ನವದೆಹಲಿ: ಭಾರತ ಕಂಡ ಮಹಾನ್ ಮುತ್ಸದ್ಧಿ, ಹಿರಿಯ ಚೇತನ, ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾರ್ಥಿವ ಶರೀರಕ್ಕೆ ಶುಕ್ರವಾರ ಸಂಜೆ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಿದ ಬಳಿಕ ದತ್ತುಪುತ್ರಿ ನಮಿತಾ ಭಟ್ಟಾಚಾರ್ಯ ಅವರು ಯುಮುನಾ ನದಿ ದಡದಲ್ಲಿರುವ ರಾಷ್ಟ್ರೀಯ ಏಕತಾ ಸ್ಥಳದಲ್ಲಿ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಸಂಸ್ಕಾರ ನೆರವೇರಿಸಿದರು.
ಗಣ್ಯಾತೀಗಣ್ಯರಿಂದ ಅಂತಿಮ ನಮನ:
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಅಮಿತ್ ಶಾ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ, ಎಚ್.ಡಿ.ದೇವೇಗೌಡ ಸೇರಿದಂತೆ ಅಫ್ಘಾನಿಸ್ತಾನ, ಶ್ರೀಲಂಕಾ, ನೇಪಾಳ, ಪಾಕಿಸ್ತಾನ, ಭೂತಾನ್, ಮಾಲ್ಡೀವ್ಸ್, ಏಳು ದೇಶಗಳ ನಿಯೋಗಿಗಳು ಅಂತಿಮ ನಮನ ಸಲ್ಲಿಸಿದ್ದರು.
ಬಳಿಕ ಭೂ, ನೌಕಾ ಹಾಗೂ ವಾಯುಪಡೆಯ ಸೇನಾಧಿಕಾರಿಗಳು ಸರ್ಕಾರಿ ಗೌರವಾರ್ಥಕವಾಗಿ ಕುಶಾಲತೋಪು ಹಾರಿಸಿದರು. ವೈದಿಕ ಸಂಪ್ರದಾಯದಂತೆ ವಿಧಿವಿಧಾನಗಳನ್ನು ನೆರವೇರಿಸಿದ ನಂತರ ದತ್ತು ಪುತ್ರಿ ನಮಿತಾ ಅವರು ಕುಟುಂಬಸ್ಥರು, ಗಣ್ಯರ ಸಮ್ಮುಖದಲ್ಲಿ ಅಟಲ್ ಅವರ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ವೇಳೆ ಮೊಮ್ಮಗಳು ನಿಹಾರಿಕಾ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.
4 ಕಿ.ಮೀ. ಮೆರವಣಿಗೆ, ಜನಸಾಗರ:
ಭಾರತ ಕಂಡ ಶ್ರೇಷ್ಠ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾರ್ಥಿವ ಶರೀರವನ್ನು ಹೂವಿನಿಂದ ಅಲಂಕೃತ ವಾಹನದ ಮೂಲಕ ಸುಮಾರು ನಾಲ್ಕು ಕಿಮೀ ದೂರದಲ್ಲಿರುವ ರಾಷ್ಟ್ರೀಯ ಏಕತಾ ಸ್ಥಳದವರೆಗೆ ಮೆರವಣಿಗೆಯಲ್ಲಿ ತರಲಾಯಿತು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ದತ್ತು ಪುತ್ರಿ ನಮಿತಾ ಭಟ್ಟಾಚಾರ್ಯ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ವಿವಿಧ ದೇಶಗಳ ಗಣ್ಯರು ನಡೆದು ಹೋಗುವ ಮೂಲಕ ಗೌರವ ಸಲ್ಲಿಸಿದ್ದರು.
ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು. ಭಾರೀ ಪ್ರಮಾಣದ ಪೊಲೀಸರು ಹಾಗು ಅರೆಸೇನಾಪಡೆಯ ಯೋಧರು ಇಡೀ ಮೆರವಣಿಗೆಯಲ್ಲಿ ಸಾರ್ವಜನಿಕರ ಜೊತೆ ಸಾಗಿದ್ದರು.