Advertisement

ಅಪ್ಪಣ್ಣ ಹೆಗ್ಡೆ-90ರ ಸಂಭ್ರಮ-ಅಪ್ಪಣ್ಣ ಹೆಗ್ಡೆ ಆತ್ಮವಿಶ್ವಾಸದ ಪ್ರತೀಕ : ಡಾ| ಹೆಗ್ಗಡೆ

12:40 PM Dec 25, 2024 | Team Udayavani |

ಕುಂದಾಪುರ: ಬಸ್ರೂ ರಿನ ಅಪ್ಪಣ್ಣ ಹೆಗ್ಡೆಯವರು ಆತ್ಮವಿಶ್ವಾಸದ ಪ್ರತೀಕವಿದ್ದಂತೆ. ಎಲ್ಲ ಸಂದರ್ಭದಲ್ಲೂ ಅಧಿಕಾರಯುತವಾಗಿ, ಗಟ್ಟಿ ಸ್ವರದಲ್ಲಿ ಮಾತನಾಡುತ್ತಾರೆ. ನಿಂದನೆ, ಪ್ರಶಂಸೆ ಎರಡನ್ನೂ ಸಮಾನವಾಗಿ ಸ್ವೀಕರಿಸಿದವರು.
ಯಾವುದನ್ನೂ ಹೆಚ್ಚಿಗೆ ತಲೆಗೆ ಹಚ್ಚಿಕೊಳ್ಳದ ಅಜಾತಶತ್ರು. ಸಹನೆ, ತಾಳ್ಮೆ, ಪರೋಪಕಾರಿ ಚಿಂತನೆಯಿಂದ ಅವರ ಆಯಸ್ಸು
ಮತ್ತಷ್ಟು ವೃದ್ಧಿಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮ ಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಅವರು ಮಂಗಳವಾರ ಸಂಜೆ ವಕ್ವಾಡಿಯ ಗುರುಕುಲ ಶಿಕ್ಷಣ ಸಂಸ್ಥೆ ಆವರಣದಲ್ಲಿ ಬಿ. ಅಪ್ಪಣ್ಣ ಹೆಗ್ಡೆ ಜನ್ಮ ದಿನೋತ್ಸವ ಸಮಿತಿ
ಹಾಗೂ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ಧಾರ್ಮಿಕ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆಯವರಿಗೆ 90ನೇ ಜನ್ಮ ದಿನದ ಪ್ರಯುಕ್ತ ಸಾರ್ವಜನಿಕ ಗೌರವ ಸಮರ್ಪಿಸಿ ಮಾತನಾಡಿದರು.

ಪಂಚಾಯಿತಿಕೆಯಲ್ಲಿ ಬಹಳ ದೊಡ್ಡ ಹೆಸರು ಮಾಡಿರುವ ಅವರಿಗೆ ದೀರ್ಘಾಯುಷ್ಯ ಪ್ರಾಪ್ತವಾಗಲಿ. ಅಪ್ಪಣ್ಣ ಹಾಗೂ ಅಣ್ಣಪ್ಪ ಎರಡೂ ಹೆಸರಿನಲ್ಲಿರುವ ಪದಗಳು ಒಂದೇ. ಅಪ್ಪಣ್ಣ ಪದವನ್ನು ಆಂಗ್ಲ ಭಾಷೆಯಲ್ಲಿ ಉಲ್ಟಾ ಬರೆದರೆ ಅಣ್ಣಪ್ಪ ಆಗುತ್ತದೆ ಎಂದರು.

ಶಿಕ್ಷಣ ಪ್ರಶಸ್ತಿ ಪ್ರದಾನ
ಬಸ್ರೂರು ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿ ಸ್ವೀಕರಿಸಿದ ವಿಶ್ರಾಂತ ಕುಲಪತಿ ಡಾ| ಬಿ.ಎ. ವಿವೇಕ ರೈ ಮಾತನಾಡಿ, ಇದೊಂದು
ಅಪೂರ್ವವಾದ ಸಂಗಮ. ಇಂತಹ ಪುಣ್ಯ ಪುರುಷರಿರುವ ವೇದಿಕೆ ಮತ್ತೆಂದೂ ಸಿಗಲು ಸಾಧ್ಯವಿಲ್ಲ. ಭಾಗಿಯಾಗುವ ಅವಕಾಶ ಸಿಕ್ಕಿರುವುದೇ ನನ್ನ ಪುಣ್ಯ. ಹೆಗ್ಡೆಯವರ ಹೆಸರಿನ ಪ್ರಶಸ್ತಿ ಸಿಕ್ಕಿರುವುದು ಸಂಭ್ರಮದ ಕ್ಷಣ ಎಂದರು.

