ವಾಡಿ: ಸಿಮೆಂಟ್ ಕಾರ್ಖಾನೆಗಳ ನಿವೃತ್ತ ಕಾರ್ಮಿಕರ ಪಿಂಚಣಿ ವೇತನವನ್ನು 2000ರೂ. ದಿಂದ ಕನಿಷ್ಠ 10,000ರೂ.ಗೆ ಹೆಚ್ಚಿಸಬೇಕು. ಈ ಕುರಿತು ಸಿಮೆಂಟ್ ಕಾರ್ಖಾನೆಗಳ ಮಾಲೀಕರ ರಾಷ್ಟ್ರೀಯ ಒಕ್ಕೂಟ ತೀರ್ಮಾನ ಕೈಗೊಂಡು, ಶ್ರಮಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಮಾಜಿ ಶಾಸಕ ವಾಲ್ಮೀಕಿ ನಾಯಕ ಒತ್ತಾಯಿಸಿದರು.
ಪಟ್ಟಣದಲ್ಲಿ ಎಸಿಸಿ ಸಿಮೆಂಟ್ ಕಾರ್ಖಾನೆ ಕಾರ್ಮಿಕ ಸಂಘ ಎಐಟಿಯುಸಿ ವತಿಯಿಂದ ಏರ್ಪಡಿಸಲಾಗಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಕಾರ್ಖಾನೆಗಳ ಉತ್ಪನ್ನ ಹೆಚ್ಚಳಕ್ಕೆ ಕಾರ್ಮಿಕರು ರಕ್ತಕ್ಕೆ ಸಮನಾದ ಬೆವರು ಸುರಿಸುತ್ತಾರೆ. ಉದ್ಯಮಿಪತಿಗಳ ಬಂಡವಾಳ ವಿಶ್ವಮಟ್ಟದಲ್ಲಿ ಬೆಳೆಯಲು ಶೋಷಣೆಗೊಳಗಾದ ಇದೇ ಕಾರ್ಮಿಕರೇ ಕಾರಣವಾಗಿದ್ದಾರೆ. ಸಿಮೆಂಟ್ ಧೂಳು ತಿಂದು ಕಂಪನಿ ಕಟ್ಟಿದ್ದಾರೆ. ನಿವೃತ್ತಿಯ ಕೊನೆ ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಕುಟುಂಬದಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ. ಸದ್ಯ ಎಸಿಸಿ ನೀಡುತ್ತಿರುವ 2000ರೂ. ಪಿಂಚಣಿ ವೇತನ ಯಾತಕ್ಕೂ ಸಾಲದು. ನಿವೃತ್ತ ಕಾರ್ಮಿಕರ ಗೌರವಯುತ ಬದುಕಿಗಾಗಿ ಪಿಂಚಣಿ ವೇತನ ಹೆಚ್ಚಿಸುವುದು ಅತ್ಯಗತ್ಯವಾಗಿದೆ. ಈ ಕುರಿತು ಕಾರ್ಮಿಕರು ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಹಿರಿಯ ಕಾರ್ಮಿಕ ಮುಖಂಡ, ಎಐಟಿಯುಸಿ ಸಲಹೆಗಾರರಾದ ಕಾಮ್ರೇಡ್ ಗೋಪಾಲರಾವ ಗುಡಿ ಮಾತನಾಡಿ, ಕಾರ್ಮಿಕರು ಮತ್ತು ಕಂಪನಿ ಮಾಲೀಕರ ಸಹಭಾಗಿತ್ವದಲ್ಲಿ ಉತ್ಪನ್ನ ವೃದ್ಧಿಯಾಗುತ್ತದೆ. ಕಾರ್ಮಿಕರಿಗೆ ಕಾನೂನುಬದ್ಧ ಸೌಲಭ್ಯ ಒದಗಿಸುವ ಜತೆಗೆ ಗೌರವಯುತವಾಗಿ ದುಡಿಸಿಕೊಳ್ಳಬೇಕು. ಸಮಸ್ಯೆಗಳು ಸೃಷ್ಟಿಯಾದರೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಕಾರ್ಖಾನೆ ಚಾಲನೆಯಲ್ಲಿದ್ದರೆ ಮಾತ್ರ ಕಾರ್ಮಿಕರು ಬದುಕುತ್ತಾರೆ ಎಂದರು.
ನಿವೃತ್ತ ಎಸಿಸಿ ಹಿರಿಯ ಕಾರ್ಮಿಕ ಸಿದ್ಧಣ್ಣ ಕಲಶೆಟ್ಟಿ, ಎಸಿಸಿ ಕ್ಲಸ್ಟರ್ ಮುಖ್ಯಸ್ಥ ಡಾ| ಎಸ್.ಬಿ. ಸಿಂಗ್, ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಶಾಮಸನ್, ಉಪಾಧ್ಯಕ್ಷ ಪಿ. ಕ್ರಿಸ್ಟೋಪರ್, ಎಚ್ಆರ್ ವಿಭಾಗದ ಮುಖ್ಯಸ್ಥ ಪುಷ್ಕರ್ ಚೌಧರಿ, ಅರುಣಕುಮಾರ, ಎಐಟಿಯುಸಿ ಕಾರ್ಮಿಕ ಸಂಘದ ಮುಖಂಡರಾದ ರಮೇಶ ಕಾರಬಾರಿ, ವಿಶಾಲ ನಂದೂರಕರ, ತುಕಾರಾಮ ರಾಠೊಡ, ವಿರೂಪಾಕ್ಷಿ ಪ್ಯಾಟಿ, ಮಹ್ಮದ್ ಫೈಯಾಜ್, ಶಿವುಕುಮಾರ ಕಾಳಗಿ ಹಾಗೂ ಕಾರ್ಮಿಕರು ಪಾಲ್ಗೊಂಡಿದ್ದರು.
ಕಾರ್ಮಿಕ ಮುಖಂಡ ಪ್ರೇಮನಾಥ ದಿವಾಕರ ನಿರೂಪಿಸಿ, ವಂದಿಸಿದರು. ಬೆಳಗ್ಗೆ ಎಐಟಿಯುಸಿ ಕಚೇರಿ ಆವರಣದಲ್ಲಿ ಕೆಂಪು ಧ್ವಜಾರೋಹಣ ನೆರವೇರಿಸಲಾಯಿತು. ಇದೇ ವೇಳೆ ಹೋರಾಟಗಾರ ದಿ.ಕಾಮ್ರೇಡ್ ಶ್ರೀನಿವಾಸ ಗುಡಿ ಮೂರ್ತಿಗೆ ಪುಷ್ಪಮಾಲೆ ಅರ್ಪಿಸಲಾಯಿತು.