Advertisement
ನಡೆಸಿಕೊಟ್ಟವರು, ಕಾರ್ಕಳದ ಅನಸೂಯಾ ದೇವಸ್ಥಳಿ ಅವರು. ಇವರು ಹಾಡಿದ ರಚನೆಗಳು – ನಮ್ಮಮ್ಮ ಶಾರದೆ (ಹಂಸಧ್ವನಿ), ನೆನೆಯಬಾರದೆ ಮನವೆ (ವಾಸಂತಿ), ನೇಮವಿಲ್ಲದ ಹೋಮ (ಮುಖಾರಿ), ನಾನು ನೀನು ಎನ್ನದಿರು (ಹಿಂದೋಳ), ಸತ್ಯವಂತರ ಸಂಗವಿರಲು (ಮಿಶ್ರ), ಪಾಲುಗಡಲೊಡೆಯ ಬಾರೋ ( ಷಣ್ಮುಖಪ್ರಿಯ), ಆರು ಬದುಕಿದರೇನು (ಸಿಂಧು ಭೈರವಿ – ಸ್ವಂತ ಸಂಯೋಜನೆ) ಇತ್ಯಾದಿ. ಹಾಡಿದ ಎಲ್ಲಾ ಕೀರ್ತನೆಗಳೂ ವಾದಿರಾಜರು ಅಥವಾ ಕನಕದಾಸರದೇ ಆಗಿದ್ದುದು ಮತ್ತು ಎಲ್ಲಾ ಪದಗಳಿಗೂ ಚುಟುಕಾದ ಆಲಾಪನೆ ಹಾಗು ಸ್ವರ ಪ್ರಸ್ತಾರವನ್ನು ಮಾಡಿದುದು ಒಂದು ವಿಶೇಷ. ಕಲಾವಿದೆ ವಿಸ್ತಾರಕ್ಕಾಗಿ ಹಿಂದೋಳ ಹಾಗೂ ಷಣ್ಮುಖಪ್ರಿಯ ರಾಗಗಳನ್ನು ಆರಿಸಿಕೊಂಡರು. ನವಿರಾದ ಹಿಂದೋಳ ರಾಗದ ಆಲಾಪನೆ, “ನಾನು ನೀನು ಎನ್ನದಿರು’ ಎನ್ನುವ ಪಲ್ಲವಿಗೆ ರಾಗವನ್ನು ಬಿಂಬಿಸುವ ಸ್ವರ ಪ್ರಸ್ತಾರದೊಂದಿಗೆ ಈ ರಚನೆಯು ಬಹು ಆಪ್ಯಾಯಮಾನವಾಗಿ ಮೂಡಿ ಬಂತು. ಪ್ರಧಾನ ರಾಗವಾಗಿ ತೆಗೆದುಕೊಂಡದ್ದು ರಾಗ ಷಣ್ಮುಖಪ್ರಿಯ. ದಿ.ಸುರಾಲು ಪರಮೇಶ್ವರ ಭಟ್ಟರು ರಾಗ ಸಂಯೋಜನೆ ಮಾಡಿರುವ “ಪಾಲುಗಡಲೊಡೆಯ ಬಾರೋ’ ಈ ವಾದಿರಾಜರ ಕೃತಿಗೆ ವಿದ್ವತೂ³ರ್ಣವಾದ ಆಲಾಪನೆ, ಖಂಡಛಾಪು ತಾಳದ ಎರಡನೇ ಪೆಟ್ಟಿನಲ್ಲಿ ಶುರುವಾಗುವ “ಎನ್ನ ಮೇಲೆ ಕರುಣಾಮೃತದ ರಸಮಳೆಯ ಸುರಿಸುತಲಿ’ ಎನ್ನುವ ಅರ್ಥವತ್ತಾದ ಸಾಲುಗಳಿಗೆ ನೆರವಲ್ ಮತ್ತು ಕಲ್ಪನಾ ಸ್ವರಗಳ ಪೋಷಣೆಯನ್ನು ಒದಗಿಸಿದರು. ಇವರಿಗೆ ವಯೊಲಿನ್‌ನಲ್ಲಿ ವೇಣುಗಾಪಾಲ್ ಶ್ಯಾನುಭೋಗ್ ಹಾಗೂ ಮೃದಂಗದಲ್ಲಿ ಬಾಲಚಂದ್ರ ಭಾಗವತ್ ಸಹಕಾರ ನೀಡಿದರು.
Advertisement
ವಾದಿರಾಜ –ಕನಕದಾಸ ಸಂಗೀತೋತ್ಸವ
01:15 AM Jan 17, 2020 | mahesh |