Advertisement

ಎಲ್ಲರಿಗೂ ಮಾದರಿ
ಅಧ್ಯಕ್ಷತೆ ವಹಿಸಿದ್ದ ಬಿ. ಅಪ್ಪಣ್ಣ ಹೆಗ್ಡೆ ಜನ್ಮ ದಿನೋತ್ಸವ ಸಮಿತಿ ಅಧ್ಯಕ್ಷ ಡಾ| ಎಂ. ಮೋಹನ್‌ ಆಳ್ವ ಮಾತನಾಡಿ, ಹೆಗ್ಡೆಯವರ
ಜೀವನ ಮೌಲ್ಯವನ್ನು ಕಿರಿಯರಾದ ನಾವೆಲ್ಲರೂ ಅನುಸರಿಸಬೇಕು. ಸತ್ಯ, ನ್ಯಾಯ, ಧರ್ಮಕ್ಕಾಗಿ ಜೀವನ ಪರ್ಯಂತ ಹೋರಾಡಿದ ಮೇರು ವ್ಯಕ್ತಿತ್ವ. ಅವರು ಕುಟುಂಬಕ್ಕೆ ಮಾತ್ರವಲ್ಲ ಊರಿಗೆ ಅಪ್ಪ-ಅಣ್ಣನ ಸ್ಥಾನದಲ್ಲಿರುವಂತಹ ಮಾರ್ಗದರ್ಶಕರು. ಸಹನೆ, ತಾಳ್ಮೆ, ಸಮಾಜದಲ್ಲಿ ಎಲ್ಲರೊಂದಿಗೆ ಬೆರೆಯುವ ಗುಣ ನಮಗೆಲ್ಲರಿಗೂ ಮಾದರಿ ಎಂದರು.

ದತ್ತಿನಿಧಿ ಪ್ರದಾನ
ಇದೇ ವೇಳೆ ಕುಂದಾಪುರ ಹಾಗೂ ಬೈಂದೂರು ತಾಲೂಕಿನ 250ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ 10 ಲಕ್ಷ ರೂ.ಗೂ ಮಿಕ್ಕಿ ದತ್ತಿನಿಧಿ ವಿದ್ಯಾರ್ಥಿ ವೇತನ, ಅಶಕ್ತರಿಗೆ 2.90 ಲಕ್ಷ ರೂ. ವೈದ್ಯಕೀಯ ನೆರವು ಹಸ್ತಾಂತರಿಸಲಾಯಿತು. ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ಅಧ್ಯಕ್ಷ ರಾಮ್‌ಕಿಶನ್‌ ಹೆಗ್ಡೆ ದತ್ತಿನಿಧಿ ಕುರಿತು ಪ್ರಸ್ತಾವಿಸಿದರು.

ಶಾಸಕರಾದ ಎ. ಕಿರಣ್‌ ಕುಮಾರ್‌ ಕೊಡ್ಗಿ, ಯಶ್‌ಪಾಲ್‌ ಸುವರ್ಣ, ರಾಜೇಗೌಡ, ಮಾಜಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಂ. ಸುಕುಮಾರ್‌ ಶೆಟ್ಟಿ ಸಹಿತ ವಿವಿಧ ಗಣ್ಯರು ಶುಭ ಕೋರಿದರು. ಗುರುಕುಲ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕ ನಿರ್ದೇಶಕ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ರಾಮ್‌ರತನ್‌ ಹೆಗ್ಡೆ, ಬಿ. ಅಪ್ಪಣ್ಣ ಹೆಗ್ಡೆ ಜನ್ಮ ದಿನೋತ್ಸವ ಸಮಿತಿ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.

ಗುರುಕುಲ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕಿ ಅನುಪಮಾ ಎಸ್‌. ಶೆಟ್ಟಿ ಸ್ವಾಗತಿಸಿ, ಸಮಿತಿಯ ವಸಂತ್‌ ಗಿಳಿಯಾರು ಪ್ರಸ್ತಾವಿಸಿದರು. ಉದಯ ಶೆಟ್ಟಿ ಪಡುಕೆರೆ ಪ್ರಶಸ್ತಿ ಪತ್ರ ವಾಚಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಆರ್‌. ದಿನಕರ ಶೆಟ್ಟಿ ಫಲಾನುಭವಿಗಳ ಪಟ್ಟಿ ವಾಚಿಸಿದರು. ಕೆ.ಸಿ. ರಾಜೇಶ್‌ ನಿರೂಪಿಸಿ, ಕಲಾಕ್ಷೇತ್ರ ಕುಂದಾಪುರದ ಬಿ. ಕಿಶೋರ್‌ ಕುಂದಾಪುರ ವಂದಿಸಿದರು.

ಭಗವಂತ, ಹಿರಿಯರ ಆಶೀರ್ವಾದ: ಹೆಗ್ಡೆ
ಮನುಷ್ಯನಾದವನು ವ್ಯವಸ್ಥಿತವಾದ ಜೀವನವನ್ನು ಸಾಗಿಸಬೇಕಾದುದು ಬಹಳ ಮುಖ್ಯ. ಅದಕ್ಕಾಗಿ ಬಹಳ ಮುಖ್ಯವಾಗಿ ಭಗವಂತನ ಅನುಗ್ರಹ, ಗುರು-ಹಿರಿಯರ ಆಶೀರ್ವಾದ ಬೇಕು. ಅದರಿಂದಲೇ ನೆಮ್ಮದಿಯ ಜೀವನ ಸಾಧ್ಯ. ನಮ್ಮದು ಧರ್ಮದ
ನೆಲೆಯಲ್ಲಿ ಕಟ್ಟಿದ ದೇಶವಾಗಿದ್ದು, ಎಂದಿಗೂ ಧರ್ಮವೇ ನಮ್ಮನ್ನು ರಕ್ಷಿಸುವುದು. ಅನ್ಯಾಯ ಕೊನೆಗಾಣಿಸಿ, ಶಾಂತಿ, ನೆಮ್ಮದಿಯ ಸಮಾಜ ನಮ್ಮೆಲ್ಲರ ಹೊಣೆಗಾರಿಕೆಯಾಗಿದ್ದು, ಆ ನೆಲೆಯಲ್ಲಿ ಕಿಂಚಿತ್ತು ಸೇವೆ ಸಲ್ಲಿಸಿದ್ದೇನೆ ಎಂದು ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next