ವಾಡಿ: ಅಲ್ಪಸಂಖ್ಯಾತರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ತೆರೆಯಲಾದ ಈ ಗ್ರಾಮದ ಸರಕಾರಿ ಉರ್ದು ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗೆ ಉರ್ದು ವಿಷಯ ಬೋಧಕರನ್ನು ನೇಮಿಸದೇ ಶಿಕ್ಷಣ ಇಲಾಖೆ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ. ಕನ್ನಡ ವಿಷಯ ಬೋಧಕರ ಹುದ್ದೆಯೂ ಇಲ್ಲಿ ಖಾಲಿಯಿದ್ದು, ಮಕ್ಕಳ ಪಠ್ಯ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
Advertisement
ಇಂಗಳಗಿ ಗ್ರಾಪಂ ವ್ಯಾಪ್ತಿಯ ಕುಂದನೂರು ಗ್ರಾಮದ ಸರಕಾರಿ ಉರ್ದು ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಸ್ಲಿಂ ಸಮುದಾಯದ ಮಕ್ಕಳಿಗೆ ಒಂದರಿಂದ 7ನೇ ತರಗತಿ ವರೆಗೆ ಶಿಕ್ಷಣ ಬೋಧಿಸಲಾಗುತ್ತಿದ್ದು, 59 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮೂವರು ಶಿಕ್ಷಕರು ಮಾತ್ರ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟು ನಾಲ್ಕು ತರಗತಿ ಕೋಣೆಗಳಿದ್ದು, ಶಾಲೆ ಮುಂಭಾಗದಲ್ಲಿ ಬಿರುಕುಬಿಟ್ಟು ಶಿಥಿಲಗೊಂಡ ಎರಡು ಕೋಣೆಗಳಲ್ಲಿ ಒಂದೆಡೆ ಅಲ್ಪಸಂಖ್ಯಾತರ ಮಕ್ಕಳಿಗಾಗಿ ಬಿಸಿಯೂಟ ಬೇಯಿಸಲಾಗುತ್ತಿದ್ದರೆ, ಇನ್ನೊಂದರಲ್ಲಿ ಪೌಷ್ಟಿಕ ಆಹಾರ ನೀಡುವ ಅಂಗನವಾಡಿ ಕೇಂದ್ರ-1 ಭಯದ ನೆರಳಿನಲ್ಲಿ ಮುನ್ನಡೆಯುತ್ತಿದೆ. ಇಲಿ ಹೆಗ್ಗಣಗಳ ಕಾಟಕ್ಕೆ ಅಡುಗೆ ಸಿಬ್ಬಂದಿ ಬೇಸತ್ತಿದ್ದು, ಊಟದ ಪದಾರ್ಥಗಳ ಸಂರಕ್ಷಣೆ ದೊಡ್ಡ ಸವಾಲಾಗಿದೆ. ಕುಸಿದು ಬೀಳುವ ಸ್ಥಿತಿಯಲ್ಲಿರುವ ಕಟ್ಟಡಗಳಲ್ಲಿ ಜೀವ ಒತ್ತೆಯಿಟ್ಟು ಮಕ್ಕಳಿಗೆ ಅಡುಗೆ ಸಿದ್ಧಪಡಿಸುತ್ತೇವೆ. ನಮ್ಮ ಕಷ್ಟ ಯಾರೂ ಕೇಳುತ್ತಿಲ್ಲ ಎನ್ನುತ್ತಾರೆ ಬಿಸಿಯೂಟ ಮತ್ತು ಅಂಗನವಾಡಿ ಅಡುಗೆ ಸಹಾಯಕ ಸಿಬ್ಬಂದಿ.