ಮಡಿವಾಳಪ್ಪ ಹೇರೂರ
ವಾಡಿ: ನೂರಾರು ವರ್ಷಗಳ ಕಾಲ ಕಲ್ಲು ಗಣಿಯಲ್ಲಿ ಸೂರು ಕಟ್ಟಿಕೊಂಡು ವಾಸವಿದ್ದ ಕುಟುಂಬಗಳಿಗೆ ಮನೆ ತೆರವು ಮಾಡಬೇಕೆಂಬ ಒತ್ತಡ ಹೇರಲಾಗುತ್ತಿದ್ದು, ಬದುಕು ಬೀದಿಗೆ ಬಿದ್ದು ಒಕ್ಕಲೇಳುವ ಆತಂಕ ಎದುರಾಗಿದೆ.
ಗಣಿನಾಡು ಪಟ್ಟಣದ ಪುರಸಭೆ ವ್ಯಾಪ್ತಿಯ ಕಟ್ಟಕಡೆಯ ವಾರ್ಡ್ 23ರ ಇಂದ್ರಾ ನಗರ ಬಡಾವಣೆಯ ಸಿಂಡಿಕೇಟ್ ಪ್ರದೇಶದಲ್ಲಿ ವಾಡಿ ಸ್ಟೋನ್ ಮಾರ್ಕೇಟಿಂಗ್ ಎನ್ನುವ ಖಾಸಗಿ ಕಂಪನಿಯೊಂದು ಸ್ವಾತಂತ್ರ್ಯಕ್ಕೂ ಮುಂಚೆ ಸಾವಿರಾರು ಎಕರೆ ಭೂ ಪ್ರದೇಶದಲ್ಲಿ ದೊಡ್ಡ ಮಟ್ಟದ ಕಲ್ಲು ಗಣಿಗಾರಿಕೆ ಆರಂಭಿಸಿದೆ. ಗಣಿ ಆಳದಿಂದ ಕಲ್ಲು ಪರ್ಸಿ ಹೊತ್ತು ಪಾಲೀಶ್ ಮಾಡುತ್ತಿದ್ದ ಕಾರ್ಮಿಕ ಕುಟುಂಬಗಳಿಗೆ ಗಣಿ ಮಾಲೀಕ ನಾರೀಮನ್ ಸೇಠ ಎನ್ನುವರು ಮನೆಗಳನ್ನು ನಿರ್ಮಿಸಿ ಉಚಿತವಾಗಿ ಸೂರು ಒದಗಿಸಿದ್ದರು. ಮನರಂಜನೆಗಾಗಿ ಬಯಲು ಚಿತ್ರಮಂದಿರ ಸ್ಥಾಪಿಸಿದ್ದರು. ಕಾರ್ಮಿಕರ ಮಕ್ಕಳಿಗಾಗಿ 1941 ರಲ್ಲಿ ಭಾರತ ಪ್ರಾಥಮಿಕ ಶಾಲೆ ರಾವೂರ ಕ್ವಾರಿ ಹೆಸರಿನಲ್ಲಿ ಶಾಲೆ ತೆರೆದು ಶಿಕ್ಷಣ ಕೊಡಿಸಿದ್ದರು. ಆ ಶಾಲೆ ಇಂದಿಗೂ ಮಕ್ಕಳಿಗೆ ಅಕ್ಷರ ಜ್ಞಾನ ನೀಡುತ್ತಿದೆ. ಕಾಲಾನಂತರ (30 ವರ್ಷಗಳ ಹಿಂದೆ) ವಾಡಿ ಸ್ಟೋನ್ ಮಾರ್ಕೇಟಿಂಗ್ ಕಂಪನಿ ಗಣಿಗಾರಿಕೆಯನ್ನು ಮತ್ತೂಬ್ಬರಿಗೆ ಹಸ್ತಾಂತರಿಸಿತು. ಗಣಿಯಲ್ಲಿ ಶ್ರಮಿಸಿದ ಕಾರ್ಮಿಕರಿಗೆ ಅವರು ವಾಸವಿದ್ದ ಮನೆಗಳನ್ನು ಮತ್ತು ತೆರೆಯಲಾದ ಶಾಲೆಯನ್ನು ಕಾರ್ಮಿಕರ ಅನುಕೂಲಕ್ಕೆ ಬಿಡಲಾಗಿತ್ತು.
