Advertisement
“ತಾರಕಾಸುರ ಚಿತ್ರಕ್ಕೆ ಸುಮಾರು ಎರಡು ವರ್ಷಗಳ ಸುದೀರ್ಘ ಸಮಯವನ್ನು ತೆಗೆದುಕೊಂಡಿದ್ದೆವು. ಚಿತ್ರರಂಗದಲ್ಲಿ ಅನೇಕರು ಇಷ್ಟೊಂದು ಸಮಯವನ್ನು ಯಾಕೆ ತೆಗೆದುಕೊಂಡಿದ್ದು? ಎಂದು ಕೇಳುತ್ತಿದ್ದರು. ಅವರ ಎಲ್ಲಾ ಪ್ರಶ್ನೆಗಳಿಗೆ ಚಿತ್ರದ ಟ್ರೇಲರ್ ಉತ್ತರ ನೀಡಿದೆ. ಉಳಿದ ಪ್ರಶ್ನೆಗಳಿಗೆ ಚಿತ್ರ ತೆರೆಗೆ ಬಂದ ನಂತರ ಉತ್ತರ ಸಿಗುತ್ತದೆ’ ಎನ್ನುವುದು ಚಿತ್ರದ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಅವರ ಮಾತು.
Related Articles
Advertisement
ಈ ವರ್ಷದ ಹಿಟ್ ಹಾಡುಗಳ ಪಟ್ಟಿಯಲ್ಲಿ ನಮ್ಮ ಚಿತ್ರದ ಹಾಡುಗಳೂ ಸ್ಥಾನ ಪಡೆದುಕೊಂಡಿವೆ. ಹೆಸರೇ ಹೇಳುವಂತೆ “ತಾರಕಾಸುರ’ ಒಂದು ಆ್ಯಕ್ಷನ್ ಸಿನಿಮಾ. ಆದರೆ ಕನ್ನಡದ ಆ್ಯಕ್ಷನ್ ಸಿನಿಮಾಗಳಲ್ಲಿ ಪ್ರೇಕ್ಷಕರು ನೋಡಲಾಗದ ಹತ್ತಾರು ಸಂಗತಿಗಳು ಈ ಚಿತ್ರದಲ್ಲಿರುತ್ತವೆ. ಒಳ್ಳೆಯ ಕಥೆ, ಹಾಡುಗಳು, ಮನರಂಜನೆಯ ಅಂಶಗಳ ಜೊತೆಗೆ ಗಂಭೀರವಾದ ವಿಷಯವೊಂದನ್ನು ಚಿತ್ರ ಚರ್ಚಿಸಲಿದೆ ಎನ್ನುತ್ತದೆ ಚಿತ್ರತಂಡ.
ಕಳೆದ ಮೂರುವರೆ ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಪ್ರದರ್ಶಕರಾಗಿ, ವಿತರಕರಾಗಿ ಸಕ್ರಿಯವಾಗಿರುವ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಯಾಗಿದ್ದ ಎಂ. ನರಸಿಂಹಲು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. “ತಾರಕಾಸುರ’ ಚಿತ್ರದ ಬಿಡುಗಡೆಯ ಹೊಣೆಯನ್ನು ವಿತರಕ ಜಾಕ್ ಮಂಜು ವಹಿಸಿಕೊಂಡಿದ್ದು, ಚಿತ್ರವನ್ನು ಇದೇ ತಿಂಗಳಾಂತ್ಯಕ್ಕೆ ರಾಜ್ಯದಾದ್ಯಂತ ಸುಮಾರು ನೂರೈವತ್ತಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದ್ದಾರೆ.
ಇನ್ನು, “ತಾರಕಾಸುರ’ ಚಿತ್ರದ ಕಥಾ ಹಂದರ ಕೂಡ, ಹೊಸ ಮುಖದ ನಾಯಕನನ್ನು ಬಯಸುತ್ತಿದ್ದು, ಅದೇ ಹುಡುಕಾಟದಲ್ಲಿದ್ದ ಚಂದ್ರಶೇಖರ್ ಬಂಡಿಯಪ್ಪ ಅವರ ಕಣ್ಣಿಗೆ ಬಿದ್ದಿದ್ದು ನಿರ್ಮಾಪಕ ನರಸಿಂಹಲು ಅವರ ಪುತ್ರ ವೈಭವ್. ಆಗಷ್ಟೆ ವೈಭವ್ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿ, ನಟನಾಗುವ ಸಲುವಾಗಿ ಒಂದಷ್ಟು ತಯಾರಿ, ಕಸರತ್ತನ್ನು ಆರಂಭಿಸಿದ್ದರು. ಚಿತ್ರದ ಕಥೆಗೂ ಹೊಂದಾಣಿಕೆಯಾಗುತ್ತಿದ್ದರಿಂದ, “ಈ ಚಿತ್ರದಲ್ಲಿ ವೈಭವ್‌ನನ್ನೆ ನಾಯಕ ನಟನನ್ನಾಗಿ ಮಾಡಿದರೆ ಹೇಗೆ?’ ಎಂಬ ಪ್ರಸ್ತಾಪವನ್ನು ನಿರ್ಮಾಪಕರ ಮುಂದಿಟ್ಟರು ನಿರ್ದೇಶಕರು.
