ವಾಡಿ: ಅತ್ತ ಉರಿ ಬಿಸಿಲಿನ ತಾಪ. ಇತ್ತ ಕೊಡ ನೀರಿಗಾಗಿ ಪರದಾಡುವ ತಾಪತ್ರಯ. ಅಡವಿ, ಅರಣ್ಯ ತಿರುಗಿ ನೀರು ಪತ್ತೆ ಮಾಡುತ್ತಿರುವ ವಿವಿಧ ಗ್ರಾಮಗಳ ಜನರು, ಜಲದಾಹ ನೀಗದೆ ಸಂಕಟ ಅನುಭವಿಸುತ್ತಿದ್ದಾರೆ.
ಪಟ್ಟಣ ಸಮೀಪದ ಹಳಕರ್ಟಿ ಗ್ರಾಪಂ ವ್ಯಾಪ್ತಿಯ ಬಳವಡಗಿ ಗ್ರಾಮದಲ್ಲಿ ಕುಡಿಯುವ ನೀರಿನ ಹಾಹಾಕಾರ ಭುಗಿಲೆದ್ದು ಎರಡು ತಿಂಗಳು ಕಳೆದಿದೆ. ಜಿಲ್ಲಾಡಳಿತ ನೀಡಿದ ಟ್ಯಾಂಕರ್ ನೀರಿನ ಭರವಸೆ ಹುಸಿಯಾಗಿದೆ. ಜನರ ನೆರವಿಗೆ ನಿಲ್ಲಬೇಕಿದ್ದ ಗ್ರಾಪಂ ಆಡಳಿತ ಚುನಾವಣೆಯಲ್ಲಿ ಕಾಲಹರಣ ಮಾಡಿದೆ. ಅಧಿಕಾರಿಗಳು ಜನರ ಗೋಳು ಕೇಳಲು ಮುಂದಾಗಿಲ್ಲ. ಗ್ರಾಮದಿಂದ 2 ಕಿಮೀ ದೂರದಲ್ಲಿ ಪಾಳುಬಿದ್ದ ಕಲ್ಲು ಗಣಿಗಳಲ್ಲಿ ಖಾಲಿ ಕೊಡಗಳೊಂದಿಗೆ ಅಲೆದು ನೀರಿನ ಹೊಂಡಗಳನ್ನು ಪತ್ತೆ ಮಾಡುತ್ತಿರುವ ಮಹಿಳೆಯರು, ಚೀಪುಗಲ್ಲುಗಳ ಮಧ್ಯೆ ಸಂಗ್ರಹವಾಗಿದ್ದ ಪಾಚಿ ನೀರು ಹೊತ್ತು ತರುತ್ತಿದ್ದಾರೆ.
ಗ್ರಾಮದಲ್ಲಿ ಹಳೆಯ ಬಾವಿಗಳಿದ್ದು ಅಂತರ್ಜಲ ಬತ್ತಿದೆ. ಗ್ರಾಪಂ ನೀಡಿರುವ ನಳಗಳ ಸೌಲಭ್ಯದಲ್ಲಿ ಹನಿ ನೀರೂ ಜಿನುಗುತ್ತಿಲ್ಲ. ಟ್ಯಾಂಕರ್ ನೀರಿನ ಬೇಡಿಕೆಯಿಟ್ಟರೂ ಗ್ರಾಪಂ ಆಡಳಿತ ಕ್ಯಾರೆ ಎಂದಿಲ್ಲ. ಇಡೀ ದಿನ ಕಲ್ಲು ಗಣಿಗಳಲ್ಲಿ ಕೂಲಿ ಮಾಡಿ ಬದುಕು ನಡೆಸುತ್ತಿರುವ ಬಡ ಕುಟುಂಬಗಳು, ಬೆಳಗ್ಗೆ 6ರಿಂದ 8ರವರೆಗೆ ಹಾಗೂ ಸಂಜೆ 4ರಿಂದ 7ರವರೆಗೆ ಗಣಿಗಳನ್ನು ತಿರುಗಿ ನೀರು ಹುಡುಕುತ್ತಿದ್ದಾರೆ. ಕಲ್ಲಿನ ಗುಂಡಿಗಳಲ್ಲಿ ನಿಂತ ನೀರನ್ನು ಲೋಟಗಳಿಂದ ಕೊಡಗಳಿಗೆ ತುಂಬಬೇಕಾದ ದುಸ್ಥಿತಿ ಎದುರಾಗಿದೆ. ಮಕ್ಕಳು, ಮಹಿಳೆಯರು, ವಯಸ್ಕರು ಕೊಡಗಳನ್ನು ಹಿಡಿದು ದೂರದ ಗಣಿಗಳತ್ತ ನಡೆದರೆ, ಯುವಕರು ಬೈಕ್‌ಗಳ ಮೇಲೆ ನೀರು ಸಾಗಿಸುತ್ತಿದ್ದಾರೆ. ಪ್ರತಿ ವರ್ಷ ಬೇಸಿಗೆಯಲ್ಲಿ ಬಳವಡಗಿ ಗ್ರಾಮ ನೀರಿಗಾಗಿ ತತ್ತರಿಸುತ್ತದೆ. ಆದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ನಮ್ಮೂರಿಗೆ ಕುಡಿಯುವ ನೀರಿನ ಶಾಶ್ವತ ಪರಿಹಾರ ಒದಗಿಸಲು ಯಾರೂ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬಳವಡಗಿ ಗ್ರಾಮದ ಸುತ್ತಲೂ ಕಲ್ಲು ಗಣಿಗಳಿವೆ. ಗ್ರಾಮದಲ್ಲಿ ನೀರಿನ ಸೌಲಭ್ಯವಿಲ್ಲದ ಕಾರಣ ಗಣಿಗಳಲ್ಲಿ ನಿಂತ ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ನಮ್ಮೂರಿನ ಪರಸ್ಥಿತಿ ನೋಡಿದರೆ ಜಿಲ್ಲಾಧಿಕಾರಿಗಳೇ ದಂಗಾಗುತ್ತಾರೆ.
•
ಶಿವಪ್ಪ ಕೊದ್ದಡಗಿ,
ಗ್ರಾಮ ನಿವಾಸಿ