Advertisement

ಕಮ್ಯುನಿಸ್ಟ್‌ ಮನೆಯಲ್ಲಿ ವೈದಿಕೋದ್ಭವ

10:51 AM Feb 24, 2022 | Team Udayavani |

ಕೋಟ: ಪ್ರಖರ ಕಮ್ಯುನಿಸ್ಟ್‌ ಚಿಂತಕ ದಿ| ಡಾ| ಗುಂಡ್ಮಿ ಭಾಸ್ಕರ ಮಯ್ಯರ ಪುತ್ರ ಪ್ರಜ್ಞಾನ ವೈಶ್ವಾನರ ಅಪ್ಪಟ ವೈದಿಕನೆಂದರೆ ಅಚ್ಚರಿಯಾಗಬಹುದು, ಆದರೆ ಸತ್ಯ.

Advertisement

ಡಾ| ಗುಂಡ್ಮಿ ಭಾಸ್ಕರ ಮಯ್ಯ ಹೆಸರನ್ನು ಕರಾವಳಿ ನಾಡಿನಲ್ಲಿ ಕೇಳದವರಿಲ್ಲ ಅಂದರೆ ಅತಿಶಯೋಕ್ತಿಯಾಗದು. ಪ್ರಖರ ವಾಗ್ಮಿ, ಚಿಂತಕ, ವಿದ್ವಾಂಸರಾಗಿದ್ದ ಡಾ| ಭಾಸ್ಕರ ಮಯ್ಯರು ಅಪ್ಪಟ ಕಮ್ಯುನಿಸ್ಟ್‌ ವಿಚಾರಧಾರೆಯವರು. ಹಾಗೆಂದು ಒನ್‌ ವೇ ಟ್ರಾಫಿಕ್‌ ಆಗಿರಲಿಲ್ಲ. ವೈದಿಕರದ್ದೇ ಇರಲಿ, ಕಮ್ಯುನಿಸ್ಟರದ್ದೇ ಇರಲಿ ಅಥವಾ ಇನ್ಯಾವುದೋ ಮತಧರ್ಮಗಳದ್ದೇ ಆಗಿರಲಿ ಎಲ್ಲಿ ತಪ್ಪು ಕಂಡಿತೋ ಅಲ್ಲಿ ಮಾತಿನ ಚಾಟಿ ಬೀಸುವುದು ಅವರ ಜಾಯಮಾನವಾಗಿತ್ತು. ಇದರಿಂದಾಗಿ ಅವರು ಎಲ್ಲ ವಿಚಾರಧಾರೆಯವರ ನಿಷ್ಠುರ ಕಟ್ಟಿಕೊಂಡಂತಿತ್ತು, ಆದರೆ ಪ್ರಖರ ವಿದ್ವತ್‌ನಿಂದಾಗಿ ಮಾನ್ಯತೆಯನ್ನೂ ಗಳಿಸಿ ಕೊಂಡಿದ್ದರು. ಅವರು ಕೊನೆಯವರೆಗೂ ಮಾರ್ಕ್ಸ್ವಾದಿ ಕಮ್ಯುನಿಸ್ಟ್‌ ಪಕ್ಷದ ಸದಸ್ಯರಾಗಿದ್ದರು. ಡಾ|ಮಯ್ಯರು ಲೌಕಿಕ ಶಿಕ್ಷಣವನ್ನು ಉಡುಪಿಯಲ್ಲಿ ಪಡೆಯುತ್ತಿರುವಾಗಲೇ ಉಡುಪಿ ಮಠದಲ್ಲಿ ವೇದವನ್ನು ಓದಿಕೊಂಡಿದ್ದರು, ಬಳಿಕ ಮಾರ್ಕ್ಸ್, ಮೆಕಾಲೆ, ಬುದ್ಧ, ಗಾಂಧಿ, ಜೆಪಿ, ಪ್ಲೇಟೋ ಹೀಗೆ ನಾನಾ ವಿಧದ ವಿಚಾರಧಾರೆಗಳನ್ನೂ ಕಲಿತರು. ಪಿಎಚ್‌ಡಿ ಜತೆ ಆರು ಎಂಎ ಪದವಿಗಳನ್ನು ಮುಡಿಗೇರಿಸಿಕೊಂಡು ಹಿಂದಿ ಪ್ರಾಧ್ಯಾಪಕರಾಗಿದ್ದ ಅವರು ಸ್ವಂತ ಪ್ರಕಾಶನದಿಂದ ಹತ್ತಾರು ಪುಸ್ತಕಗಳನ್ನು ತಾವೇ ಬರೆದು ಪ್ರಕಟಿಸಿದ್ದರು.

