ವಾಡಿ: ಹನಿ ನೀರೂ ಇಲ್ಲದೆ ಗ್ರಾಮೀಣ ಮಕ್ಕಳ ಆಟದ ಮೈದಾನವಾಗಿದ್ದ ಚಿತ್ತಾಪುರ ತಾಲೂಕಿನ ಕುಂದನೂರು ಗ್ರಾಮ ತೀರದ ಭೀಮಾನದಿಗೆ ಬುಧವಾರ ಭಾರಿ ಪ್ರಮಾಣದ ನೀರು ಹರಿದು ಬಂದಿದ್ದು, ಮಹಾರಾಷ್ಟ್ರದ ಮಹಾ ಮಳೆಯ ನೀರು ಕೊನೆಗೂ ಭೀಮೆ ಒಡಲು ತುಂಬಿಸಿದೆ.
ಪಟ್ಟಣದ ಜನತೆಗೆ ಕುಡಿಯುವ ನೀರು ಒದಗಿಸಲು ಬೆಣ್ಣೆತೋರಾ ಜಲಾಶಯದಿಂದ ಕಾಗಿಣಾ ನದಿ ಮೂಲಕ ಭೀಮೆಗೆ 0.025 ಟಿಎಂಸಿ ಅಡಿ ನೀರು ಹರಿಸಲು ಹರಸಾಹಸ ಮಾಡಿದ್ದ ಪುರಸಭೆ ಅಧಿಕಾರಿಗಳು, ಐದು ದಿನಕ್ಕೊಮ್ಮೆ ನೀರು ಬಿಟ್ಟು ಜನರ ಪರದಾಟಕ್ಕೆ ಕಾರಣವಾಗಿದ್ದರು.
ಸದ್ಯ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಾಗಿದ್ದರಿಂದ ಉಜನಿ ಡ್ಯಾಂ ಭರ್ತಿಯಾಗಿ ಜಲಧಾರೆ ಭೀಮೆಯ ಮಾರ್ಗ ಅನುಸರಿಸಿದೆ. ಹೀಗೆ ಬಿಡಲಾದ ನೀರು ಅಫಜಲಪುರ ಮೂಲಕ ಜೇವರ್ಗಿ ಮಾರ್ಗವಾಗಿ ಹರಿದು ಬುಧವಾರ ಬೆಳಗ್ಗೆ ಚಿತ್ತಾಪುರ ವಲಯದ ಕುಂದನೂರು ಭೀಮಾಗೆ ತಲುಪಿದೆ. ಗುರುವಾರ, ಶುಕ್ರವಾರ ಎರಡು ದಿನಗಳಲ್ಲಿ ಹಗಲು ರಾತ್ರಿ ಎನ್ನದೆ ಹರಿದಿರುವ ನೀರು ಸನ್ನತಿ ಭೀಮಾ ಬ್ಯಾರೇಜ್ ಮೂಲಕ ಕೃಷ್ಣೆಯತ್ತ ಧಾವಿಸಲಿದೆ.
ಬುಧವಾರ ಬೆಳಗ್ಗೆಯೂ ನೀರಿಲ್ಲದೆ ಖಾಲಿಯಾಗಿದ್ದ ಕುಂದನೂರಿನ ಭೀಮಾನದಿ ನೋಡನೋಡುತ್ತಿದ್ದಂತೆ ಜಲಾವೃತಗೊಂಡಿತು. ಪುರಸಭೆ ಮತ್ತು ರೈಲ್ವೆ ಇಲಾಖೆಗೆ ಸೇರಿದ ಜಾಕ್‌ವೆಲ್ ನೀರಿನಲ್ಲಿ ಮುಳುಗಿತು. ಹರಿಯುತ್ತಿರುವ ನೀರಿನ ವೇಗ ಕಂಡು ಗ್ರಾಮಸ್ಥರು ನದಿದಂಡೆಗೆ ಹೋಗಲು ಹಿಂದೇಟು ಹಾಕಿದರು. ಮಕ್ಕಳು, ದನಕರುಗಳನ್ನು ನದಿಯತ್ತ ಬಿಡದೆ ಗ್ರಾಮಸ್ಥರು ಎಚ್ಚರ ವಹಿಸಿದರು. ಧುಮ್ಮಿಕ್ಕಿ ಬರುತ್ತಿದ್ದ ನೀರು ಹಾಲಿನ ನೊರೆಯಂತೆ ಕಂಗೊಳಿಸಿ ಗಮನ ಸೆಳೆಯಿತು.
ಭೀಮಾನದಿಗೆ ಭಾರಿ ಪ್ರಮಾಣದ ನೀರು ಸಂಗ್ರಹ ಆಗುತ್ತಿರುವುದರಿಂದ ನದಿದಂಡೆಯ ಕುಂದನೂರು, ಚಾಮನೂರ, ಕಡಬೂರ, ಮಾರಡಗಿ, ಕೊಲ್ಲೂರ ಗ್ರಾಮಸ್ಥರಲ್ಲಿ ಪ್ರವಾಹದ ಭೀತಿ ಉಂಟಾಗಿದೆ. ಎತ್ತನೋಡಿದರತ್ತ ನೀರೇ ಕಣ್ಣಿಗೆ ರಾಚುತ್ತಿದ್ದು, ಹರಿಯುತ್ತಿರುವ ಭೀಮೆಯ ಒಡಲ ವಿಹಂಗಮ ನೋಟ ನೋಡಲು ನಗರದ ಜನರು ನದಿಯತ್ತ ಹೆಜ್ಜೆ ಹಾಕುತ್ತಿದ್ದಾರೆ.