ಮಡಿವಾಳಪ್ಪ ಹೇರೂರ
ವಾಡಿ: ವಿಶ್ವ ಮಾರುಕಟ್ಟೆ ಮೇಲೆ ಹಿಡಿತ ಸಾಧಿ ಸಿರುವ ಸ್ಥಳೀಯ ಎಸಿಸಿ ಸಿಮೆಂಟ್ ಕಂಪನಿ, ಯಂತ್ರಾಧಾರಿತ ಉದ್ಯಮಕ್ಕೆ ಚಾಲನೆ ನೀಡಿದ ನಂತರ ನಿರಂತರವಾಗಿ ಸಾವಿರಾರು ಕಾರ್ಮಿಕರನ್ನು ಮನೆಗಟ್ಟಿರುವ ಬೆನ್ನಲ್ಲೇ, ಭಯಾನಕ ಸ್ಫೋಟದ ಗಣಿಗಾರಿಕೆಯಿಂದ ಬಡ ಜನರ ಮನೆಗಳನ್ನು ಹಾಳು ಮಾಡುತ್ತಿದೆ.
ಎಸಿಸಿ ಕಂಪನಿಯ ಹಿಂಬದಿ ಗ್ರಾಮವಾದ ಇಂಗಳಗಿಯಲ್ಲಿ ರೈತರ ಸಾವಿರಾರು ಎಕರೆ ಕೃಷಿ ಭೂಮಿ ಖರೀದಿಸಿ, ಗಣಿಗಾರಿಕೆ ಆರಂಭಿಸಿದೆ. ಮದ್ದು ಸಿಡಿಸಿ ಭಯಾನಕ ಸ್ಫೋಟ ಮಾಡುತ್ತಿದೆ. ದಿನದಲ್ಲಿ ಎರಡು ಸಲ ಸ್ಫೋಟಗೊಳ್ಳುವ ಗಣಿ ಆಳದಲ್ಲಿ ಭೂಕಂಪನವೇ ಸೃಷ್ಟಿ ಆಗುತ್ತಿದೆ. ಮದ್ದು ಸಿಡಿಯುವ ಸದ್ದಿಗೆ ಇಂಗಳಗಿ ಗ್ರಾಮದ ಮನೆಗಳು ಗಢಗಢ ನಡುಗುತ್ತಿವೆ. ಮನೆಯ ನಿವಾಸಿಗಳಯದೆ ಬಡಿತ ಜೋರಾಗುತ್ತದೆ. ಮನೆ ಕುಸಿದು ಬಿದ್ದು ಮಾರಣಹೋಮವೇ ನಡೆಯುತ್ತದೇನೋ ಎನ್ನುವಷ್ಟರ ಮಟ್ಟಿಗೆ ಭೂಮಿ ಕಂಪಿಸುತ್ತದೆ.
ಸಿಡಿದ ಸದ್ದಿಗೆ ತೊಟ್ಟಿಲು ತೂಗಿದಂತಾಗಿ ಮನೆಯಲ್ಲಿನ ಪಾತ್ರೆಗಳೆಲ್ಲ ಉರುಳುತ್ತಿವೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ ಗ್ರಾಮಸ್ಥರು. ಇಂಗಳಗಿ ಪುಟ್ಟ ಗ್ರಾಮವಾಗಿದ್ದು, ಗ್ರಾ.ಪಂ ಕೇಂದ್ರ ಸ್ಥಾನಹೊಂದಿದೆ. ಎಸಿಸಿ ಕಂಪನಿ ಗಣಿಗಾರಿಕೆಯಿಂದ ಗ್ರಾಮದಲ್ಲಿನ ಹಲವು ಮನೆಗಳು ಬಿರುಕುಬಿಟ್ಟಿವೆ. ಸುಸಜ್ಜಿತ ಮನೆಗಳ ಗೋಡೆಗಳೂ ಶಿಥಿಲಗೊಂಡಿವೆ. ಬಿರುಕಿನಿಂದ ಕೂಡಿದ ಅಪಾಯದ ಮನೆಗಳಲ್ಲಿಯೇ ಬದುಕು ಮುಂದು ವರಿದಿದೆ. ಯಾವಾಗ ಮನೆ ಮುಗುಚಿ ಬೀಳುತ್ತದೋ ಎನ್ನುವ ಪ್ರಾಣ ಭಯದಲ್ಲಿಯೇ ದಿನಗಳನ್ನು ದೂಡುವಂತಾಗಿದೆ.
ಕಂಪನಿಯ ಮಹಾ ಗಣಿಗಾರಿಗೆ ಊರಿನ ಕಡೆ ಧಾವಿಸಿ ಬರುತ್ತಿದ್ದು, ಊರೇ ಬಿಡಬೇಕಾದ ಪ್ರಸಂಗ ಎದುರಾಗಿದೆ. ಭಯಾನಕ ಸ್ಫೋಟದ ಕುರಿತು ಕಂಪನಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಸ್ಫೋಟದ ತೀವ್ರತೆ ಹೆಚ್ಚಿದ್ದು, ಧರೆಯ ಒಡಲಾಳ ಐದಾರು ಕಿ.ಮೀ ದೂರದಲ್ಲೂ ನಡುಗುತ್ತಿದೆ. ವಿಶ್ವದ ಎತ್ತರಕ್ಕೆ ಬೆಳೆದು ನಿಂತಿರುವ ಎಸಿಸಿ ಕಂಪನಿ ಆಡಳಿತಕ್ಕೆ ತನ್ನ ನೆರಳಿನಲ್ಲಿರುವ ಗ್ರಾಮಸ್ಥರ ಗೋಳು ಕೇಳುವ ಪುರುಸೊತ್ತು ಇಲ್ಲವಾಗಿದೆ.
ಗಣಿಗಾರಿಕೆಗೆ ಸಾವಿರಾರು ಎಕರೆ ಭೂಮಿ ಬರೆದುಕೊಟ್ಟ ಇಂಗಳಗಿ ಗ್ರಾಮಸ್ಥರಿಗೆ ಭೂಕಂಪನದ ಬರೆ ನೀಡುತ್ತಿದೆ. ಎಸಿಸಿ ಎಚ್ಚೆತ್ತುಕೊಳ್ಳದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.