Advertisement

ಬಾ ಮಗು ಹರಕು-ಮುರುಕು ಶಾಲೆಗೆ!

12:29 PM Jun 06, 2019 | Team Udayavani |

ಮಡಿವಾಳಪ್ಪ ಹೇರೂರ
ವಾಡಿ:
ಗೋಡೆ ಬಿರುಕು, ಮಾಳಿಗೆ ಹರಕು. ನೆಲ ತೆಗ್ಗು, ಬೆಂಚು ತುಕ್ಕು. ಅಂಗಳ ಡೊಂಕು, ಬಾಗಿಲು ಕಿಟಕಿ ಮುರುಕು. ಸುಣ್ಣ ಬಣ್ಣ ಕಣ್ಣಿಗೆ ಕಾಣೋದಿಲ್ಲ. ತರಗತಿ ಕೋಣೆಯೇ ಚಿಣ್ಣರ ಅಂಗಳವಾಗಿದ್ದು, ಮಕ್ಕಳು ನಲಿಯೋದಿಲ್ಲ. ಹೀಗೆ ಶಿಥಿಲವಾಗಿ ಪಾಳುಬಿದ್ದ ಸರಕಾರಿ ಶಾಲಾ ಕಟ್ಟಡಗಳು, ಮಕ್ಕಳನ್ನು ಮರಳಿ ಶಾಲೆಗೆ ಕರೆಯುವ ಬದಲು ಜೀವ ಭಯದಿಂದ ವಾಪಸ್‌ ಮನೆಗೆ ಓಡುವಂತೆ ಪ್ರೇರೇಪಿಸುತ್ತಿವೆ.

Advertisement

ಚಿತ್ತಾಪುರ ತಾಲೂಕು ವ್ಯಾಪ್ತಿಯ ವಾಡಿ ಪಟ್ಟಣ ವಲಯದ ವಿವಿಧ ಗ್ರಾಮಗಳಲ್ಲಿ ಶಿಕ್ಷಣ ಇಲಾಖೆಗೆ ಸೇರಿದ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕಟ್ಟಡಗಳು ಬಹುತೇಕ ಶಿಥಿಲವಾಗಿ ಧರೆಗುರುಳುವ ಸ್ಥಿತಿಗೆ ತಲುಪಿವೆ. ಶಿಕ್ಷಕರ ಕೊರತೆ ಎದುರಿಸುತ್ತಿರುವ ಗ್ರಾಮೀಣ ಭಾಗದ ಸರಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿಯದ್ದೇ ಪ್ರಮುಖ ಸಮಸ್ಯೆಯಾಗುತ್ತಿದೆ. ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿಯೇ ಚಿತ್ತಾಪುರ ತಾಲೂಕು ಅತ್ಯಂತ ಕೊನೆಯ ಸ್ಥಾನಕ್ಕೆ ಕುಸಿದಿದ್ದು, ಸರಕಾರಿ ಶಾಲೆಗಳ ಶಿಕ್ಷಣ ಗುಣಮಟ್ಟವನ್ನೇ ಪ್ರಶ್ನಿಸುವಂತಾಗಿದೆ.

ಖಾಸಗಿ ಶಾಲೆಗಳಿಗೆ ಪೈಪೋಟಿ ಎಂಬಂತೆ ಬೆಳೆಯಬೇಕಿದ್ದ ಸರಕಾರಿ ಶಾಲೆಗಳು, ಶಿಕ್ಷಕರ ಕೊರತೆ ಹಾಗೂ ಕಟ್ಟಡ ಸಮಸ್ಯೆ ಜತೆಗೆ ಅಗತ್ಯ ಮೂಲ ಸೌಕರ್ಯಗಳಿಂದ ವಂಚಿತವಾಗಿ ಪೋಷಕರ ಗಮನ ಸೆಳೆಯುವಲ್ಲಿ ಹಿಂದೆ ಬಿದ್ದಿವೆ. ದನದ ಕೊಟ್ಟಿಗೆಯಂತ ಶಾಲಾ ಕಟ್ಟಡದಲ್ಲಿ ತಮ್ಮ ಮಕ್ಕಳಿಗೆ ಅಕ್ಷರ ಜ್ಞಾನ ಸಿಗುತ್ತದೆ ಎನ್ನುವ ನಂಬಿಕೆ ಪಾಲಕರಲ್ಲಿಲ್ಲ. ತರಗತಿ ಮಾಳಿಗೆಗಳು ಸೋರುವ ಕಟ್ಟಡಗಳಿಗೆ ಲೆಕ್ಕವಿಲ್ಲ. ಬಿರುಕು ಬಿಟ್ಟ ಕಟ್ಟಡಗಳೇ ಎಲ್ಲ. ಕಾಂಕ್ರೀಟ್ ಮಾಳಿಗೆಗಳಿಂದ ಸಿಮೆಂಟ್ ಕಳಚಿಬಿದ್ದು ರಾಡುಗಳು ಗೋಚರಿಸುತ್ತಿವೆ. ಮುರುಕು ಬೆಂಚುಗಳ ಮೇಲೆ ಕುಳಿತು ಬರೆಯಲು ಸಾಧ್ಯವಾಗದೆ ವಿದ್ಯಾರ್ಥಿಗಳು ವರ್ಷಗಟ್ಟಲೇ ತೊಂದರೆ ಅನುಭವಿಸುತ್ತಾರೆ. ಇಂತಹ ಅನಾನುಕೂಲತೆ ಮಧ್ಯೆ ಪುಸ್ತಕದ ಜ್ಞಾನ ಮಕ್ಕಳ ಮಸ್ತಕ ಸೇರುವುದಾದರೂ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಪಾಲಕರದ್ದು. ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸರಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೂ ಶಿಕ್ಷಣದ ಗುಣಮಟ್ಟ ಪರಿಣಾಮಕಾರಿಯಾಗಿಲ್ಲ ಎನ್ನುವುದು ಪೋಷಕರ ಆರೋಪವಾಗಿದೆ. ಯಾವುದ್ಯಾವುದೋ ಕಾಮಗಾರಿಗಳಿಗೆ ನೂರಾರು ಕೋಟಿ ರೂ. ಅನುದಾನ ಖರ್ಚು ಮಾಡುವ ಕ್ಷೇತ್ರದ ಶಾಸಕ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ತಮ್ಮ ಕ್ಷೇತ್ರದ ಸರಕಾರಿ ಶಾಲೆಗಳ ಜೀರ್ಣೋದ್ಧಾರಕ್ಕೆ ಬದ್ಧರಾಗಿ ಮಕ್ಕಳನ್ನು ಪ್ರಾಣ ಭಯದಿಂದ ಮುಕ್ತಗೊಳಿಸಬೇಕು. ಗುಣಮಟ್ಟದ ಶಿಕ್ಷಣ ಜಾರಿಗೊಳಿಸುವಂತಹ ಕಾರ್ಯಕ್ಕೆ ಆಸಕ್ತಿ ತೋರಬೇಕು ಎನ್ನುವುದು ಪೋಷಕರ ಒತ್ತಾಸೆಯಾಗಿದೆ.

