ಬೆಂಗಳೂರು:ಏಯ್ ಅಧ್ಯಕ್ ಏಯ್ ಅಧ್ಯಕ್ಷ…ಅರೇ ನಾನ್ ಮಾತನಾಡಿಸಿದ್ರೂ ಹಾಗೆ ಹೊಂಟ ಹೋಗುತ್ತಿದ್ದಾನಲ್ರೀ..ಏಯ್ ಚಮ್ಚಾ..ಹೀಗೆ ಬಹಿರಂಗವಾಗಿಯೇ ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ವೈಜನಾಥ್ ಪಾಟೀಲ್!
ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲು ಸಿದ್ಧತೆ ನಡೆಸುತ್ತಿರುವಾಗಲೇ ವೈಜನಾಥ್ ಪಾಟೀಲ್ ಅವರು ಅಲ್ಲಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ವೈಜನಾಥ ಪಾಟೀಲ್ ಅವರು ಪರಮೇಶ್ವರ್ ಅವರನ್ನು ಕರೆದರೂ ಕೂಡಾ ತಿರುಗಿ ನೋಡದೆ ಹೊರಟಿದ್ದರು.
ಪತ್ರಿಕಾಗೋಷ್ಠಿ ನಡೆಸದೇ ಹೊರಟಿದ್ದ ಪರಮೇಶ್ವರ್ ಅವರನ್ನು ವೈಜನಾಥ ಪಾಟೀಲ್ ಅವರು ಈ ರೀತಿ ಏರುಧ್ವನಿಯಲ್ಲಿ ಕೂಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿರುವ ಘಟನೆ ನಡೆದಿದೆ.
ಭರವಸೆ ಕೊಟ್ಟು ಕೈಕೊಟ್ರು:
ನನ್ನ ಮಗ ವಿಕ್ರಂ ಪಾಟೀಲ್ ಗೆ ಟಿಕೆಟ್ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಟಿಕೆಟ್ ಕೇಳಿದ್ರೆ, ಉಸ್ತುವಾರಿ ಸಚಿವರ ಪತ್ರ ತನ್ನಿ ಎಂದು ಹೇಳುತ್ತಾರೆ. ಆದರೆ ಧರಂಸಿಂಗ್, ಮಲ್ಲಿಕಾರ್ಜುನ ಖರ್ಗೆ ಮಕ್ಕಳಿಗೆ ಮಾತ್ರ ಟಿಕೆಟ್ ಕೊಡುತ್ತಾರೆ. ಅಷ್ಟೇ ಅಲ್ಲ ಪರಂ, ಸಿಎಂನಿಂದಾಗಿ ಹೈದರಾಬಾದ್ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.