Advertisement
ಈ ಮೂರೂ ಸಾಹಿತ್ಯಗಳು ತೋರುವ ದಾರಿ ಸ್ವಲ್ಪ ಬೇರೆಯದಿರಬಹುದು ಆದರೆ ಗುರಿಯೊಂದೇ. ಆ ದಾರಿಯಲ್ಲಿ ಸಾಗಬೇಕಾದರೆ ಭಕ್ತಿ ಎಂಬ ದೀವಿಗೆ (ಬೆಳಕು ) ಹಿಡಿದುಕೊಂಡಿದ್ದರೆ ದಾರಿ ತಪ್ಪಲಾರೆವು ಎಂದು ಎಲ್ಲ ಸಾಹಿತ್ಯಗಳು ಹೇಳಿದಂತಾಯಿತು.
1. ಹೃದಯದಲ್ಲಿ ಭಕ್ತಿಯಿರಲಿ
2. ಎಲ್ಲೆಡೆಯಲ್ಲಿ, ಎಲ್ಲರಲ್ಲೂ ದೇವರು ಕಾಣಲಿ.
3. ನೀನು ಮಾಡುವ ಎಲ್ಲ ಕಾರ್ಯಗಳು ದೇವರಿಗೆ ಮಾಡುವ ಪ್ರಸಾದರಂತಿರಲಿ. ಚಿಕ್ಕಂದಿನಿಂದಲೂ ದೇವರಮೇಲೆ ತೋರಿಸುವ ಭಕ್ತಿಯ ಅನೇಕ ರೀತಿಯನ್ನು ನೋಡುತ್ತಲೇ ಬೆಳೆದಿದ್ದೇನೆ. ಅಂಥ ಸಂಪ್ರದಾಯಗಳಿಂದ ಪ್ರಭಾವಿತಳಾಗದಿದ್ದರೂ ಒಂಬತ್ತು ಹತ್ತನೇ ತರಗತಿಯಲ್ಲಿದ್ದಾಗ ಉಳಿದ ಸಹಪಾಠಿಗಳ ಪ್ರಭಾವದಿಂದ ಒಳ್ಳೆಯ ಅಂಕಗಳಿಗಾಗಿ, ಹರಕೆಯನ್ನೂ ಹೊತ್ತಿದ್ದೆ. ಹರಕೆಗಳಲ್ಲಿ ಹುರುಳಿಲ್ಲ ಎಂದು ತಿಳಿದಿದ್ದರೂ ಆಗ ಮನಸ್ಸನ್ನು ಆಳಿದ್ದು ಭಕ್ತಿ? ಭಯ!.
Related Articles
Advertisement
ಹತ್ತನೇ ತರಗತಿಯಲ್ಲಿದ್ದಾಗ ಸಂಗೀತ ಕಟ್ಟಿಯ ಮೊದಲನೇ ದಾಸರ ಪದಗಳು ಕ್ಯಾಸೆಟ್ ಕೇಳಿದಾಗ, ಅದರ ಸಾಹಿತ್ಯದಿಂದ ಬಹಳ ಪ್ರಭಾವಿತಳಾಗಿದ್ದೆ. ಶಿಶುನಾಳ ಶರೀಫರ ಹಾಡುಗಳ ಸಾಹಿತ್ಯವು ಒಳ್ಳೆಯ ಚುಯಿಂಗಮ್ ಆಗಿತ್ತು. ಅರ್ಥವಾಗದಿದ್ದರೂ ಅಗೆಯುವುದು ಒಂದು ಮಜಾ.ಅಂದಿನಿಂದ ಸಾಗಿಬಂದ ದಾರಿ ಹೀಗೆ ಎಷ್ಟೋ ದೂರ. ಆದರೂ ದಾಸ ಪದ, ತತ್ವಪದ, ವಚನಗಳಿಗೆ ನಮ್ಮನ್ನು ತೆರೆದುಕೊಂಡರೆ ಅವು ಈಗಲೂ ಎಲ್ಲೋ ಒಂದು ರೀತಿಯಲ್ಲಿ ಮನಸ್ಸನ್ನು ತಟ್ಟುತ್ತವೆ. ಹೃದಯವನ್ನು ಮುಟ್ಟುತ್ತವೆ. ಭಕ್ತಿ ಇದೊಂದು ಭಾವನೆ. ಈ ಭಕ್ತಿ ಹೃದಯದಲ್ಲಿ ಇದ್ದಷ್ಟು ಹೊತ್ತು ಮನುಷ್ಯ ವಿಧೇಯ, ಕೃತಜ್ಞ, ದಾನಿ, ಧರ್ಮ ಪಾಲಕ, ಸಜ್ಜನ. ತನ್ನ ಮನಸ್ಸಿನ ಸ್ಥಿತಿಯಲ್ಲಿ ಹಾಗೆಯೇ ಜೀವನದಲ್ಲಿ ಉನ್ನತಿಯನ್ನು ಸಾಧಿಸಲು ಭಕ್ತಿಯೂ ಒಂದು ಸಾಧನ(tool). ಅದಕ್ಕೆ ಈ ಭಕ್ತಿ ಸಾಧನ, ಬರೀ ದೈವ ಮುಖಿಯಾಗಿರದೆ ನಮ್ಮ ದಿನ ನಿತ್ಯದ ಪ್ರತಿಯೊಂದು ಕಾರ್ಯದಲ್ಲಿಯೂ ಮಾತಿನಲ್ಲಿಯೂ ಪ್ರಧಾನವಾಗಿರಬೇಕು. ದೇವರನ್ನು ಸುಪ್ರೀತಗೊಳಿಸಲು ಹಾಡಿದ ಈ ಸಾಹಿತ್ಯಗಳು ದೇವರನ್ನು ಹೊಗಳಿ ಸ್ತುತಿಸಲು ಕಲಿಸುತ್ತವೆ. ಆ ಸ್ಥಿತಪ್ರಜ್ಞ ದೇವರನ್ನು ತಂದೆ ತಾಯಿಯಾಗಿ ಕಂಡು ಗೌರವಿಸಿ, ಮಗುವಾಗಿ ಲಾಲಿಸಿ, ಸ್ನೇಹಿತನಂತೆ ಪ್ರೀತಿಸಿ, ಮನುಜ ರೂಪದಲ್ಲಿ ಇಳಿಸಿ ಆನಂದಿಸುತ್ತಾರೆ. ಇವೆಲ್ಲ ಮನುಜರಿಗೆ ಹೃದಯದಲ್ಲಿ ಭಕ್ತಿಯೆಂಬ ಒಳ್ಳೆಯ ಭಾವನೆಯಿಂದ, ಹೊಗಳಲು ಕಲಿಸುತ್ತದೆ.
ಕಾಣದ ದೇವರನ್ನು ಒಲಿಸುವ ಈ ಪರಿಯನ್ನು ಈ ಸ್ತುತಿಗಳಲ್ಲಿ ಕಲಿತು, ಮುಂದೆ, ಮನುಜರಲ್ಲಿ ದೇವರನ್ನು (ಒಳ್ಳೆಯದನ್ನು ಕಂಡು) ಹೊಗಳುವ ಆ ವಿದ್ಯೆಯನ್ನು ಉಪಯೋಗಿಸಿದರೆ ಈ ಜಗವೊಲಿಯದೇ !!!! ಅಲ್ಲಿಗೆ ಭಕ್ತಿಯ ಒಂದು ದೊಡ್ಡ ಭಾಗ ಪ್ರೀತಿಯಲ್ಲವೆ? ಪ್ರೀತಿಯ ತುರಿಯಾ ಅವಸ್ತೆಯೇ ಭಕ್ತಿಯೇ? ಸಿಂಪಲ್ಲಾಗಿ ಹೇಳಬೇಕು ಅಂದ್ರೆ:
ಶ್ರೀರಾಮನನ್ನು ಎಬ್ಬಿಸುವ ಸುಪ್ರಭಾತವೆಷ್ಟು ಮಧುರ?. ನಮ್ಮನ್ನು ಯಾರಾದರೂ ಹಾಗೆ ಎಬ್ಬಿಸಿದರೆ ದಿನವೆಲ್ಲ ಮಧುರ. ಇನ್ನೊಬ್ಬರನ್ನು ಅಷ್ಟು ಪ್ರೀತಿಯಿಂದ ಎಬ್ಬಿಸುವ ಭಕ್ತಿ ನಮ್ಮಲ್ಲಿದ್ದರೆ ಈ ಜೀವನವೇ ಮಧುರ. ದೇವ ಕೊಟ್ಟದ್ದನ್ನು ಕಂಡವರಿಲ್ಲವಾದರೂ ನಂಬುವೆನು ಅವನನ್ನು ಒಂದಿನಿತು ಬಿಡದಂತೆ. ಆ ನಂಬಿಕೆಯನ್ನು ಪರರಲ್ಲಿ ಇಟ್ಟು ನೋಡಾ, ನನ್ನನ್ನು ಸೃಷ್ಟಿಸಿದ ಆ ದೇವರು, ಅವನನ್ನೂ ಸೃಷ್ಟಿಸಿಹನು ಕಣ್ತೆರೆದು ನೋಡಾ. ನಾನು ನೀನೆಲ್ಲವೂ ಅವನೇ ಎಂದೊಮ್ಮೆ ತಿಳಿದು ನೋಡಾ… *ವಂದನಾ ಹೆಗ್ಡೆ