Advertisement

ರಸ್ತೆ ಕಾಮಗಾರಿ ಮುಗಿಯುತ್ತಿಲ್ಲ,ಬಸ್‌ ಬರುತ್ತಿಲ್ಲ

01:04 PM Jun 24, 2019 | Naveen |

ವಾಡಿ: ವಿಪರೀತ ಹದಗೆಟ್ಟಿದ್ದ ವಾಡಿ-ರಾವೂರ ರಸ್ತೆ ಅಭಿವೃದ್ಧಿಗೆ ಕ್ಷೇತ್ರದ ಶಾಸಕ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಚಾಲನೆ ನೀಡಿ ನಾಲ್ಕು ತಿಂಗಳು ಗತಿಸಿದ್ದು, ಪಿಡಬ್ಲ್ಯುಡಿ ಇಲಾಖೆಗೆ ನಾಲ್ಕು ಕಿ.ಮೀ ರಸ್ತೆ ನಿರ್ಮಿಸಲು ಸಾಧ್ಯವಾಗದೆ ವಾಹನ ಸವಾರರ ಏಳು ಬೀಳಿಗೆ ಕಾರಣವಾದಂತಾಗಿದೆ.

Advertisement

ಒಟ್ಟು 5.60 ಕೋಟಿ ರೂ. ಅನುದಾನದಡಿ ವಾಡಿ-ರಾವೂರ ಮಧ್ಯದ 4 ಕಿ.ಮೀ. ರಸ್ತೆಯನ್ನು ಸಿಸಿ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಕಾಮಗಾರಿ ಗರಬಡಿದಂತೆ ಸಾಗಿದೆ. ಈ ಭಾಗದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಪ್ರಯಾಣಿಕರ ಗೋಳಾಟಕ್ಕೆ ಕಾರಣವಾಗಿದೆ. ರಾಜ್ಯದ ಮೂಲೆ ಮೂಲೆಯಿಂದ ಎಸಿಸಿ ಸಿಮೆಂಟ್ ಕಾರ್ಖಾನೆಗೆ ಬರುವ ಲಾರಿಗಳು ಮತ್ತು ಎನ್‌ಇಕೆಆರ್‌ಟಿಸಿಗೆ ಸೇರಿದ ಯಾದಗಿರಿ-ವಾಡಿ-ಕಲಬುರಗಿ ಬಸ್‌ ಸಂಚಾರದ ಮಾರ್ಗ ಬದಲಿಸಲಾಗಿದ್ದು, ನಾಲ್ಕು ತಿಂಗಳಿಂದ ಎಲ್ಲಾ ಬಸ್‌ಗಳು ಪಟ್ಟಣದ ಹೊರ ವಲಯದ ಬಳಿರಾಮ ಚೌಕ್‌ ಮಾರ್ಗವಾಗಿ ಚಿತ್ತಾಪುರ ರಸ್ತೆ ಮೂಲಕ ರಾವೂರ ವಯ ಕಲಬುರಗಿ ತಲುಪುತ್ತಿವೆ. ಸ್ಥಳೀಯರು ಸೇರಿದಂತೆ ಇಂಗಳಗಿ, ಚಾಮನೂರ, ಕುಂದನೂರ, ಬಳವಡಗಿ, ಕೊಂಚೂರು ಗ್ರಾಮಸ್ಥರು ಕಲಬುರಗಿ ಬಸ್‌ ಹತ್ತಲು 3 ಕಿ.ಮೀ ದೂರ ಕ್ರಮಿಸಬೇಕಾದ ದುಸ್ಥಿತಿ ಎದುರಾಗಿದ್ದು, ರಸ್ತೆ ಕಾಮಗಾರಿ ವಿಳಂಬಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಪಟ್ಟಣದ ಬಸವೇಶ್ವರ ವೃತ್ತದಿಂದ ಶುರುವಾಗಬೇಕಿದ್ದ ರಸ್ತೆ ನಿರ್ಮಾಣ ಕಾರ್ಯ ಎಸಿಸಿ ನ್ಯೂ ಪ್ಲಾಂಟ್ ಘಟಕದಿಂದ ಶುರುವಾಗಿದೆ. ಲಕ್ಷ್ಮೀಪುರವಾಡಿ ಹಾಗೂ ರಾವೂರಿನಲ್ಲಿ ಒಂದು ಭಾಗ ಮಾತ್ರ ಸಿಸಿ ರಸ್ತೆ ನಿರ್ಮಿಸಲಾಗಿದ್ದು, ಉಳಿದ ಭಾಗ ಸ್ಥಗಿತಗೊಂಡಿದೆ. ಆಗೊಮ್ಮೆ ಈಗೊಮ್ಮೆ ರಸ್ತೆಯಲ್ಲಿ ಕಾಣುವ ಕಾಂಕ್ರಿಟ್ ಯಂತ್ರಗಳು, ಮರುದಿನ ನಾಪತ್ತೆಯಾಗಿರುತ್ತವೆ. ಅರ್ಧಂಬರ್ಧ ನಿಧಾನಗತಿ ಕಾಮಗಾರಿಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಬೈಕ್‌ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ರಸ್ತೆಯ ಏರಿಳಿತ ಕಾಣದೆ ಬೈಕ್‌ ಸವಾರರೊಬ್ಬರು ಇತ್ತೀಚೆಗಷ್ಟೇ ಮೃತಪಟ್ಟ ಘಟನೆಯೂ ನಡೆದಿದೆ.

ಬಸ್‌ ಸಂಚಾರ ಸ್ಥಗಿತಗೊಂಡ ಕಾರಣ ಪ್ರಯಾಣಿಕರು ಪರದಾಡುವಂತಾದರೆ, ಹೋಟೆಲ್ ಮತ್ತು ಹಣ್ಣು ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ. ರಸ್ತೆ ಕಾಮಗಾರಿ ಮುಗಿಯೋವರೆಗೂ ಬಸ್‌ ಬರಲ್ಲ. ನಮ್ಮ ಸಂಕಷ್ಟ ಕೊನೆಗಾಣಲ್ಲ. ನಮ್ಮ ಗೋಳು ಯಾರಿಗೂ ಅರ್ಥವಾಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next