ವಾಡಿ: ನಾಗರ ಪಂಚಮಿಯಂದು ಹುತ್ತಕ್ಕೆ ಹಾಲು ಹಾಕುವುದನ್ನು ವಿರೋಧಿಸುವ ಬುದ್ಧಿಜೀವಿಗಳು, ಕೆಲವು ಹಬ್ಬಗಳಲ್ಲಿ ನಾಲೆಗೆ ಹರಿಯುವ ಹಸುವಿನ ರಕ್ತ ಕಂಡೇಕೆ ಮರುಗುವಿದಿಲ್ಲ ಎಂದು ಆಂದೋಲಾ ಕರುಣೇಶ್ವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಪ್ರಶ್ನಿಸಿದರು.
ಕೊಂಚೂರು ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಶನಿವಾರ ಮಹರ್ಷಿ ಸವಿತಾ ಪೀಠದ ವತಿಯಿಂದ ಲೋಕ ಕಲ್ಯಾಣಾರ್ಥ ಏರ್ಪಡಿಸಲಾಗಿದ್ದ ಸುದರ್ಶನ ನಾರಸಿಂಹ ಯಾಗ-ಯಜ್ಞ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ದುರ್ದೈವದ ಸಂಗತಿ ಎಂದರೆ ನಾಗ ಪಂಚಮಿಯಂದು ಬಿಲದಿಂದ ಹಾವುಗಳು ಬರುವುದಿಲ್ಲ. ಮನೆಯಿಂದ ಹೊರಗೆ ಬುದ್ಧಿಜೀವಿಗಳು ಬಂದು ರಸ್ತೆ ಮೇಲೆ ನಿಲ್ಲುತ್ತಾರೆ. ಕಲ್ಲಿನ ವಿಗ್ರಹಕ್ಕೆ ಮತ್ತು ಹುತ್ತಕ್ಕೆ ಹಾಲು ಹಾಕಬೇಡಿ ವ್ಯರ್ಥವಾಗುತ್ತದೆ. ಹಾಲು ಅನಾಥ ಮಕ್ಕಳಿಗೆ ಕುಡಿಸಿರಿ ಎಂದು ಈ ಬುದ್ಧಿಜೀವಿ ವಿಷ ಸರ್ಪಗಳು ನಮಗೆ ಉಪದೇಶ ಕೊಡುತ್ತವೆ. ಬರೀ ನಾಗಪಂಚಮಿಯಂದೇ ಏಕೆ ನಿಮಗೆ ಅನಾಥ ಮಕ್ಕಳು ನೆನಪಾಗುತ್ತಾರೆ? ಮರುದಿನ ಇವರಿಗೆ ಅನಾಥರೂ ನೆನಪಾಗಲ್ಲ ಮಕ್ಕಳೂ ನೆನಪಾಗಲ್ಲ. ಮತ್ತೇ ಈ ಹಾವುಗಳು ಬಿಲದಲ್ಲಿ ಕುಳಿತುಕೊಳ್ಳುತ್ತವೆ ಎಂದು ಹರಿಹಾಯ್ದದರು.
ಜಗವೆಲ್ಲ ಸುಖಮಯವಾಗಿರಲು ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಸುದರ್ಶನ ಯಾಗ ಮಾಡುತ್ತಿದ್ದಾರೆ. ಎಲ್ಲರಿಗೂ ಒಳಿತಾಗಲಿ ಎಂದು ಹೇಳಿದರು.
ಸವಿತಾ ಮಹರ್ಷಿ ಪೀಠದ ಧರ್ಮಾಧಿಕಾರಿ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಅಪಘಾತದಲ್ಲಿ ನನಗೆ ಸಾವು ಎದುರಾಗಿದ್ದಾಗ ಹಸುವೊಂದು ಎದುರು ಬಂದು ಪ್ರಾಣ ಉಳಿಸಿತು. ಅಂದಿನಿಂದ ಗೋವುಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ಸವಿತಾ ಸಮಾಜ ಇಂದಿಗೂ ಅಸ್ಪೃಶ್ಯತೆ ನೋವು ಅನುಭವಿಸುತ್ತಿದೆ. ನಮ್ಮ ಸಮಾಜದ ಜನರಿಗೆ ಮನೆ ಬಾಡಿಗೆ ಸಿಗುತ್ತಿಲ್ಲ. ಹಿಂದೂಗಳೇ ನಮ್ಮನ್ನು ಹಿಂದುಗಳಂತೆ ಕಾಣುತ್ತಿಲ್ಲ. ಹೀಗಾಗಿ ಸವಿತಾ ಸಮಾಜದ ಅನೇಕರು ವಿವಿಧ ರಾಜ್ಯಗಳಲ್ಲಿ ಬೌದ್ಧ ಧರ್ಮವನ್ನು ಅಪ್ಪಿಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಶರಣಪ್ಪ ಬಳ್ಳಾರಿ, ರಮೇಶ ಚಿನ್ನಾಕರ, ಅಪ್ಪಣ್ಣ ಚಿನ್ನಾಕರ, ವಾಡಿ ಸವಿತಾ ಸಮಾಜದ ಅಧ್ಯಕ್ಷ ಅಂಬರೀಶ ಕಡದರಾಳ, ವೀರಣ್ಣ ಯಾರಿ ಪಾಲ್ಗೊಂಡಿದ್ದರು.