Advertisement

ಅಂತಿಮ ಯಾತ್ರೆಗೆ ಜನಸಾಗರ; ಸ್ಮೃತಿ ಸ್ಥಳದಲ್ಲಿ ಮರೆಯಾದ ಭಾರತ ರತ್ನ

02:31 PM Aug 17, 2018 | |

ಹೊಸದಿಲ್ಲಿ: ಮಾಜಿ ಪ್ರಧಾನಿ, ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಅವರ ಅಂತಿಮ ಯಾತ್ರೆಗೆ ಜನಸಾಗರವೇ ಹರಿದು ಬಂದಿತು. ಅಂತ್ಯಕ್ರಿಯೆ ನಡೆದ ಸ್ಮೃತಿ ಸ್ಥಳದಲ್ಲಿ ಲಕ್ಷಾಂತರ ಜನರು, ಜಾತಿ ಮತ, ಧರ್ಮ, ಪಕ್ಷ  ಭೇದ ಮರೆತು ಅಗಲಿದ ಮಹಾನ್‌ ನಾಯಕನಿಗೆ ಗೌರವ ಸಲ್ಲಿಸಿದರು.  

Advertisement

ಶುಕ್ರವಾರ  ಮಧ್ಯಾಹ್ನ ದೀನ ದಯಾಳ್‌ ಉಪಾಧ್ಯಾಯ ಮಾರ್ಗದಲ್ಲಿರುವ ಬಿಜೆಪಿ ಕಚೇರಿಯಿಂದ ಪಾರ್ಥೀವ ಶರೀರದ ಅಂತಿಮ ಮೆರವಣಿಗೆ ಹೊರಟಾಗ  ಜನ ಸಂದಣಿ ಕಿಕ್ಕಿರಿದು ಸೇರಿ ವಾಜಪೇಯಿ ಅಮರ್‌ ರಹೇ ಎಂಬ ಘೋಷಣೆಗಳನ್ನು ಮೊಳಗಿಸಿದರು.. ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಸೇರಿದಂತೆ ಗಣ್ಯಾತೀಗಣ್ಯರು ಮೆರವಣಿಗೆ ಜೊತೆಯಲ್ಲಿ ಕಾಲ್ನಡಿಗೆಯಲ್ಲೇ ಸಾಗಿದರು. 

ಬೆಳಗ್ಗೆ ಕೃಷ್ಣ ಮೆನನ್‌ ಮಾರ್ಗ್‌ನಲ್ಲಿರುವ ಅಟಲ್‌ ಜೀ ಅವರ ನಿವಾಸದಿಂದ ಪಾರ್ಥಿವ ಶರೀರವನ್ನು  ಪುಷ್ಪಾಲಂಕೃತ ಸೇನಾ ವಾಹನದಲ್ಲಿ ಮಿಲಿಟರಿ ಬ್ಯಾಂಡ್‌ ಮತ್ತು ಪಥಸಂಚಲನದೊಂದಿಗೆ ಬಿಜೆಪಿ ಕಚೇರಿಗೆ ತಂದು ಮಧ್ಯಾಹ್ನ 2 ಗಂಟೆಯ ವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. 

ಪ್ರಧಾನಿ ನರೇಂದ್ರ ಮೋದಿ ಅವರು ಪುಷ್ಪ ನಮನ ಸಲ್ಲಿಸಿದರು. ಬಳಿಕ ಅಮಿತ್‌ ಶಾ ಸೇರಿದಂತೆ ಹಲವು ಸಚಿವರು, ಸಾವಿರಾರು ಜನರು ಅಂತಿಮ ನಮನ ಸಲ್ಲಿಸಿದರು.ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. 

ಪಾರ್ಥೀವ ಶರೀರದ ಮೆರವಣಿಗೆ ವೇಳೆ ರಸ್ತೆಯ ಇಕ್ಕೆಲದಲ್ಲಿ ನಿಂತಿರುವ ಸಾವಿರಾರು ಮಂದಿ ಅಂತಿಮ ನಮನ ಸಲ್ಲಿಸಿದರು. ಹಲವರು ಹೂಗಳನ್ನ ಹಾಕಿ ಗೌರವ ನಮನ ಸಲ್ಲಿಸಿದರು. 

Advertisement

ಅಂತಿಮ ಕ್ರಿಯೆ ನಡೆಯುವ ಸ್ಥಳದಲ್ಲಿ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದ್ದು , ಸೇನಾಪಡೆಗಳ ತುಕಡಿಗಳು, 20 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. 

ಅಂತ್ಯಕ್ರಿಯೆ ವೇಳೆ ಪಾಕ್‌ ಸಚಿವ, ಭೂತಾನ್‌ ದೊರೆ ಸೇರಿ ನೆರೆ ರಾಷ್ಟ್ರಗಳ ಗಣ್ಯರೂ ಉಪಸ್ಥಿತರಿದ್ದು ಅಂತಿಮ ನಮನ ಸಲ್ಲಿಸಿದರು. 

ದೆಹಲಿಯಲ್ಲಿ ಅಘೋಷಿತ ಬಂದ್‌ ವಾತಾವರಣವಿದ್ದು, ರಾತ್ರಿಯ ವರೆಗೆ ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಿ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು.  

ಬ್ರಾಹ್ಮಣ ಸಂಪ್ರದಾಯದಂತೆ ವಾಜಪೇಯಿ ಅವರ ಅಂತಿಮ ಕ್ರಿಯೆ ನಡೆಯಿತು. ಸಾಕು ಮಗಳು ನಮಿತಾ ಭಟ್ಟಾಚಾರ್ಯ ಅವರು ಅಂತಿಮ ವಿಧಿ ವಿಧಾನ ನಡೆಸಿದರು. 

ಚಿತಾಭಸ್ಮ ಪುಣ್ಯ ನದಿಗಳಲ್ಲಿ ಲೀನ 
 ಚಿತಾಭಸ್ಮವನ್ನು ಗಂಗಾ ಸೇರಿದಂತೆ ಪವಿತ್ರ ನದಿಗಳಲ್ಲಿ ಲೀನ ಮಾಡಲಾಗುತ್ತಿದೆ. ಉತ್ತರ ಪ್ರದೇಶ ಸರಕಾರ ವಾಜಪೇಯಿ ಅವರಿಗೆ ಗೌರವ ನೀಡಲು ಚಿತಾಭಸ್ಮವನ್ನು ಪುಣ್ಯ ನದಿಗಳಲ್ಲಿ ಲೀನ ಮಾಡಲು ಮುಂದಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next