Advertisement

ಅಂಬಿಗರ ಚೌಡಯ್ಯ ಅಮೃತ ಶಿಲಾಮೂರ್ತಿ ಲೋಕಾರ್ಪಣೆ-ಮೆರವಣಿಗೆ

11:29 AM Nov 04, 2019 | Team Udayavani |

ವಾಡಿ: ಯಾರೂ ಬೇಡಿಕೆಯಿಡದಿದ್ದರೂ ಸ್ವ-ಇಚ್ಚೆಯಿಂದ ನಿಜಶರಣ ಅಂಬಿಗರ ಚೌಡಯ್ಯನ ಹುಟ್ಟೂರಾದ ಹಾವೇರಿ ಜಿಲ್ಲೆಯ ಚೌಡದಾನಪುರ ಅಭಿವೃದ್ಧಿಗೆ ನಾನು ಮಂತ್ರಿಯಾಗಿದ್ದಾಗ 5 ಕೋಟಿ ರೂ. ಕೊಟ್ಟಿದ್ದೇನೆ. ಸಪ್ತಖಾತೆ ಸಚಿವರಾಗಿದ್ದ ಕೋಲಿ ಸಮಾಜದ ನಾಯಕ ಎಂದು ಕರೆಯಿಸಿಕೊಳ್ಳುವ ಚಿತ್ತಾಪುರದ ಈ ಹಿಂದಿನ ಶಾಸಕರಿಗೇಕೆ ಇದು ಸಾಧ್ಯವಾಗಲಿಲ್ಲ ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್‌ ಖರ್ಗೆ ಚಿಂಚನಸೂರ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ಹಳಕರ್ಟಿ ಗ್ರಾಮದಲ್ಲಿ ಸ್ಥಾಪಿಸಲಾದ ನಿಜರಣ ಅಂಬಿಗರ ಚೌಡಯ್ಯನವರ ಅಮೃತ ಶಿಲಾಪ್ರತಿಮೆ ಲೋರ್ಕಾಣೆಗೊಳಿಸಿ ಅವರು ಮಾತನಾಡಿದರು. ಚಿತ್ತಾಪುರದಲ್ಲಿ ಕೋಲಿ ಸಮಾಜ ಭವನಕ್ಕೆ ಒಂದು ಕೋಟಿ ರೂ. ಅನುದಾನ ನೀಡಿದ್ದೇನೆ. ಕನಕ ಭವನ, ಬಸವ ಭವನ, ಅಂಬೇಡ್ಕರ್‌ ಭವನ, ಜಗಜೀವನರಾಮ ಭವನಗಳ ನಿರ್ಮಾಣ ಸೇರಿದಂತೆ ಮಾಣಿಕೇಶ್ವರಿ ಕ್ಷೇತ್ರಕ್ಕೂ ಅನುದಾನ ಕೊಟ್ಟಿದ್ದೇನೆ. ಅಲ್ಲದೇ ಕೋಲಿ ಸಮಾಜದ ಅನೇಕ ನಾಯಕರಿಗೆ ರಾಜಕೀಯ ಅಧಿಕಾರದ ಸ್ಥಾನಮಾನ ಕಲ್ಪಿಸಲಾಗಿದೆ. ಹೇಳಿದ್ದನ್ನು ಮಾಡಿದ್ದೇವೆ. ಮಾಡಲಾಗದ್ದನ್ನು ಮಾಡುತ್ತೇವೆ ಎಂದು ಸುಳ್ಳು ಹೇಳಿ ಮನನೋಯಿಸುವುದು ನಮಗೆ ಸರಿಕಾಣಿಸುವುದಿಲ್ಲ ಎಂದರು.

ಕೋಲಿ ಸಮಾಜಕ್ಕೆ ಡಾ| ಮಲ್ಲಿಕಾರ್ಜುನ ಖರ್ಗೆ, ಡಾ| ಶರಣಪ್ರಕಾಶ ಪಾಟೀಲ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಚುನಾವಣೆಯಲ್ಲಿ ಇಂಥ ಪ್ರಾಮಾಣಿಕ ನಾಯಕರ ಸೋಲಾಗಿದ್ದು ನೋವಿನ ಸಂಗತಿ ಎಂದು ಅತೃಪ್ತಿ ಹೊರಹಾಕಿದರು.

ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿ, ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸಬೇಕು ಎಂದು ಎರಡು ಸಲ ಕೇಂದ್ರಕ್ಕೆ ಸಲ್ಲಿಸಲಾದ ಕಡತ ತಿರಸ್ಕಾರಗೊಂಡಿದೆ. ಐದು ವರ್ಷ ಆಡಳಿತ ನಡೆಸಿ ಈಗ ಪುನಃ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಸಕರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಎಸ್‌ಟಿ ಮಾನ್ಯತೆಗಾಗಿ ಕುರುಬ ಮತ್ತು ಕೋಲಿ ಸಮಾಜದ ಜನರು ಕೇಂದ್ರ ಸರಕಾರದ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಚಿಂಚನಸೂರ ನೇಣಿನ ಮಾತಿಗೆ ಕಮಕನೂರ ತಿರುಗೇಟು: ಬಿಜೆಪಿ ಸರಕಾರ ಅ ಧಿಕಾರಕ್ಕೆ ಬಂದ 15 ದಿನಗಳಲೊಳಗಾಗಿ ಕೋಲಿ ಸಮಾಜ ಎಸ್‌ ಟಿಗೆ ಸೇರುವುದು ಶತಸಿದ್ಧ. ಒಂದು ವೇಳೆ ಎಸ್‌ ಟಿಗೆ ಸೇರ್ಪಡೆಯಾಗದಿದ್ದರೆ ಸ್ವತಃ ನಾನೇ ನೇಣು ಬಿಗುದುಕೊಳ್ಳುತ್ತೇನೆ ಎಂದು ವಾಗ್ಧಾನ ಮಾಡುವ ಮೂಲಕ ಚುನಾವಣೆ ಸಂದರ್ಭದಲ್ಲಿ ಪ್ರಚಾರಗಿಟ್ಟಿಸಿಕೊಂಡ ಬಾಬುರಾವ್‌ ಚಿಂಚನಸೂರ,
ಈಗ ಮೌನವಾಗಿದ್ದಾರೆ.

Advertisement

ಸರಕಾರ ಬಂದು ತಿಂಗಳು ಉರುಳಿದರೂ ಎಸ್‌ಟಿ ವಿಚಾರ ಮಾತನಾಡುತ್ತಿಲ್ಲ. ನೇಣು ಬಿಗಿದುಕೊಳ್ಳುವ ಮಾತನಾಡುವ ಮೂಲಕ ಕೋಲಿ ಸಮಾಜವನ್ನು ಭಾವನಾತ್ಮಕವಾಗಿ ಸೆಳೆದು ಮೋಸ ಮಾಡಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಚಿಂಚನಸೂರ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಕಾಂಗ್ರೆಸ್‌ನಲ್ಲಿದ್ದಾಗ ನನ್ನ ಎದೆ ಸೀಳಿದರೆ ಖರ್ಗೆ ಕಾಣಿಸುತ್ತಾರೆ ಎನ್ನುತ್ತಿದ್ದ ಬಾಬುರಾವ್‌ ಚಿಂಚನಸೂರ ಎದೆಯಲ್ಲೀಗ ಯಡಿಯೂರಪ್ಪ ಕಾಣಿಸುತ್ತಿದ್ದಾರಂತೆ. ಇವರ ಎಡಬಿಡಂಗಿತನದ ಹೇಳಿಕೆಗೆ ಸಮಾಜದ ಜನರು ಮರಳಾಗಬಾರದು ಎಂದರು.

ಹಾವೇರಿ ಅಂಬಿಗರ ಚೌಡಯ್ಯ ಗುರುಪೀಠದ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರ ಮನೆಯ ಜಗುಲಿಗಳ ಮೇಲೆ ದೇವರುಗಳ ಫೋಟೊಗಳ ಬದಲು ಚೌಡಯ್ಯನವರ ವಚನ ಸಾಹಿತ್ಯ ಪುಸ್ತಕವಿರಬೇಕು ಎಂದರು.  ಕಾಗಿನೆಲೆಕನಕಗುರು ಪೀಠದ ಶ್ರೀ ಸಿದ್ಧರಾಮಾನಂದಪುರಿ ಸ್ವಾಮೀಜಿ, ಮುಗಳನಾಗಾಂವ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಕಂಬಳೇಶ್ವರ ಮಠದ ಶ್ರೀ ಸೋಮಶೇಖರ
ಸ್ವಾಮೀಜಿ ಆರ್ಶೀವಚನ ನೀಡಿದರು.

ಹಳಕರ್ಟಿ ಮಠದ ಶ್ರೀ ಮುನೀಂದ್ರ ಸ್ವಾಮೀಜಿ, ಸಿಂಧಗಿ ಗುರುದೇವ ಆಶ್ರಮದ ಶ್ರೀ ಶಾಂತಗಂಗಾಧರ ಜಗದ್ಗುರು ಹಾಗೂ ಇತರ ಮಠಗಳ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹೆಮೂದ್‌ ಸಾಹೇಬ, ಕೋಲಿ ಸಮಾಜದ ಅಧ್ಯಕ್ಷ ಕರಣಪ್ಪ ಇಸಬಾ, ದತ್ತಾತ್ರೇಯ ಬುಕ್ಕಾ, ಮುಖಂಡರಾದ ಭೀಮಣ್ಣ ಸಾಲಿ, ವೀರಣ್ಣಗೌಡ ಪರಸರೆಡ್ಡಿ, ಜಗದೀಶ ಸಿಂಧೆ, ಶಿವಾನಂದ ಪಾಟೀಲ, ಜಗನಗೌಡ ಪಾಟೀಲ, ಅಬ್ದುಲ್‌ ಅಜೀಜಸೇಠ, ಶ್ರೀನಿವಾಸ ಸಗರ, ನಾಗಣ್ಣ ಮುಗುಟಿ, ಜುಮ್ಮಣ್ಣ ಪೂಜಾರಿ, ನಾಗೇಂದ್ರ ಜೈಗಂಗಾ, ಶಿವುರುದ್ರ ಭೀಣಿ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಗ್ರಾಮದಲ್ಲಿ ನಡೆದ ಚೌಡಯ್ಯ ಭಾವಚಿತ್ರ ಮೆರವಣಿಗೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next