ಮೂರು ತಲೆಮಾರಿನ ಕಾರ್ಮಿಕ ಕುಟುಂಬಗಳು ವಾಸವಿರುವ ಸಿಂಡಿಕೇಟ್ ಗಣಿ ಪ್ರದೇಶದಲ್ಲಿ ಸ್ಥಬ್ದಗೊಂಡಿದ್ದ ಗಣಿಗಾರಿಕೆಗೆ ಮತ್ತೆ ರೆಕ್ಕೆಪುಕ್ಕಗಳು ಬಂದಿದ್ದು, ಜೆಸಿಬಿ ಯಂತ್ರಗಳು ಸದ್ದು ಮಾಡುತ್ತಿವೆ. ಮಾಜಿ ಶಾಸಕ, ಬಿಜೆಪಿಯ ವಾಲ್ಮೀಕಿ ನಾಯಕ ತಮ್ಮ ಪುತ್ರ ರವೀಂದ್ರ ನಾಯಕ ಹೆಸರಿನಲ್ಲಿ 4.5 ಎಕರೆ ಗಣಿ ಭೂಮಿ (ಪಟ್ಟಾ ಲ್ಯಾಂಡ್) ಖರೀದಿ ಮಾಡಿದ್ದಾರೆ ಎನ್ನಲಾಗಿದ್ದು, ಈಗ ಗಣಿಗಾರಿಕೆಗೆ ಚಾಲನೆ ನೀಡಿದ್ದಾರೆ. ಗಣಿಯಲ್ಲಿ ಅಕ್ರಮವಾಗಿ ವಾಸವಿರುವವರು ಕೂಡಲೇ ಜಾಗ ಖಾಲಿ ಮಾಡಬೇಕು ಎನ್ನುವ ಮೌಖೀಕ ಆದೇಶ ನೀಡಿರುವುದೇ ಕಾರ್ಮಿಕರ ಆತಂಕಕ್ಕೆ ಕಾರಣವಾಗಿದೆ.
ನಮ್ಮ ತಾತ ಮತ್ತು ತಂದೆಯವರು ದುಡಿದು ಬದುಕಿರುವ ಈ ಕಲ್ಲು ಗಣಿಯಲ್ಲೇ ನಾವು ಬದುಕುತ್ತಿದ್ದೇವೆ. ಡಬ್ಲ್ಯುಎಸ್‌ಎಂ ಕಂಪನಿ ನೀಡಿದ ಗುಡಿಸಲು ಮನೆಗಳಲ್ಲೇ ಬದುಕುತ್ತಿದ್ದೇವೆ. ಮನೆಯ ಜಾಗ ನೋಂದಣಿ ಮಾಡಿಸುವಂತೆ ಎಲ್ಲ ರಾಜಕೀಯ ನಾಯಕರಿಗೆ ಹೇಳಿದರೂ ಕೇಳಿಸಿಕೊಳ್ಳಲಿಲ್ಲ. ಎಲ್ಲಿಗೆ ಹೋಗೋಣ? ನಮ್ಮ ಬಾಳು ಬೀದಿಗೆ ಬೀಳುತ್ತಿದೆ. ನಮಗೆ ಜಾಗ ಕೊಟ್ಟು, ಇರಲು ಮನೆ ಕಟ್ಟಿಸಿಕೊಟ್ಟರೆ ಮಾತ್ರ ಜಾಗ ಖಾಲಿ ಮಾಡುತ್ತೇವೆ. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕೂಡುತ್ತೇವೆ ಎನ್ನುತ್ತಿದ್ದಾರೆ ಸಂತ್ರಸ್ತರು.
ನಾವು ಖರೀದಿಸಿರುವ 4.5 ಎಕರೆ ಗಣಿ ಭೂಮಿ ಪ್ರದೇಶದಲ್ಲಿ ಕೆಲ ಕಾರ್ಮಿಕ ಕುಟುಂಬಗಳು ಅಕ್ರಮವಾಗಿ ವಾಸವಾಗಿವೆ. ಅವರು ಜಾಗ ಖಾಲಿ ಮಾಡಿದರೆ ಮಾತ್ರ ಗಣಿಗಾರಿಕೆಗೆ ಅನುಕೂಲವಾಗುತ್ತದೆ. ಕುಟುಂಬಗಳನ್ನು ಬೀದಿಪಾಲು ಮಾಡಬೇಕೆಂಬ ಉದ್ದೇಶ ನಮಗಿಲ್ಲ. ಬೇರೆ ಜಾಗ ತೋರಿಸುತ್ತೇವೆ. ಅಲ್ಲಿ ತಾತ್ಕಾಲಿಕವಾಗಿ ಮನೆ ನಿರ್ಮಿಸಿಕೊಳ್ಳಿ ಎಂದು ಈಗಾಗಲೇ ತಿಳಿಸಿದ್ದೇವೆ. ಕಾಯಂ ಜಾಗ ಕೊಟ್ಟು ಮನೆ ಕಟ್ಟಿಸಿಕೊಡುವಂತೆ ಕಾರ್ಮಿಕರು ಕೇಳುತ್ತಿದ್ದಾರೆ. ಆ ಕೆಲಸ ಸರಕಾರ ಮಾಡಬೇಕು.
•
ವಾಲ್ಮೀಕಿ ನಾಯಕ,
ಮಾಜಿ ಶಾಸಕ, ಚಿತ್ತಾಪುರ