ಡಾ| ಭಾಸ್ಕರ ಮಯ್ಯರ ಮಗ ಕೋಟ ಪ.ಪೂ. ಕಾಲೇಜಿಗೆ ಹೋಗುವಾಗಲೇ ಸಾಲಿಗ್ರಾಮ ದೇವಸ್ಥಾನದ ಪಾಠಶಾಲೆಯಲ್ಲಿ ವೇದ, ಪೌರೋಹಿತ್ಯವನ್ನು ಓದಿದರು. ಅದೇ ವೇಳೆ ಧಾರವಾಡ ವಿ.ವಿ. ಮೂಲಕ ಬಿಎ, ಬಳಿಕ ಸಂಸ್ಕೃತದಲ್ಲಿ ಎಂಎ ಮಾಡಿದರು. ಕಟೀಲಿನ ತಂತ್ರಾಗಮದ ಎರಡು ವರ್ಷಗಳ ಕೋರ್ಸ್‌ ನಡೆಸಿದರು. ಈಗ ಪೂರ್ಣಕಾಲೀನ ಪುರೋಹಿತರು.

ತಂದೆ ಅಪ್ಪಟ ಕಮ್ಯುನಿಸ್ಟರಾದರೂ ಮಕ್ಕಳಿಗೆ ಇಂಥದ್ದನ್ನೇ ಓದಬೇಕೆಂದು ಕಟ್ಟುಪಾಡು ವಿಧಿಸಿರಲಿಲ್ಲ. “ನೀವು ಯಾವ ಕೆಲಸವನ್ನೇ ಮಾಡಿ. ಅದು ಶ್ರದ್ಧೆಯಿಂದ ಕೂಡಿರಬೇಕು, ಢೋಂಗಿ ಇಲ್ಲದೆ ನೇರವಾಗಿರಬೇಕು. ಯಾವುದನ್ನೇ ಟೀಕಿಸುವುದಾದರೂ ಓದಿ ತಿಳಿದ ಬಳಿಕ ಟೀಕಿಸಿರಿ, ಓದದೆ ಏನನ್ನೂ ಮಾತನಾಡಬೇಡಿ. ದೇವರು- ಪ್ರಕೃತಿವಾದ ಇತ್ಯಾದಿಗಳ ಕುರಿತು ನಮಗೆ ಪ್ರತ್ಯೇಕ ಅಭಿಪ್ರಾಯಗಳಿರುತ್ತವೆ. ನನ್ನ ವಾದ ನನಗೆ, ನಿನ್ನ ವಾದ ನಿನಗೆ. ನೀನು ತಿಳಿದುಕೊಂಡು ಯಾವುದೇ ನಿರ್ಧಾರಕ್ಕೆ ಬರಬಹುದು’ ಎಂದು ಮಗನಿಗೆ ಹೇಳಿದ್ದರು. ಮಗನಿಗೆ ಪಿಯುಸಿ ಕಲಿತ ಬಳಿಕ ವೇದ ಓದಬೇಕೆಂದು ಅನಿಸಿತು, ಓದಿ ಅದೇ ಕ್ಷೇತ್ರದಲ್ಲಿ ಮುಂದುವರಿದರು.

