿ ಬದುಕು ಕಾಯುವುದಿಲ್ಲ. ಹಗಲು ಸ್ಥಗಿತವಾಗುವುದಿಲ್ಲ, ರಾತ್ರಿ ನಿಲ್ಲುವುದಿಲ್ಲ. ನೀನು ಬೇಡ ಎಂದು ತಿರಸ್ಕರಿಸಿದ ದಿನವೂ ಸೂರ‍್ಯ ಮುಳುಗಿದ್ದಾನೆ. ನಕ್ಷತ್ರ ಅರಳಿದೆ. ರೇಷನ್ ಅಂಗಡಿಯ ಬಾಗಿಲು ತೆರೆದಿತ್ತು. ಆಕಾಶದಲ್ಲಿನ ಪೂರ್ಣ ಚಂದ್ರ ನನ್ನ ಕಣ್ಣಂಚಿನ ಹನಿ ಕಂಡು ಅಯ್ಯೋ ಹುಚ್ಚು ಮನಸ್ಸೇ ಎಂದು ಹಂಗಿಸುವಂತೆ ಕಂಡಿದ್ದ.  ಮತ್ತೊಂದೆಡೆ ‘ಬೇಡ’ ಎಂದು ಅನ್ನಿಸಿಕೊಂಡು ಬಂದ ಹೃದಯವೊಂದು ಅಳೆತ್ತರದ ಕನ್ನಡಿಯಂತೆ ಚೂರು ಚೂರಾಗಿ ಒಡೆದು ಬೀಳುವ ಸದ್ದು ಮಾತ್ರ ಯಾರಿಗೂ ಸಹ ಕೇಳಿಸಲೇ ಇಲ್ಲ.

Advertisement

ಇದನ್ನೂ ಓದಿ: ಪ್ರೀತಿ ಅಂದ್ರೇನೆ ಹಾಗೇ… ಅದೊಂದು ಸುಂದರ ಅನುಭವ

ದಿನ ಕಳೆದಂತೆ ನಿನ್ನ ನೆನಪಿನ ಉಯ್ಯಾಲೆ ಜೊತೆ ಜೀಕುತ್ತಿದ್ದೆ. ಬದುಕಿನ ಅಂಗಳದಲ್ಲಿ ಸುಂದರ ಕನಸುಗಳು ಹೊತ್ತು ಕಾದದ್ದು ಎಷ್ಟು ಸತ್ಯವೋ. ಅಷ್ಟೇ ಇವತ್ತಿಗೂ ನಿನ್ನ ನೆನಪೆಂಬ ಕನಸಿಗೆ ತಿಲಾಂಲಜಿ ಇಟ್ಟು ಸಾಗುತ್ತಿರುವುದು ಸುಳ್ಳಲ್ಲ. ನೆನಪಿನರಲಿ ಇದೀಗ ನಾನು ಒಂಟಿತನದಲ್ಲಿ ಪರಮ ಸುಖಿ. ನಾನು ನಾನಾಗಿ ಬದಲಾಗಿದ್ದೇನೆ. ಅಂದು ಕಂಡವಳು ಇಂದಿಗೆ ಸಂಪೂರ್ಣ ಬದಲಾಗಿದ್ದಾಳೆ. ಇಲ್ಲಿ ನೀ ನನ್ನ ಬದುಕೆಂಬ ಲಹರಿಯಲ್ಲ. ನಿನ್ನ ನೆನಪೆಂಬ ಸುಳಿ ನನ್ನ ಬಳಿ ಇನ್ನೆಂದಿಗೂ ಸುಳಿಯುವುದೇ ಇಲ್ಲ. ಕನಸಿನ ಮೂಟೆ ಹೊತ್ತು ದೂರ ಸಾಗುತ್ತಿರುವೆನು. ಅಲ್ಲೊಂದು ನನ್ನದೇ ಸುಂದರ ಪ್ರಪಂಚ ಸೃಷ್ಟಿಸಿಕೊಳ್ಳುತ್ತೇನೆ.

ಇನ್ನು ನಿನ್ನ ಬದುಕು ಅಮೃತ ಶಿಲೆಯ ಹಾದಿಯಲ್ಲಿ ಸಾಗಬಹುದು. ಆದರೆ ಪಾದದ ಮಾಂಸದಲ್ಲಿ ನನ್ನ ನೆನಪೊಂದು ಸದಾ ನಿನ್ನನ್ನು ಮುಳ್ಳಾಗಿ ಕಾಡುತ್ತದೆ. ನಿನ್ನ ಮನೆಯಲ್ಲಿ ಸಂಪತ್ತು ಮಳೆಯಾಗಿ ಸುರಿಯಬಹುದು, ಆದರೆ ಎದೆಯಲ್ಲೊಂದು ಬಡತನ ಕಡೆತನಕ ಉಪವಾಸ ಕೂತಿರುತ್ತದೆ. ನಾಳೆಯ ಕನಸು ಇವತ್ತಿನ ವಾಸ್ತವಕ್ಕಿಂತ ರುಚಿಯಾದದ್ದು. ಆಹಾ! ಬದುಕಿನಲ್ಲಿ ಕೆಲವು ಪ್ರೆಶ್ನೆಗಳಿಗೆ ಉತ್ತರ ಸಿಗೋದಿಲ್ಲ, ಅದು ನಿಜನೇ ಅಲ್ವೆನೇ? ಉತ್ತರ ಸಿಗುವ ಹೊತ್ತಿಗೆ ಕೆಲವು ಪ್ರೆಶ್ನೆಗಳು ಅರ್ಥನೇ ಕಳೆದುಕೊಂಡಿರುತ್ತದೆ, ಕೆಲವೊಂದು ಸಂಬಂಧಗಳು ಹೃದಯವನ್ನು ಬೆಸೆಯುತ್ತದೆ. ಇನ್ನು ಕೆಲವು ಕಾರಣವಿಲ್ಲದೆ ಕಳಚಿ ಬೀಳುತ್ತವೆ. ಆದರೂ ಕೂಡ ಬಾರದ ರೈಲಿಗೂ ಸಡಗರದಿಂದ ಕಾಯಬಲ್ಲ ಹಠಮಾರಿ ನಾನಲ್ಲ.

ಬದುಕಿನ ಎಲ್ಲಾ ಪ್ರೆಶ್ನೆಗೆ ಈಗಾಗಲೇ ಬಹುಬೇಗನೇ ಉತ್ತರ ದೊರಕಿದೆ. ಆದರೂ ನನ್ನ ಹೃದಯದ ಮಾತಿಗೆ ಅರ್ಥವಾಗಿದ್ದ, ನಿನ್ನನ್ನು ಎಂದಿಗೂ ದೂಷಿಸುವುದಿಲ್ಲ. ಕೊನೆಯಾದಾಗಿ ಬದುಕಿನ ತುಂಬಾ ಕಲರ್ ಫುಲ್ ಕನಸುಗಳನ್ನು ಹುಟ್ಟು ಹಾಕಿ, ಬಲುದೊಡ್ಡ ಪಾಠ ಕಲಿಸಿ ಬಿಟ್ಟಹೋದ ನಿನಗೆ ಧನ್ಯವಾದ ಮನವೇ.

ಸಾಯಿನಂದಾ ಚಿಟ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next