ಉಪ್ಪಿನಂಗಡಿ : ಮಾಜಿ ಪ್ರಧಾನಿ ದಿ| ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ದಕ್ಷಿಣಕಾಶಿ ಎಂದೇ ಪ್ರಸಿದ್ಧವಾಗಿರುವ ನೇತ್ರಾವತಿ-ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ಬಿಜೆಪಿ ಮುಂದಾಳುಗಳಾದ ಸಿ.ಟಿ. ರವಿ ಮತ್ತು ಶೋಭಾ ಕರಂದ್ಲಾಜೆ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ವೇದಮಂತ್ರ ಘೋಷದೊಂದಿಗೆ ಶನಿವಾರ ಸಂಜೆ ವಿಸರ್ಜಿಸಲಾಯಿತು.
ಶನಿವಾರ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಚರಿಸಿದ ಅಟಲ್ ಚಿತಾಭಸ್ಮದ ಮೆರವಣಿಗೆಯು ಸಂಜೆ ಉಪ್ಪಿನಂಗಡಿಗೆ ಆಗಮಿಸಿತು. ಬಳಿಕ ಭಜನೆ ಸಹಿತ ಮೆರವಣಿಗೆಯಲ್ಲಿ ಚಿತಾಭಸ್ಮವನ್ನು ನದಿ ಸಂಗಮ ತಟಕ್ಕೆ ಕೊಂಡೊಯ್ಯಲಾಯಿತು.
ದೇಗುಲದ ಅರ್ಚಕ ಪದ್ಮನಾಭ ಕೆ. ಹಾಗೂ ನರಸಿಂಹ ಭಟ್ ಅವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಶೋಭಾ ಕರಂದ್ಲಾಜೆ ಅವರು ಚಿತಾ ಭಸ್ಮ ವಿಸರ್ಜಿಸಿದರು. ಸಂಸದ ನಳಿನ್ ಕುಮಾರ್ ಕಟೀಲು, ಬಿಜೆಪಿ ಜಿಲ್ಲಾಧ್ಯಕ್ಷ, ಶಾಸಕ ಸಂಜೀವ ಮಠಂದೂರು, ಶಾಸಕರಾದ ಎಸ್. ಅಂಗಾರ, ಹರೀಶ್ ಪೂಂಜಾ, ಭರತ್ ಶೆಟ್ಟಿ, ರಾಜೇಶ್ ನಾಯ್ಕ ಉಳಿಪಾಡಿಗುತ್ತು, ವೇದವ್ಯಾಸ ಕಾಮತ್, ಮುಂದಾಳುಗಳಾದ ಮೀನಾಕ್ಷಿ ಶಾಂತಿಗೋಡು, ಆಶಾ ತಿಮ್ಮಪ್ಪ ಗೌಡ, ಪ್ರತಾಪ ಸಿಂಹ ನಾಯಕ್, ಮಲ್ಲಿಕಾ ಪ್ರಸಾದ್, ವಿಶ್ವೇಶ್ವರ್ ಭಟ್, ಅಬ್ರಾಹಾಂ ವರ್ಗಿàಸ್, ಕೇಶವ ಗೌಡ ಬಜತ್ತೂರು, ಚನಿಲ ತಿಮ್ಮಪ್ಪ ಶೆಟ್ಟಿ, ಅರುಣ್ ಕುಮಾರ್ ಪುತ್ತಿಲ, ಸುರೇಶ್ ಅತ್ರಮಜಲು, ಸುನಿಲ್ ದಡ್ಡು ಮತ್ತಿತರು ಉಪಸ್ಥಿತರಿದ್ದರು. ಅಸ್ತಿ ವಿಸರ್ಜನೆಗೆ ಅಗತ್ಯ ಸೌಕರ್ಯಗಳನ್ನು ಉಪ್ಪಿನಂಗಡಿ ದೇಗುಲದ ವ್ಯವಸ್ಥಾಪನ ಸಮಿತಿ ಒದಗಿಸಿತ್ತು.
ಪುಷ್ಪ ನಮನ
ವಾಜಪೇಯಿ ಅವರ ಚಿತಾಭಸ್ಮಕ್ಕೆ ಕುಂದಾಪುರದಲ್ಲಿ, ಉಡುಪಿಯ ಚಿತ್ತರಂಜನ್ ಸರ್ಕಲ್‌ನಲ್ಲಿ, ಕಾಪುವಿನ ವಾಜಪೇಯಿ ಕಟ್ಟೆಯಲ್ಲಿ, ಸುರತ್ಕಲ್‌ನಲ್ಲಿ, ಮಂಗಳೂರಿನ ಕದ್ರಿ ಶ್ರೀ ಗೋರಕ್ಷನಾಥ್ ಜ್ಞಾನ ಮಂದಿರ ಮುಂಭಾಗದಲ್ಲಿ ಪುಷ್ಪಾರ್ಚನೆ ಮಾಡಲಾಯಿತು.