“ನಿರ್ಮಾಪಕರ ಮಗ ಎಂಬ ಮುಲಾಜಿಗೆ ಮಣಿದು ವೈಭವ್‌ನನ್ನು ಈ ಸಿನಿಮಾಕ್ಕೆ ಹೀರೋ ಆಗಿ ಹಾಕಿಕೊಳ್ಳುವುದು ಬೇಡ. ನಿಜಕ್ಕೂ ನಿಮ್ಮ ಕಥೆಗೆ ವೈಭವ್ ಹೊಂದಿಕೆಯಾಗುತ್ತಾನೆ ಎಂಬುದಿದ್ದರೆ ಮಾತ್ರ ಅವನನ್ನು ಹಾಕಿಕೊಳ್ಳಿ. ಇಲ್ಲದಿದ್ದರೆ ಈ ಕಥೆಗೆ ಹೊಂದಾಣಿಕೆಯಾಗುವ ಬೇರೆ ಯಾವುದಾದರೂ ನಾಯಕ ನಟನ್ನು ನೋಡಿ’ ಎಂಬ ಉತ್ತರ ನಿರ್ಮಾಪಕ ನರಸಿಂಹಲು ಅವರಿಂದ ಬಂತು. ಕೊನೆಗೆ ಇಡೀ ತಂಡ ಕೂತು ಚರ್ಚಿಸಿ ವೈಭವ್ ಅವರನ್ನೆ ಸಿನಿಮಾದ ನಾಯಕ ನಟನಾಗಿ ಆಯ್ಕೆ ಮಾಡಿದ್ದಾರೆ. ಅದರಂತೆ ವೈಭವ್ ಕೂಡಾ ಪಾತ್ರಕ್ಕೆ ಬೇಕಾದ ಪೂರ್ವ ತಯಾರಿ ನಡೆಸಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಗಟ್ಟಿ ಕಥಾಹಂದರ: ಚಿತ್ರವನ್ನು ಹಿರಿಯ ನಿರ್ಮಾಪಕ, ಪ್ರದರ್ಶಕ ನರಸಿಂಹಲು ನಿರ್ಮಿಸಿದ್ದಾರೆ. ಈಗಾಗಲೇ ಸಿನಿಮಾ ನೋಡಿರುವ ಅವರಿಗೆ ಸಿನಿಮಾ ಬಗ್ಗೆ ವಿಶ್ವಾಸವಿದೆ. ಸುಮಾರು 150ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಸಿನಿಮಾ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ. “ಸಿನಿಮಾ ನೋಡಿದ್ದೇನೆ. ತುಂಬಾ ಚೆನ್ನಾಗಿ ಬಂದಿದೆ. ಮುಖ್ಯವಾಗಿ ಈ ಚಿತ್ರದ ಕಥಾವಸ್ತು ಭಿನ್ನವಾಗಿದೆ. ಚಿತ್ರದ ಕಥಾವಸ್ತು ಗಟ್ಟಿಯಾಗಿದ್ದರೆ ಜನ ಸಿನಿಮಾವನ್ನು ಇಷ್ಟಪಡುತ್ತಾರೆಂಬುದನ್ನು ಇಷ್ಟು ವರ್ಷದ ಅನುಭವದಲ್ಲಿ ಕಂಡುಕೊಂಡಿದ್ದೇನೆ. “ತಾರಕಾಸುರ’ದಲ್ಲಿ ಆ ಗುಣ ಇದೆ. ಅಂತಿಮವಾಗಿ ಪ್ರೇಕ್ಷಕರು ಏನು ಹೇಳುತ್ತಾರೆ ಅನ್ನೋದಷ್ಟೇ ಮುಖ್ಯವಾಗುತ್ತದೆ’ ಎನ್ನುವುದು ಅವರ ಮಾತು.