ಮುಂಬಯಿ: ವಡಾಲದ ದ್ವಾರಕಾನಾಥ ಭವನದ ಶ್ರೀರಾಮ ಮಂದಿರದಲ್ಲಿ ರವಿವಾರ ಸತ್ಯ ವಿನಾಯಕ ವ್ರತ ಮತ್ತು ಧನ್ವಂತರಿ (ಮೋದಕ) ಹವನ ಧಾರ್ಮಿಕ ಕಾರ್ಯಕ್ರಮ ಜರಗಿತು. ಆ ಪ್ರಯುಕ್ತ ಬೆಳಗ್ಗೆ ದೇವತಾ ಪ್ರಾರ್ಥನೆ ಯೊಂದಿಗೆ ಧನ್ವಂತರಿ ಹವನ ನೆರವೇರಿಸಲ್ಪಟ್ಟು ಮಧ್ಯಾಹ್ನ ಪೂರ್ಣಾಹುತಿ, ಮಹಾ ಮಂಗಳಾರತಿ, ಪ್ರಸಾದ ವಿತರಣೆಯೊಂದಿಗೆ ಹವನ ಸಂಪನ್ನ ಗೊಂಡಿತು. ಮಂದಿರದ ಪ್ರಧಾನ ಅರ್ಚಕ ವೇದಮೂರ್ತಿ ಸುಧಾಮ ಅನಂತ ಭಟ್ ತಮ್ಮ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ, ಸಾಂಪ್ರದಾಯಿಕ ಪೂಜಾವಿಧಿಗಳನ್ನು ನೆರವೇರಿಸಿದರು.
ವೈದಿಕರಾದ ವೇದಮೂರ್ತಿ ಮೋಹನ್‌ದಾಸ ಆಚಾರ್ಯ, ವೇದಮೂರ್ತಿ ಅನಂತ್ ಭಟ್ ಮತ್ತು ವೇದಮೂರ್ತಿ ಗೋವಿಂದ ಆಚಾರ್ಯ ಪೂಜಾ ವಿಧಿ-ವಿಧಾನಗಳಲ್ಲಿ ಸಹಯೋಗವನ್ನಿತ್ತರು. ಜಿಎಸ್‌ಬಿ ಗಣೇಶೋತ್ಸವ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ನರಸಿಂಹ ಎನ್. ಪಾಲ್ ಮತ್ತು ಪದ್ಮ ನರಸಿಂಹ ಪಾಲ್ ದಂಪತಿ ಪೂಜೆಯ ಯಜಮಾನತ್ವ ವಹಿಸಿದ್ದರು.
ಈ ಪುಣ್ಯಾಹ ಕಾರ್ಯಕ್ರಮಗಳಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠ ಗೋವಾ ಇದರ ಮಠಾಧೀಶ, ಪರ್ತಗಾಳಿ ಜೀವೋತ್ತಮ ಮಠದ ಮಹಾಧಿಪತಿ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ್ ವಡೇರ್ ಸ್ವಾಮೀಜಿ ಹಾಗೂ ಪಟ್ಟಶಿಷ್ಯ ಶ್ರೀಮದ್ ವಿದ್ಯಾಧೀಶತೀರ್ಥ ಸ್ವಾಮೀಜಿ ಚಿತ್ತೆ çಸಿ ಶ್ರೀದೇವರಿಗೆ ಪೂಜೆ ನೆರವೇರಿಸಿ ಅನುಗ್ರಹಿಸಿದರು.
ಈ ಸಂದರ್ಭದಲ್ಲಿ ಶ್ರೀರಾಮ ಮಂದಿರ ಮುಂಬಯಿ ಸಮಿತಿ ಕಾರ್ಯಾಧ್ಯಕ್ಷ ಜಿ.ಎಸ್. ಭಟ್, ಕಾರ್ಯದರ್ಶಿ ಅಮೊಲ್ ವಿ. ಪೈ, ಕೋಶಾಧಿಕಾರಿ ಶಾಂತರಾಮ ಎ.ಭಟ್, ಜಿಎಸ್‌ಬಿ ಗಣೇಶೋತ್ಸವ ಉತ್ಸವ ಸಮಿತಿ ಕಾರ್ಯದರ್ಶಿ ಮುಕುಂದ್ ಕಾಮತ್, ಕೋಶಾಧಿಕಾರಿ ರಾಜೀವ್ ಶೆಣೈ, ಉಮೇಶ್ ಪೈ, ಗುರುದತ್ತ್ ನಾಯಕ್, ಮತ್ತಿತರ ಪದಾಧಿಕಾರಿಗಳು ನ್ಯಾಯವಾದಿ ಎಂ.ವಿ. ಕಿಣಿ, ಗೀತಾ ಆರ್. ಪೈ, ರಶ್ಮೀ ಸರನ್ ಸೇರಿದಂತೆ ರಾಮ ಸೇವಾಕರ್ತರು, ಮಹಿಳಾ ಮಂಡಳಿಯ ಸದಸ್ಯರು ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು. ನರಸಿಂಹ ಎನ್. ಪಾಲ್ ಸ್ವಾಗತಿಸಿದರು. ಶ್ರೀ ರಾಮ ಮಂದಿರ ವಡಾಲ ಮುಂಬಯಿ ಸಮಿತಿ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಡಿ. ಕಾಮತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಳಿಕ ಯತಿವರ್ಯರ ಪಾದಪೂಜೆ, ಸಂಗೀತ ಕಾರ್ಯಕ್ರಮ, ಮಂದಿರದಿಂದ ದಾದರ್ ಟಿಟಿ, ಪಾರ್ಸಿ ಕಾಲೋನಿ ಮೂಲಕ ಭವ್ಯ ಮೆರವಣಿಗೆಯೊಂದಿಗೆ ದಿಗ್ವಿಜಯೋತ್ಸವ ಆಚರಿಸಲಾಯಿತು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್