ಮೈಸೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 95ನೇ ಜನ್ಮದಿನ ಅಂಗವಾಗಿ ಮೈಸೂರು ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ನಗರದ ಆಯುರ್ವೇದ ಆಸ್ಪತ್ರೆ ವೃತ್ತದಲ್ಲಿ ಸಾರ್ವಜನಿಕರಿಗೆ ಎಳನೀರು ವಿತರಿಸುವ ಮೂಲಕ ಸ್ವದೇಶಿ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ರಾಜ್ಯ ಬಿಜೆಪಿ ಸ್ಲಂ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಘು ಕೌಟಿಲ್ಯ ಮಾತನಾಡಿ, ಭಾರತದ ಶ್ರೇಷ್ಠ ರಾಜಕಾರಣಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಶ್ರೇಷ್ಠ ಸಂಸದೀಯ ಪಟು, ವಾಗ್ಮಿ, ಕವಿ, ಪ್ರಧಾನಮಂತ್ರಿಯಾಗಿ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಪೋಕ್ರಾನ್ ಅಣು ಪರೀಕ್ಷೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಬಾಂಧವ್ಯಕ್ಕೆ ಕೊಂಡಿಯಾಗಿ ಲಾಹೋರ್ ಬಸ್ ಪ್ರಯಾಣ ಆರಂಭಿಸುವ ಜತೆಗೆ ತನ್ನ ಕನಸಿನ ಕೂಸಾದ ರಾಷ್ಟ್ರೀಯ ಹೆದ್ದಾರಿ ಮತ್ತು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಜಾರಿಗೆ ತಂದು ಹಳ್ಳಿಗಳಿಗೆ ಅಭಿವೃದ್ಧಿಯ ಕೊಡುಗೆ ನೀಡಿದರು ಎಂದು ಬಣ್ಣಿಸಿದರು.
ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ವಾಜಪೇಯಿ ಮೂರು ಬಾರಿ ಪ್ರಧಾನಮಂತ್ರಿಗಳಾಗಿ ತಮ್ಮದೇ ಆದ ಅಭೂತಪೂರ್ವ ಸೇವೆ ಸಲ್ಲಿಸಿದ್ದಾರೆ. ಅವರ ಸ್ಮರಣಾರ್ಥ ಕನ್ಯಾಕುಮಾರಿಯಿಂದ ದೆಹಲಿಗೆ ಸಂಚರಿಸುವ ರೈಲಿಗೆ ವಾಜಪೇಯಿ ಎಕ್ಸ್‌ಪ್ರೆಸ್ ಎಂದು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.
ನಗರ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀದೇವಿ, ಸಾಮಾಜಿಕ ಹೋರಾಟಗಾರರಾದ ವಿಕ್ರಂ ಅಯ್ಯಂಗಾರ್, ರಂಗನಾಥ್, ಅಪೂರ್ವ ಸುರೇಶ್, ಬಿಜೆಪಿ ಯುವ ಮುಖಂಡರಾದ ಕಡಕೊಳ ಜಗದೀಶ್,ಡಿ.ಕೆ.ನಾಗಭೂಷಣ್, ಸಂತೋಷ್, ರವಿತೇಜ ಇತರರಿದ್ದರು.