ವಾಡಿ: ಒಂಭತ್ತು ವರ್ಷದ ವಿದ್ಯಾರ್ಥಿಯೊಬ್ಬ ವಿದ್ಯುತ್ ತಂತಿ ತುಲಿ ಮೃತಪಟ್ಟ ಘಟನೆ ರವಿವಾರ ರಾವೂರ ಗ್ರಾಮದಲ್ಲಿ ಸಂಭವಿಸಿದೆ.
ರಾವೂರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮಹ್ಮದ್ ಕೈಫ್ ಮಹೆಬೂಬ್ ಮೌಜನ್ (9) ಮೃತಪಟ್ಟ ಬಾಲಕ.
ರವಿವಾರ ಬೆಳಗ್ಗೆ ಈ ಬಾಲಕ ಶಾಲಾ ಅಂಗಳದಲ್ಲಿ ಗೆಳೆಯರೊಂದಿಗೆ ಕ್ರಿಕೆಟ್ ಆಟದಲ್ಲಿ ತೊಡಗಿದ್ದ. ಈ ವೇಳೆ ಶಾಲಾ ಕಟ್ಟಡದ ಮೇಲೆ ಚೆಂಡು ಬಿದ್ದಿತ್ತು. ಚೆಂಡು ತರಲು ಕಟ್ಟಡದ ಮಾಳಿಗೆ ಹತ್ತಿದ ಬಾಲಕ ಮಹ್ಮದ್ ಕೈಫ್‌ಗೆ ಶಾಲೆ ಮೇಲಿಂದ ಹಾಯ್ದು ಹೋದ ಹೈವೋಲ್r ವಿದ್ಯುತ್ ತಂತಿ ತಗುಲಿದೆ. ಪರಿಣಾಮ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪೊಷಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪೋಷಕರ ಆಕ್ರಂದನ: ಹೆತ್ತ ಕರುಳಿನ ಕುಡಿ ಸತ್ತು ಹೆಣವಾಗಿ ಬಿದ್ದಿದ್ದನ್ನು ಕಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮದ ಹಿರಿಯ ಮುಖಂಡರಾದ ಶ್ರೀನಿವಾಸ ಸಗರ, ಗ್ರಾಪಂ ಸದಸ್ಯ ಯುನ್ಯೂಸ್ ಪ್ಯಾರೆ, ಮಶಾಕ್ ಸೇಠ, ಶರಣು ಜ್ಯೋತಿ, ಮಹೆಬೂಬ ಧರಿ, ಫೆರೋಜ್ ಮೌಜನ, ಅಮೀರ ಮೂಸಾವಾಲೆ ಕುಟುಂಬದವರನ್ನು ಸಮಾಧಾನ ಪಡಿಸಿದರು.
ಐದು ಲಕ್ಷ ರೂ. ಪರಿಹಾರ ಭರವಸೆ: ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ, ಶವ ಪರೀಕ್ಷೆಯ ವರದಿ ಬಂದ ತಕ್ಷಣವೇ ಮೃತ ಬಾಲಕನ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ. ಈ ಕುರಿತು ದೂರವಾಣಿ ಮೂಲಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಘಟನೆಗೆ ಕಳವಳ ವ್ಯಕ್ತಪಡಿಸಿದ್ದಾರೆ. ಜೆಸ್ಕಾಂ ಎಂಡಿ ಅವರೊಂದಿಗೆ ಮಾತನಾಡಿ ಪರಿಹಾರ ಚೆಕ್ ವಿತರಿಸುವಂತೆ ಆದೇಶಿಸಿದ್ದೇನೆ. ತನಿಖೆ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.