ವಾಡಿ: ರಾವೂರ ಗ್ರಾಪಂ ವ್ಯಾಪ್ತಿಯ ಲಕ್ಷ್ಮೀಪುರವಾಡಿ ಗ್ರಾಮದಲ್ಲಿ ಮತ್ತೆ ವಾಂತಿ ಬೇಧಿ ಪ್ರಕರಣಗಳು ಕಾಣಿಸಿಕೊಂಡಿದ್ದು, ರೋಗಿಗಳು ನರಳುತ್ತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಳೆಗಾಲ ಶುರುವಾಗುತ್ತಿದ್ದಂತೆ ಲಕ್ಷ್ಮೀಪುರವಾಡಿ ಗ್ರಾಮಸ್ಥರು ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿಯುವುದು ಸಾಮಾನ್ಯ ಎಂಬಂತಾಗಿದೆ. ಕುಡಿಯುವ ನೀರಿನಲ್ಲಿ ಬದಲಾವಣೆಯಾಗುತ್ತಿದ್ದಂತೆ ವಾಂತಿ-ಬೇಧಿ ಕಾಣಿಸಿಕೊಳ್ಳುತ್ತದೆ. ಗಣಿ ಕಂದಕಗಳಲ್ಲಿ ಮಳೆ ನೀರು ಸಂಗ್ರಹವಾಗಿ ಸೊಳ್ಳೆಗಳು ಹೆಚ್ಚಾದಂತೆ ನಿವಾಸಿಗಳು ಚಳಿ ಜ್ವರದಿಂದ ತತ್ತರಿಸುತ್ತಾರೆ. ಸರತಿ ಸಾಲಿನಂತೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಾರೆ.
ಸದ್ಯ ಕಾಗಿಣಾ ನದಿಯಲ್ಲಿ ನೀರಿಲ್ಲ. ಪರಿಣಾಮ ಗ್ರಾಮಸ್ಥರು ಕೊಳವೆಬಾವಿ ಮತ್ತು ಬಾವಿ ನೀರು ಸೇವಿಸುತ್ತಿದ್ದಾರೆ. ನದಿಯಲ್ಲಿನ ನೀರು ಸರಬರಾಜು ಆದರೂ ಅದು ಕಲುಷಿತವಾದ್ದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕುಡಿಯಲು ನೀರು ಯೋಗ್ಯವಲ್ಲದ ಬಾವಿಯೊಂದು ಗ್ರಾಮದಲ್ಲಿದ್ದು, ನೀರಿನ ಅಭಾವ ಸೃಷ್ಟಿಯಾದಾಗ ಜನರು ಅನಿವಾರ್ಯವಾಗಿ ಬಳಕೆಗೆ ತರುತ್ತಾರೆ. ಕೆಲವೊಮ್ಮೆ ಅದೇ ನೀರು ಕುಡಿದು ದಾಹ ಹಿಂಗಿಸಿಕೊಳ್ಳುತ್ತಾರೆ. ಸದ್ಯ ಗ್ರಾಮಸ್ಥರು ಕಲುಷಿತ ನೀರು ಸೇವಿಸಿ ವಾಂತಿ ಮತ್ತು ಬೇಧಿಯಿಂದ ನರಳುತ್ತಿದ್ದಾರೆ. ರಾವೂರ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಅನೇಕರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅನೇಕ ರೋಗಿಗಳ ಹೆಸರನ್ನು ವೈದ್ಯರು ದಾಖಲಿಸಿಕೊಳ್ಳುತ್ತಿಲ್ಲ. ರೋಗದ ಹತೋಟಿಗೆ ಮುಂಜಾಗೃತವಾಗಿ ಕ್ರಮಕೈಗೊಂಡಿಲ್ಲ. ರೋಗದ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ವೈದ್ಯರು ಮಾಡುತ್ತಿದ್ದಾರೆ ಎಂದು ಕರವೇ ಮುಖಂಡ ಯುವರಾಜ ರಾಠೊಡ ಆರೋಪಿಸಿದ್ದಾರೆ.
ಗ್ರಾಮದಲ್ಲಿ ನೈರ್ಮಲ್ಯ ವ್ಯವಸ್ಥೆ ಹದಗೆಟ್ಟಿದ್ದು, ಸೊಳ್ಳೆಗಳ ತಾಣವಾಗಿ ಮಾರ್ಪಟ್ಟಿದೆ. ಗಣಿ ತೆಗ್ಗುಗಳಲ್ಲಿ ತಿಂಗಳುಗಟ್ಟಲೇ ನಿಂತ ನೀರಿನಲ್ಲಿ ಲಾರ್ವಾ ಉಸಿರಾಡುತ್ತಿವೆ. ಪ್ರತಿ ವರ್ಷ ವೈದ್ಯರು ಗ್ರಾಮದಲ್ಲಿ ಬೀಡುಬಿಟ್ಟು ಸಾರ್ವಜನಿಕರ ರಕ್ತ ಪರೀಕ್ಷೆ ಮಾಡುತ್ತಿದ್ದರು. ರೋಗಕ್ಕೆ ತುತ್ತಾದವರಿಗೆ ಸ್ಥಳದಲ್ಲಿಯೇ ಚಿಕಿತ್ಸೆ ಕೊಡುತ್ತಿದ್ದರು. ಆದರೆ ಈಗ ಮತ್ತೆ ರೋಗದ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದರೂ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿಲ್ಲ. ಗ್ರಾಪಂ ಅಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡಿಲ್ಲ. ಶುದ್ಧ ನೀರು ಪೂರೈಕೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಒಟ್ಟಾರೆ ಇವರಿಗೆ ನಮ್ಮ ಆರೋಗ್ಯದ ಕಾಳಜಿಯಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ರಾವೂರು ಗ್ರಾಮದಿಂದಲೂ ರೋಗಿಗಳು ಆಸ್ಪತ್ರೆಗೆ ಬರುತ್ತಿರುವುದು ಬೆಳಕಿಗೆ ಬಂದಿದೆ.