ಇದನ್ನೂ ಓದಿ : ಯುದ್ಧ ಘೋಷಣೆ ಬೆನ್ನಲ್ಲೇ ಕೈವ್ ನಗರದಲ್ಲಿ ಸ್ಫೋಟ; ಯುದ್ದ ತಡೆಯಿರಿ ಎಂದು ಉಕ್ರೇನ್ ಮನವಿ

Advertisement

“ಜೀವನದಲ್ಲಿ ಪ್ರಾಮಾಣಿಕವಾಗಿ ಬದುಕಿ. ವೃತ್ತಿ ಯಾವುದಾ ದರೇನು ಎಂದು ತಂದೆಯವರು ನಮಗೆ ಕಲಿಸಿಕೊಟ್ಟಿದ್ದರು. ವೃತ್ತಿ ಆಯ್ಕೆಯಲ್ಲಿ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರು. ನಾನು ಪೌರೋಹಿತ್ಯ ವೃತ್ತಿ ಆರಂಭಿಸಿದ ಬಳಿಕ ನಿತ್ಯ ಎಲ್ಲೆಲ್ಲಿ ಏನೇನು ಆಯಿತು ಎಂದು ಕೇಳಿ ಸೂಕ್ತ ತಿಳಿವಳಿಕೆ ನೀಡುತ್ತಿದ್ದರು. ಅವರ ಮಾರ್ಗದರ್ಶನದಂತೆ ಮುಂದುವರಿಯುತ್ತಿದ್ದೇನೆ’ ಎನ್ನುತ್ತಾರೆ ಪ್ರಜ್ಞಾನ ವೈಶ್ವಾನರ.

ವೇದೋಪನಿಷತ್ಕಾಲದ ಹೆಸರು
ಕಮ್ಯುನಿಸ್ಟ್‌ ಸಿದ್ಧಾಂತಿ ಡಾ|ಭಾಸ್ಕರ ಮಯ್ಯರ ಹೆಸರಿನ ಜತೆ “ಮಯ್ಯ’ ಎಂಬ ಅಡ್ಡ ಹೆಸರು/ಕುಲನಾಮ ಇದ್ದರೆ, ವೈದಿಕ ವೃತ್ತಿ ನಡೆಸುವ ಪುತ್ರನ ಹೆಸರಿನಲ್ಲಿ ಈ ಶಬ್ದ ಇಲ್ಲ. ಆದರೆ ಮಗನ ಹೆಸರು ಮಾತ್ರ ವೇದ, ಉಪನಿಷತ್‌ ಕಾಲದಲ್ಲಿ ಪ್ರಚಲಿತದಲ್ಲಿದ್ದ ಹೆಸರು. ಪ್ರಜ್ಞಾನ ವೈಶ್ವಾನರ ಶಬ್ದ ವೇದ, ಭಗವದ್ಗೀತೆಗಳಲ್ಲಿ ಕಂಡುಬರುತ್ತದೆ. ವೈಶ್ವಾನರ ಅಗ್ನಿ ಎಂಬ ಉಲ್ಲೇಖವೂ ಉಪನಿಷತ್ತುಗಳಲ್ಲಿದೆ. ಮಗನಿಗೆ ಹೆಸರು ಇಡುವಾಗಲೇ ಸಂಸ್ಕೃತಿಯ ಬೇರಿನ ವರೆಗೆ ತಂದೆ ಚಿಂತನೆ ನಡೆಸಿದ್ದಾರೆಂಬುದು ಸಾಬೀತಾಗುತ್ತದೆ. ಗರ್ಭಾದಾನ, ಪುಂಸವನ, ಅನ್ನಪ್ರಾಶನ, ನಾಮಕರಣ, ಉಪನಯನ, ವಿವಾಹವೇ ಮೊದಲಾದ ಷೋಡಶ ಕರ್ಮಗಳನ್ನು ತಂದೆ ಮಾಡಿಸಿದ್ದರು.

– ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next