ವಾಡಿ: ಬೆಂಕಿಯುಗುಳುವ ಭಯಂಕರ ರಣಬಿಸಿಲು. ಪಾದ ಸುಟ್ಟರೂ ಭಕ್ತಿಯ ಹೆಜ್ಜೆ ಹಿಂದೆ ಸರಿಯಲಿಲ್ಲ. ಖಡಕ್ ಸೂರ್ಯನ ಬಿಸಿಗಾಳಿ ಮಧ್ಯೆ ನೈವೇದ್ಯ ಹೊತ್ತು ಗುಡ್ಡ ಹತ್ತಿಳಿದ ಹಿಂದೂ-ಮುಸ್ಲಿಂ ಭಕ್ತರು. ಗುಡ್ಡದ ಸುತ್ತಲೂ ಬಾಡೂಟದ ಬಿಡಾರುಗಳು ರಾರಾಜಿಸುತ್ತಿದ್ದರೆ, ಗುಡ್ಡದ ತುದಿಯಲ್ಲಿ ಕಾಯಿ-ಕರ್ಪೂರ ಅರ್ಪಿಸುವವರ ಸಂಭ್ರಮವಿತ್ತು. ಗ್ರಾಮದ ಇಕ್ಕಟ್ಟಿನ ಗಲ್ಲಿ ರಸ್ತೆಗಳಲ್ಲಿಯೇ ಜಾತ್ರೆ ಸಡಗರ ಮನೆಮಾಡಿತ್ತು.
ಹಿಂದೂ-ಮುಸ್ಲಿಂ ಭಾವೈಕ್ಯತೆಯ ದೇವರಾದ ಲಾಡ್ಲಾಪುರ ಗ್ರಾಮದ ಗುಡ್ಡದ ಶ್ರೀ ಹಾಜಿಸರ್ವರ್ (ಹಾದಿಶರಣ) ಜಾತ್ರೆಯ ಸಂಕ್ಷಿಪ್ತ ನೋಟವಿದು. ಶುಕ್ರವಾರ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಲಕ್ಷಾಂತರ ಜನ ಭಕ್ತರು ಬೆಳಗ್ಗೆಯೇ ಸಾವಿರಾರು ಕುರಿಗಳನ್ನು ಬಲಿ ನೀಡುವ ಮೂಲಕ ಮಾಂಸದ ನೈವೇದ್ಯ ಅರ್ಪಿಸಿದರು. ಸಂಬಂಧಿಕರಿಗೆ ಬಾಡೂಟ ಬಡಿಸಿ ಭಕ್ತಿಯ ಸೇವೆ ಸಲ್ಲಿಸಿದರು. ಲಾಡ್ಲಾಪುರ ಗ್ರಾಮದ ಪ್ರತಿಯೊಂದು ಕುಟುಂಬವು ಹಾಜಿಸರ್ವರ್ ದೇವರಿಗೆ ಕುರಿ ಬಲಿ ನೀಡಿ ಸಂಪ್ರದಾಯ ಪೂರೈಸಿದ್ದು ಇಲ್ಲಿನ ವಿಶೇಷ.
ಗಮನ ಸೆಳೆದ ಗಂಧದ ಮೆರವಣಿಗೆ: ಗುಡ್ಡದ ಜಾತ್ರೆಗೂ ಮುನ್ನ ಗುರುವಾರ ಸಂಜೆ ನಡೆದ ಗಂಧದ ಮೆರವಣಿಗೆ ಧಾರ್ಮಿಕ ನಂಬಿಕೆಗೆ ಸಾಕ್ಷಿಯಾಗಿ ಗಮನ ಸೆಳೆಯಿತು. ಶುಕ್ರವಾರ ಏರ್ಪಡಿಸಲಾಗಿದ್ದ ಖವ್ಹಾಲಿ ಗಾಯನ ಸ್ಪರ್ಧೆ, ದೀಪೋತ್ಸವ ಜಾತ್ರೆ ಮೆರಗು ಹೆಚ್ಚಿಸಿತು. ಮುಸ್ಲಿಂ ಸಮುದಾಯ, ಬಂಜಾರಾ ಸಮುದಾಯದ ಭಕ್ತರು ಶ್ರೀ ಹಾಜಿಸರ್ವರ್ ಎಂದು ಪೂಜಿಸಿದರೆ, ಹಿಂದೂ ಸಮುದಾಯದ ಭಕ್ತರು ಹಾದಿಶರಣ ಎಂದು ಪೂಜಿಸಿ, ಸಿಹಿ ಖಾದ್ಯವನ್ನು ನೈವೇದ್ಯವಾಗಿ ನೀಡಿ ಮನದಾಸೆ ಪೂರೈಸಿಕೊಂಡರು.
ಪರದಾಡಿದ ಜನಸಾಗರ: ಗುಡ್ಡದ ದೇವರು ಶ್ರೀ ಹಾಜಿಸರ್ವರ್ ಜಾತ್ರೆಗೆ ಆಗಮಿಸಿದ್ದ ಲಕ್ಷಾಂತರ ಭಕ್ತರು ಕೂಡಲು ನೆರಳಿಲ್ಲದೆ ಹಾಗೂ ಸುಗಮವಾಗಿ ದೇವಸ್ಥಾನ ತಲುಪಲು ಸೂಕ್ತ ಮಾರ್ಗದ ವ್ಯವಸ್ಥೆಯಿಲ್ಲದ್ದಕ್ಕೆ ಪರದಾಡುವಂತೆ ಆಗಿತ್ತು. ರಸ್ತೆ ಮೇಲೆಯೇ ಜಾತ್ರೆಯ ವ್ಯಾಪಾರ ಮಳಿಗೆಗಳು ಠಿಕಾಣಿ ಹೂಡಿದ್ದರಿಂದ ಮಕ್ಕಳು, ವಯಸ್ಕರು ತೊಂದರೆ ಅನುಭವಿಸಿದರು. ಗ್ರಾಪಂ ಕಚೇರಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತಾದರೂ ಸಮರ್ಪಕವಾದ ವ್ಯವಸ್ಥೆಯಾಗದೇ ನೀರಿಗಾಗಿ ಭಕ್ತರು ಅಲೆಯವಂತೆ ಆಗಿತ್ತು. ಬಾಟಲಿ ನೀರು ಖರೀದಿಸಿ ಕುಡಿಯಲು ಜನರು ಮುಗಿಬೀಳುವಂತೆ ಆಗಿತ್ತು. ಜಾತ್ರೆಯ ವಾಪಾರ ಮಳಿಗೆಗೆ ವಿಶಾಲವಾದ ಮೈದಾನ ವ್ಯವಸ್ಥೆ ಮಾಡುವಲ್ಲಿ ಜಾತ್ರಾ ಸಮಿತಿ ನಿರ್ಲಕ್ಷ್ಯ ವಹಿಸಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಯಿತು. ವಾಡಿ ಠಾಣೆ ಪಿಎಸ್‌ಐ ವಿಜಯಕುಮಾರ ಭಾವಗಿ ಬಂದೋಬಸ್ತ್ ಒದಗಿಸಿದ್ದರು.