ಎಲ್ಲೆಲ್ಲಿ ದುರಸ್ತಿ ಮಾಡಬೇಕು?
ಬಳವಡಗಿ, ಕುಲಕುಂದಾ, ಹಳಕರ್ಟಿ, ರಾವೂರ, ವಾಡಿ, ಚಾಮನೂರ, ಕುಂದನೂರ, ಸನ್ನತಿ, ಕೊಲ್ಲೂರ, ಕಡಬೂರ, ಲಾಡ್ಲಾಪುರ, ಕುಂಬಾರಹಳ್ಳಿ, ನಾಲವಾರ, ಕೊಲ್ಲೂರ, ಡಿಗ್ಗಿ ತಾಂಡಾ, ಅಣ್ಣಿಕೇರಾ, ರಾಂಪೂರಹಳ್ಳಿ, ತಕರ್ಸ್‌ಪೇಟೆ ಸೇರಿದಂತೆ ಚಿತ್ತಾಪುರ ತಾಲೂಕಿನ ಹಲವು ಸಿಆರ್‌ಪಿ-ಬಿಆರ್‌ಪಿ ವಲಯಗಳಲ್ಲಿ ಶಿಥಿಲ ಸರಕಾರಿ ಶಾಲಾ ಕಟ್ಟಡಗಳು ಜೀರ್ಣೋದ್ಧಾರಕ್ಕೆ ಕಾಯ್ದಿವೆ.

ಸರಕಾರಿ ಶಾಲಾ ಕಟ್ಟಡಗಳು ಎಂದರೆ ಹಂದಿ ಗೂಡಿಗಿಂತಲೂ ಕೆಟ್ಟ ಸ್ಥಿತಿಯಲ್ಲಿವೆ. ಯಾವುದೇ ಗ್ರಾಮಕ್ಕೆ ಹೋದರೂ ಮೂಲ ಸೌಕರ್ಯಗಳಿಲ್ಲದ ಶಿಥಿಲ ಕಟ್ಟಡವುಳ್ಳ ಶಾಲೆಗಳು ಕಾಣಸಿಗುತ್ತವೆ. ಶಿಕ್ಷಕರಿಲ್ಲದೆ ತರಗತಿಗಳು ಮಕ್ಕಳ ಹರಟೆ ಕಟ್ಟೆಗಳಂತಾಗಿವೆ. ಜೀವ ಭಯದಲ್ಲಿಯೇ ಮಕ್ಕಳು ಅಕ್ಷರ ಅಭ್ಯಾಸ ಮಾಡಬೇಕಾದ ದುಸ್ಥಿತಿಯಿದೆ. ಬಿರುಕುಬಿಟ್ಟ ಗೋಡೆಗಳಿಗೆ ತೇಪೆ ಹಚ್ಚಲು ಶಿಕ್ಷಣ ಇಲಾಖೆಗೆ ಸಾಧ್ಯವಾಗಿಲ್ಲ. ಇದರಿಂದ ಬಡ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಕ್ಷೇತ್ರದ ಶಾಸಕರು ಚಿತ್ತಾಪುರದ ಶಿಥಿಲ ಶಾಲೆಗಳ ಪಟ್ಟಿ ಸಿದ್ಧಪಡಿಸಿಕೊಂಡು ದುರಸ್ತ್ತಿ ಕಾರ್ಯಕ್ಕೆ ಅನುದಾನ ಬಿಡುಗಡೆ ಮಾಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಈ ಕುರಿತು ಹೋರಾಟ ರೂಪಿಸುವ ಸಿದ್ಧತೆಯಲ್ಲಿದ್ದೇವೆ.
ಗೌತಮ ಪರತೂರಕರ,
ಅಧ್ಯಕ್ಷ, ಎಐಡಿಎಸ್‌ಒ

Advertisement
Advertisement

Udayavani is now on Telegram. Click here to join our channel and stay updated with the latest news.

Next