ಕಲಬುರಗಿ: ಉದ್ಯಾನ ಎಕ್ಸಪ್ರಸ್ ಮೂಲಕ ಶನಿವಾರ ಬೆಳಗ್ಗೆ ನಗರಕ್ಕಾಗಮಿಸಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿ ಕಲಶವನ್ನು ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭವ್ಯವಾಗಿ ಸ್ವಾಗತಿಸಿ ನೆರೆಯ ಬೀದರ ಜಿಲ್ಲೆಗೆ ಬೀಳ್ಕೊಟ್ಟರು.
ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ನೇತೃತ್ವದಲ್ಲಿ ಕಲಶವು ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಆಗಮಿಸಿದಾಗ, ರೈಲು ನಿಲ್ದಾಣದಲ್ಲಿದ್ದ ಬೀದರ ಸಂಸದ ಭಗವಂತ ಖೂಬಾ, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಿಜೆಪಿ ನಗರ ಅಧ್ಯಕ್ಷ ಹಾಗೂ ರಾಜ್ಯ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ ಮುಂತಾದವರು ಕಲಶ ತೆಗೆದುಕೊಂಡು ತೆರೆದ ವಾಹನದಲ್ಲಿ ಇಡುವ ಮೂಲಕ ನಗರದ ನಾಗರಿಕರಿಗೆ ಚಿತಾಭಸ್ಮದ ದರ್ಶನ ಮಾಡಿಸಿದರು.
ರೈಲು ನಿಲ್ದಾಣದಿಂದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತ, ಜಗತ್ ವೃತ್ತದ ಮೂಲಕ ಅಸ್ಥಿ ಕಲಶದ ಮೆರವಣಿಗೆಯು ಸೂಪರ್ ಮಾರ್ಕೆಟ್‌ನಲ್ಲಿರುವ ಬಿಜೆಪಿ ಕಚೇರಿಗೆ ತೆರಳಿತು. ನಂತರ ಅಲ್ಲಿಂದ ಹಳೆಯ ಪೊಲೀಸ್ ಠಾಣೆ ವೃತ್ತ, ಶಹಾಬಜಾರ್, ಆಳಂದ ಚೆಕ್‌ಪೋಸ್ಟ್, ಔರಾದ್, ಮಹಾಗಾಂವ್ ಮೂಲಕ ನೆರೆಯ ಬೀದರ್ ಜಿಲ್ಲೆ ಪ್ರವೇಶಿಸಿತು.
ಅಸ್ಥಿಕಲಶದ ಭವ್ಯ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಹೊರಾಟ ಇಕ್ಕೆಲಗಳಲ್ಲಿನ ಜನರು ದರ್ಶನ ಪಡೆದರು. ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಮೆರವಣಿಗೆಯ ಪ್ರಮುಖ ವೃತ್ತಗಳಲ್ಲಿ ಕಾಯ್ದು ನಿಂತಿದ್ದರು. ಹಲವೆಡೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅಸ್ಥಿ ಕಲಶಕ್ಕೆ ಪುಷ್ಪಾರ್ಚನೆ
ಮೂಲಕ ನಮನ ಸಲ್ಲಿಸಿದರು.
ರಾಜ್ಯ ವಿಧಾನ ಪರಿಷತ್ ಸದಸ್ಯರಾದ ಕೆ.ಬಿ. ಶಾಣಪ್ಪಾ, ರಘುನಾಥ ಮಲ್ಕಾಪುರೆ, ಶಾಸಕರಾದ ಬಸವರಾಜ ಮತ್ತಿಮೂಡ, ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ್ ಪಾಟೀಲ ತೇಲ್ಕೂರ, ಸುಭಾಷ ಗುತ್ತೇದಾರ, ಮಾಜಿ ಸಚಿವರಾದ ಬಾಬುರಾವ್ ಚವ್ಹಾಣ, ಮಾಲೀಕಯ್ಯ ಗುತ್ತೇದಾರ, ಮಾಜಿ ಶಾಸಕರಾದ ಶಶೀಲ ಜಿ. ನಮೋಶಿ, ಅಮರನಾಥ ಪಾಟೀಲ, ವಿಶ್ವನಾಥ ಪಾಟೀಲ ಹೆಬ್ಟಾಳ, ಸಂಜೀವನ್ ಯಾಕಾಪುರ, ಶರಣಪ್ಪ ಹದನೂರ, ಶರಣಪ್ಪ ತಳವಾರ, ವಿಜಯಕುಮಾರ್ ಡಿ. ಸೇವಲಾನಿ, ಹಣಮಂತರಾಯ್ ಮಲಾಜಿ ಮುಂತಾದವರು ಈ ಸಂದರ್ಭದಲ್ಲಿದ್ದರು.